
ಅಂಕೋಲಾ: ತಾಲೂಕಿನ ಅಲಗೇರಿ ಭಾಗದಲ್ಲಿ ನಿರ್ಮಾಣ ಆಗಲಿರುವ ವಿಮಾನ ನಿಲ್ದಾಣ ಯೋಜನೆಯಿಂದ ನಿರಾಶ್ರಿತರಾಗುವ ಅಲಗೇರಿ, ಭಾವಿಕೇರಿ ಮತ್ತು ಬೆಲೇಕೇರಿ ಭಾಗಗಳ ಜನರ ಬೇಡಿಕೆಗಳನ್ನು ಈಡೇರಿಸುವಂತೆ ನಿರಾಶ್ರಿತರ ಪರವಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ನೀಡಲಾಯಿತು.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿಗೆ ಭೇಟಿ ನೀಡಿ ಮಳೆ ಹಾನಿ ಪರಿಶೀಲನೆ ನಡೆಸಿ, ಪುನಃ ಕಾರವಾರ ಮಾರ್ಗವಾಗಿ ಗೋವಾಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ದಾರಿ ಮಧ್ಯೆ ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮುಖ್ಯಮಂತ್ರಿ ಬಂದಿದ್ದ ಕಾರ್ ಹಾಗೂ ಬೆಂಗಾವಲು ವಾಹನಗಳು ಕೆಲ ಹೊತ್ತು ಟೋಲ್ ಬಳಿ ನಿಲ್ಲುಂ ವಂತಾಯಿತು. ಸಮಯದ ಅಭಾವ ಇಲ್ಲವೇ ಇನ್ನಿತರೇ ಕಾರಣಗಳಿಂದ ಸಿ.ಎಂ ಬಸವರಾಜ್ ಬೊಮ್ಮಾಯಿ ಕಾರ್ ನಿಂದ ಇಳಿಯದೇ , ಕುಳಿತಲ್ಲಿಂದಲೇ ಸ್ಥಳೀಯರ ಸಮಸ್ಯೆ ಆಲಿಸಿ, ಮನವಿ ಸ್ವೀಕರಿಸಿ, ಪಕ್ಷದ ಕಾರ್ಯಕರ್ತರನ್ನು ಮಾತಾಡಿಸಿ ಪ್ರಯಾಣ ಮುಂದುವರೆಸಿದರು.

ವಿಮಾನ ನಿಲ್ದಾಣ ಯೋಜನೆಗೆ ಸರ್ವಸ್ವವನ್ನೂ ಕಳೆದುಕೊಳ್ಳುವ ನಿರಾಶ್ರಿತರ ಪರಿಹಾರ ಧನ ಸೇರಿದಂತೆ 16 ಬೇಡಿಕೆಗಳನ್ನು ಈಡೇರಿಸುವಂತೆ ಸ್ಥಳೀಯ ನಿರಾಶ್ರಿತರ ಪರವಾಗಿ ಕೆಲವು ಪ್ರಮುಖರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಶಾಸಕಿ ರೂಪಾಲಿ ನಾಯ್ಕ, ಸಚಿವ ಶಿವರಾಂ ಹೆಬ್ಬಾರ ,. ಜಿಲ್ಲಾಧಿಕಾರಿ ಮುಲೈ ಮುಗಿಲನ್, ಕುಮಟಾ ವಿಭಾಗದ ನೂತನ ಎ ಸಿ ರಾಘವೇಂದ್ರ, ಅಂಕೋಲಾ ತಹಶೀಲ್ದಾರ ಉದಯ ಕುಂಬಾರ,ಎಸ್ಪಿ ಸುಮನ್ ಡಿ ಪೆನ್ನೇಕರ,ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ ಹಾಜರಿದ್ದರು.
ಸಿಪಿಐ ಸಂತೋಷ್ ಶೆಟ್ಟಿ, ಪಿಎಸ್ಐಗಳಾದ ಪ್ರವೀಣ್ ಕುಮಾರ್,,ಪ್ರೇಮನಗೌಡ ಪಾಟೀಲ್,ಮಹಾಂತೇಶ್ ವಾಲ್ಮೀಕಿ,ಸಿದ್ದು ಗುಡಿ,ಮತ್ತಿತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಂದೋಬಸ್ತ ನೆರವೇರಿಸಿದರು. ಟೋಲ್ ಸಿಬ್ಬಂದಿಗಳು ಸಹಕರಿಸಿದರು.ಅಂಕೋಲಾ ತಾಲೂಕಿನ ಬಿಜೆಪಿ ಪಕ್ಷದ ಹಿರಿ-ಕಿರಿಯ ಮುಖಂಡರು,ಕಾರ್ಯಕರ್ತರು, ಸಾರ್ವಜನಿಕರು, ಇತರರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ










