ಅಂಕೋಲಾ: ತಾಲೂಕಿನ ಡೋಂಗ್ರಿ ಗ್ರಾಪಂ ವ್ಯಾಪ್ತಿಯ ಹಳವಳ್ಳಿ ಸಮೀಪದ ಹಸೆಹಳ್ಳದಲ್ಲಿ ಮಹಿಳೆಯೊರ್ವರು ಆಕಸ್ಮಿಕವಾಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮಾರನೆ ದಿನ ಹಸೆ ಹಳ್ಳದ ತಿಮ್ಮನ ಗುಂಡಿ ಬಳಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಬುಡಕಟ್ಟು ಸಿದ್ಧಿ ಜನಾಂಗದ ಬಾಳೇ ಗದ್ದೆ ನಿವಾಸಿ ಕಮಲಾ ಗಣಪತಿ ಸಿದ್ದಿ (50) ಮೃತ ದುರ್ದೈವಿಯೆಂದು ಗುರುತಿಸಲಾಗಿದೆ.
ಮಂಗಳವಾರ ಸಾಯಂಕಾಲದ ವೇಳೆ ಆಕಸ್ಮಿಕವಾಗಿ ಇವಳು ನೀರಿನ ಸೆಳೆತಕ್ಕೆ ಸಿಲುಕಿ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದಳು ಎನ್ನಲಾಗಿದ್ದು ಪ್ರತಿಕೂಲ ಹವಾಮಾನ ಮತ್ತು ಸಂಜೆಯ ಕತ್ತಲಾವರಿಸಿದ್ದರಿಂದ ಮಹಿಳೆಯ ಶೋಧ ಕಾರ್ಯಕ್ಕೆ ತೊಡಕಾಗಿತ್ತು ಎನ್ನಲಾಗಿದ್ದು, ಬುಧವಾರ ಬೆಳಿಗ್ಗೆ ಪೋಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳೀಯರ ಸಹಕಾರ ಪಡೆದು ಶೋಧ ಕಾರ್ಯ ಮುಂದುವರೆಸಿದ್ದರು. ಪಿ ಎಸ್ ಐ ಪ್ರವೀಣಕುಮಾರ ಸ್ಥಳದಲ್ಲಿ ಹಾಜರಿದ್ದರು.ಸಿಬ್ಬಂದಿ ಶೇಖರ್, ರಮೇಶ, ಜಗದೀಶ, ಸತೀಶ್, ಶ್ರೀಕಾಂತ ಇತರರಿದ್ದರು,ಅಗ್ನಿಶಾಮಕ ಠಾಣಾಧಿಕಾರಿ ಉಮೇಶ ನಾಯ್ಕ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕೇಶವ ಸಿದ್ದಿ, ವಿನಯ ಹೆಗಡೆ, ಜುಮ್ಮಾ ಸಿದ್ದಿ, ಉಲ್ಲಾಸ ನಾಯ್ಕ, ರೇಣುಕಾ ಸಿದ್ಧಿ, ಹಾಗೂ ಸ್ಥಳೀಯರೇ ಕರು ವಿಶೇಷವಾಗಿ ಸಹಕರಿಸಿದರು. ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ, ರತನ ನಾಯ್ಕ, ಪ್ರಕಾಶ ,ಲಲಿತಾ ಸಿದ್ಧಿ ಮತ್ತಿತರರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ನೆರವಾದರು. ಸಿ ಪಿ ಐ ಸಂತೋಷ ಶೆಟ್ಟಿ ಘಟನಾ ಸ್ಥಳ ಪರಿಶೀಲಿಸಿದರು. ಕಂದಾಯ ಇಲಾಖೆಯ ಗಿರೀಶ್ ಜಾಂಬಾವಳಿಕರ, ರಾಘವೇಂದ್ರ ಜನ್ನು, ಭಾರ್ಗವ ನಾಯಕ ಸ್ಥಳ ಪಂಚನಾಮೆ ನಡೆಸಿದರು. ಘಟನೆ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.