ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನಲೆ:ವಿಶೇಷ ಬೈಕ್ ರ್ಯಾಲಿ

ಸ್ವಾತಂತ್ರ್ಯ ಯೋಧ ವೆಂಕಣ್ಣ ನಾಯಕ, ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ ಅವರ ಮನೆಗೆ ತೆರಳಿ ಸನ್ಮಾನ

ಅಂಕೋಲಾ: ಆಜಾದಿ ಕಾ ಅಮೃತ ಮಹೋತ್ಸವ ದ ಅಂಗವಾಗಿ ಭಾರತೀಯ ತಟರಕ್ಷಕ ಪಡೆಯವರು ಜಿಲ್ಲಾ ಕೇಂದ್ರ ಕಾರವಾರದಿಂದ ಹೊರಟು, ವಿಶೇಷ ಬೈಕ್ ರ್ಯಾಲಿ ನಡೆಸಿ ಸ್ವಾತಂತ್ರ್ಯ ಯೋಧ ಅಂಕೋಲಾದ ವೆಂಕಣ್ಣ ನಾಯಕ, ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭಾರತೀಯ ತಟರಕ್ಷಕ ಪಡೆಯ ಕಮಾಂಡರ ಮತ್ತು‌ ಯೋಧರು ಮಂಗಳವಾರ ಜಿಲ್ಲಾ ಕೇಂದ್ರ ಕಾರವಾರದಿಂದ ಬೈಕ್ ರ್ಯಾಲಿ ಕೈಗೊಂಡು ರಾ.ಹೆ 66 ರ ಮಾರ್ಗವಾಗಿ ಅಂಕೋಲಾ ತಾಲೂಕಿನ ಬೆಲೇಕೇರಿ ಕ್ರಾಸ್ ಬಳಿ,ಸ್ಥಳೀಯ ಕರಾವಳಿ ಕಾವಲು ಪಡೆಯವರ ಸಹಯೋಗದೊಂದಿಗೆ ಆಕರ್ಷಕ ಜಾಥಾ ಕೈಗೊಂಡರು

ಪಟ್ಟಣದ ಪಿ.ಎಂ.ಹೈಸ್ಕೂಲಿನ ಬಳಿ ರ್ಯಾಲಿ ತಂಡ ಬರುತ್ತಿದ್ದಂತೆ ಇಲ್ಲಿನ ಎನ್.ಸಿ.ಸಿ ಘಟಕದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಎನ್.ಸಿ.ಸಿ ಕಮಾಂಡರ ಜಿ.ಆರ್.ತಾಂಡೇಲ ಮತ್ತು ಎನ್.ಸಿ.ಸಿ ಕ್ಯಾಡೇಟಗಳು ತಟರಕ್ಷಕ ಪಡೆಯ ತಂಡಕ್ಕೆ ಪುಷ್ಪ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಪಿ.ಎಮ್.ಪ್ರೌಢಶಾಲೆಯ ಶೀಲಾ ಬಂಟ ಸೇರಿದಂತೆ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತಿರಂಗಾ ಧ್ವಜವನ್ನು ಮೇಲೆತ್ತಿ ತೋರಿಸುತ್ತಾ ದೇಶಾಭಿಮಾನದ ಸಂದೇಶ ಸಾರುತ್ತ ರ್ಯಾಲಿ ಮುಂದೆ ಹೊರಟಿತು.

ವೆಂಕಣ್ಣ ಬೊಮ್ಮಯ್ಯ ನಾಯಕರಿಗೆ ತಟರಕ್ಷಕ ಪಡೆಯಿಂದ ಸನ್ಮಾನ:ಬಾಸಗೋಡ ಮಾರ್ಗವಾಗಿ ಹೊರಟ ಬೈಕ್ ರ್ಯಾಲಿ ಸೂರ್ವೆಗೆ ತೆರಳಿ ಅಲ್ಲಿ ನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ವೆಂಕಣ್ಣ ಬೊಮ್ಮಯ್ಯ ನಾಯಕ ಮತ್ತು ಪತ್ನಿ ಪಾರ್ವತಿ ದಂಪತಿಗಳನ್ನು ಶಾಲು ಹೊದಿಸಿ, ಭಾರತೀಯ ತಟರಕ್ಷಕ ಪಡೆಯ ವತಿಯಿಂದ ವಿಶೇಷ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಭಾರತೀಯ ತಟರಕ್ಷಕ ಪಡೆಯ ಕಮಾಂಡರ ಸುರೇಶ ಕುರಪ್ ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಉತ್ತರ ಕನ್ನಡ ಅದರಲ್ಲೂ ಅಂಕೋಲಾದ ಕೊಡುಗೆ ಅಪಾರವಾಗಿದೆ. ಆ ಸಮಯದಲ್ಲಿ ಇಲ್ಲಿನ ಜನರ ದೇಶಭಕ್ತಿ ಇಂದಿಗೂ ಮಾದರಿಯಾಗಿದೆ. ಸ್ವಾತಂತ್ರ್ಯದ ಹೋರಾಟದ ವಾಸ್ತವಿಕತೆಯನ್ನು ಕಣ್ಣಾರೆ ಕಂಡ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೆಂಕಣ್ಣನವರನ್ನು ಕಾಣುವ ಭಾಗ್ಯ ನಮ್ಮದಾಗಿದೆ. ಅವರನ್ನು ಸನ್ಮಾನಿಸಿರುವದು ತುಂಬ ಹೆಮ್ಮೆಯಾಗಿದೆ ಎಂದರು.

ಕಾರವಾರದ ಯೂನಿಟ್ ಕಮಾಂಡರ ಮಂಜುನಾಥ ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಇಲ್ಲಿನ ಪರಿಸರದ ಎಲ್ಲರೂ ತೊಡಗಿಕೊಂಡಿರುವದನ್ನು ನಾವೆಲ್ಲ ಓದಿದ್ದೇವೆ. ಈಗ ಈ ನೆಲದಲ್ಲೆ ಬಂದು ಹಿರಿಯ ಹೋರಾಟಗಾರರನ್ನು ಸನ್ಮಾನಿಸಿರುವದು ಖುಷಿಯಾಗಿದೆ ಎಂದರು ಹಾಗೂ ತಮ್ಮ ತಂಡದವರಿಗೆ ಕರನಿರಾಕರಣೆ ಮತ್ತು ಉಪ್ಪಿನ ಸತ್ಯಾಗ್ರಹ ಚಳುವಳಿಉಯ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಎನ್.ಸಿ.ಸಿ ಕಮಾಂಡರ ದೀನಾನಾಥ ಭೋಸಲೆ, ಯೋಧರು, ಕರಾವಳಿ ಕಾವಲು ಪಡೆಯ ಅಧಿಕಾರಿ ಸುರೇಶ ನಾಯಕ, ವೆಂಕಣ್ಣ ನಾಯಕರ ಕುಟುಂಬ ವರ್ಗದವರು ಉಪಸ್ಥಿತರಿದ್ದರು. ಸುಭಾಶ ಕಾರೇಬೈಲ್ ಸ್ವಾಗತಿಸಿದರು, ರಾಜೇಶ ನಾಯಕ ಸೂರ್ವೆ ವಂದಿಸಿದರು.
ನಂತರ ಬಡಗೇರಿಗೆ ತೆರಳಿದ ತಂಡವು ಪದ್ಮಶ್ರೀ ಸುಕ್ರೀ ಗೌಡ ಅವರನ್ನು ಅವರ ಮನೆಯಲ್ಲಿ ಸನ್ಮಾನಿಸಿದರು ಹಾಗೂ ರಾಷ್ಟ್ರಧ್ವಜ ನೀಡಿ ಗೌರವಿಸಿದರು.

ಸುಕ್ರೀ ಗೌಡರ ಜಾನಪದ ಹಾಡುಗಾರಿಕೆ ಮತ್ತು ಅವರ ಜೀವನದ ಬಗ್ಗೆ ಕಮಾಂಡರ ಮಂಜುನಾಥ ಹೆಮ್ಮೆಯಿಂದ ವಿವರಿಸಿದರು. ಹಾಗೂ ಇಂತಹ ಬುಡಕಟ್ಟು ಕಲಾವಿದರ ಕಲೆಯನ್ನು ಮುಂದಿನವರು ಉಳಿಸಿಕೊಂಡು ಹೋಗಬೇಕು ಎಂದರು. ಸನ್ಮಾನ ಸ್ವೀಕರಿಸಿ ಸಂತೋಷ ವ್ಯಕ್ತಪಡಿಸಿದ ಸುಕ್ರೀ ಗೌಡ ದೇಶದ ರಕ್ಷಣೆಯನ್ನು ಮಾಡುತ್ತಿರುವ ಯೋಧರು ತಮ್ಮ ಮನೆಗೆ ಬಂದು ರಾಷ್ಟ್ರಧ್ವಜ‌ ನೀಡಿ ಗೌರವಿಸಿ ಸನ್ಮಾನಿಸಿರುವದು ತನ್ನ ಜೀವಮಾನದ ಅತ್ಯಮೂಲ್ಯ ಕ್ಷಣ ಎಂದರು.

ಯೋಧರ ಜೊತೆ ಕ್ಷಣ ಕಳೆದ ಆನಂದದಿಂದ ಸುಜ್ರೀ ಗೌಡ ಜಾನಪದ ಹಾಡೊಂದನ್ನು ಹಾಡಿ ಯೋಧರಿಗೆ ಸಮರ್ಪಿಸಿದರು. ಈ ಹಾಡಿಗೆ ಅವರ ಸಹ ಹಾಡುಗಾರ್ತಿಯರೂ ದನಿಗೂಡಿಸಿದರು. ಅನಾರೋಗ್ಯದ ನಡುವೆಯೂ ಯೋಧರ ಜೊತೆ ಲವಲವಿಕೆಯಿಂದ ಮಾತನಾಡಿದ ಸುಕ್ತಜ್ಜಿ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ತಟರಕ್ಷಕ ಪಡೆಯ ಸಬೊರ್ಡಿನೇಟ್ ಆಫೀಸರ್ ಜಿಕೆ ರೈ ಮತ್ತು ಸುಕ್ರೀಗೌಡರ ಕುಟುಂಬ ಸದಸ್ಯರು ಪ್ರಮುಖರಾದ ಮಹೇಶ ಗೌಡ, ಇತರರಿದ್ದರು. ಅಮೃತ ಮಹೋತ್ಸವ ವರ್ಷಾಚರಣೆ ಸಂಭ್ರಮ ಅಂಕೋಲ ತಾಲೂಕಿನಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು ಸ್ವತಂತ್ರದ ಪುಣ್ಯಭೂಮಿಯಲ್ಲಿ ಎಲ್ಲಡೆಯಿಂದ ದೇಶಾಭಿಮಾನ ಕಂಡುಬರುತ್ತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ .

Exit mobile version