ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಕಂದಕ: ಬಾಯ್ತೆರೆದು ಅಪಾಯಕ್ಕೆ ಕಾದಿರುವ ರಸ್ತೆ: ವಾಹನ ಸವಾರರಿಗೆ ಎಚ್ಚರಿಕೆ
ತುರ್ತು ಅಗತ್ಯ ಕ್ರಮಕ್ಕೆ ಮುಂದಾದ ಅಧಿಕಾರಿಗಳು
ಅಂಕೋಲಾ : ರಾಷ್ಟ್ರೀಯ ಹೆದ್ದಾರಿಯಲ್ಲಿ 63 ರ ಅಂಕೋಲಾ – ಹುಬ್ಬಳ್ಳಿ ಮಾರ್ಗ ಮಧ್ಯೆ ಅಂಕೋಲಾ ತಾಲೂಕಿನ ಕಂಚಿನ ಬಾಗಿಲ ಹತ್ತಿರ ಕಿರು ಸೇತುವೆ ಅಂಚಿನ ರಸ್ತೆ ಕುಸಿದು ಕಂದಕ ಉಂಟಾಗಿ ಅಪಾಯಕಾರಿ ರೀತಿಯಲ್ಲಿ ಬಾಯ್ತೆರೆದು ಕೂತಿದೆ. ಪ್ರತಿದಿನ ಈ ಹೆದ್ದಾರಿಯಲ್ಲಿ ಅಂದಾಜು 18000 ಹೆಚ್ಚು ವಾಹನಗಳು ಓಡಾಡಿಕೊಂಡಿರುತ್ತವೆ ಎನ್ನಲಾಗಿದ್ದು, ಹೆದ್ದಾರಿ ಕುಸಿತದ ವೇಳೆ ಅದೃಷ್ಟವಶಾತ್ ಯಾವುದೇ ವಾಹನಗಳು ಸಿಲುಕಿಕೊಂಡಿಲ್ಲ. ಸುದ್ದಿ ತಿಳಿದ ತಕ್ಷಣ ERSS 112 ತುರ್ತು ವಾಹನ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕರ್ತವ್ಯ ನಿರ್ವಹಿಸಿದರು.
ತಹಶೀಲ್ದಾರ್ ಉದಯ ಕುಂಬಾರ ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ರವಾನಿಸಿ,ಸಂಚಾರಕ್ಕೆ ತೊಡಕಾಗದಂತೆ ಕಾರ್ಯನಿರ್ವಸಲು ಸೂಚಿಸಿದರು. ಸಿಪಿಐ ಸಂತೋಷ ಶೆಟ್ಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಘಟನಾ ಸ್ಥಳದ ಆಸು ಪಾಸಿನಲ್ಲಿ ವಾಹನಗಳ ಸಂಚಾರ ನಿಯಂತ್ರಣ, ಮತ್ತು ಸುಗಮ ಸಂಚಾರ ವ್ಯವಸ್ಥೆಗೆ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಿರಿಯ ಅಭಿಯಂತರ ಪ್ರಶಾಂತ . ಕೆ. ನಾಯ್ಕ,ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೆದ್ದಾರಿ ಕುಸಿತದ ಪ್ರದೇಶದಲ್ಲಿ ಪೋಲೀಸ್ ಇಲಾಖೆ ಸಹಯೋಗಲ್ಲಿ ಬ್ಯಾರಿಕೇಡ್ ಹಾಕಿ ವಾಹನ ಸಂಚಾರ ನಿರ್ಭಂಧಿಸಿ, ಎಚ್ಚರಿಕೆ ಪಟ್ಟಿ ಹಾಗೂ ಸೂಚನಾ ಫಲಕ ಅಳವಡಿಸುವುದು, ಮತ್ತಿತರ ಸುರಕ್ಷತಾ ಕ್ರಮಗಳನ್ನು ಕೈಗೊಂಡರಲ್ಲದೇ ಕುಸಿತ ಹೆಚ್ಚದಂತೆ ಕೈಗೊಳ್ಳಬೇಕಾದ ಮುಂಜಾಗ್ರತೆ ಮತ್ತು,ಹೆದ್ದಾರಿ ಸಂಚಾರಕ್ಕೆ ತೊಡಕಾಗದಂತೆ ಕೈಗೊಳ್ಳಬೇಕಾದ ಅಗತ್ಯ ತುರ್ತು ಕ್ರಮಗಳ ಕುರಿತು ಕಾರ್ಯ ತತ್ಪರರಾದರು.
ಭಾರೀ ಗಾತ್ರದ ವಾಹನಗಳ ಓಡಾಡ ಹೆಚ್ಚಿರುವುದು, ಸುರಿಯುತ್ತಿರುವ ಮಳೆ, ಹೆದ್ದಾರಿ ಮಧ್ಯದ ಹೊಂಡ ತಗ್ಗುಗಳು ಮತ್ತಿತರ ಕಾರಣಗಳಿಂದ ಸಂಚಾರಕ್ಕೆ ವ್ಯತ್ಯಯವಾಗುವ ಸಾಧ್ಯತೆ ಇರುವುದರಿಂದ, ಯಾವುದೇ ಅಪಾಯಕ್ಕೆ ಒಳಗಾಗದಂತೆ ಹೆದ್ದಾರಿ ವಾಹನ ಸವಾರರು ಈ ಭಾಗದಲ್ಲಿ ಜಾಗರೂಕವಾಗಿ ವಾಹನ ಚಲಾಯಿಸಬೇಕಾಗಿದೆ. ಪಿ ಎಸ್ ಐ ಪ್ರವೀಣ ಕುಮಾರ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು ಸುಗಮ ಸಂಚಾರಕ್ಕೆ ಕರ್ತವ್ಯ ನಿರ್ವಹಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ