ಪೊಲೀಸರು ಕಾರು ನಿಲ್ಲಿಸುವಂತೆ ಸೂಚಿಸಿದಾಗ ಓಡಿಹೋದ ಚಾಲಕ: 27 ಚೀಲದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸಾರಾಯಿ ವಶಕ್ಕೆ
ಕಾರವಾರ: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗೋವಾ ಸರಾಯಿಯನ್ನು ಜಿಲ್ಲಾ ಪೊಲೀಸರ ವಿಶೇಷ ತಂಡ ಕಾರು ಸಮೇತ ವಶಪಡಿಸಿಕೊಂಡ ಘಟನೆ ಕಾರವಾರದ ದೇವಭಾಗ ಕ್ರಾಸಿನಲ್ಲಿ ನಡೆದಿದೆ. ರಾ.ಹೆ. 66 ರಲ್ಲಿ ಗೋವಾ ಕಡೆಯಿಂದ ಕಾರವಾರ ಕಡೆ ಜಿ.ಎ08 ಕೆ 6510 ನೋಂದಣಿ ಸಂಖ್ಯೆಯ ಹುಂಡೈ ವೆರ್ನಾ ಕಾರಿನಲ್ಲಿ ಗೋವಾ ರಾಜ್ಯದ ಸರಾಯಿ ಸಾಗಾಟ ಮಾಡಲಾಗುತ್ತಿತ್ತು.
ಸದಾಶಿವಘಡದ ದೇವಭಾಗ ಕ್ರಾಸಿನಲ್ಲಿ ಮಧ್ಯರಾತ್ರಿಯಲ್ಲಿ ಪೊಲೀಸರು ಕಾರು ನಿಲ್ಲಿಸುವಂತೆ ಸೂಚಿಸಿದಾಗ ಚಾಲಕ ದೂರದಲ್ಲೇ ಕಾರು ನಿಲ್ಲಿಸಿ ಇಳಿದು ಓಡಿ ಹೋಗಿದ್ದು ಕಾರಿನಲ್ಲಿದ್ದ ಸುಮಾರು 27 ಪಾಲಿಥಿನ್ ಚೀಲದಲ್ಲಿದ್ದ 1.5 ಲಕ್ಷ ಮೌಲ್ಯದ 770 ಲೀಟರ್ ಸರಾಯಿ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಸಾಗಾಟಕ್ಕೆ ಬಳಸಿದ ಕಾರಿನ ಮೌಲ್ಯ 5 ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸ್ ವಿಶೇಷ ವಿಭಾಗದ ಪಿ.ಎಸ್. ಐ ಪ್ರೇಮನಗೌಡ ಪಾಟೀಲ್, ಸಿಬ್ಬಂದಿಗಳಾದ ರಾಘವೇಂದ್ರ, ಭಗವಾನ್ ಗಾಂವಕರ್, ಸಂತೋಷಕುಮಾರ, ಮಹಾದೇವ ಸಿದ್ಧಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪಿ ಎಸ್ ಐ ಪ್ರೇಮನಗೌಡ ಪಾಟೀಲ್ ನೇತೃತ್ವದ ತಂಡ ಈ ಹಿಂದೆಯೂ ದೊಡ್ಡ ಕಂಟೆನರ್ ವಾಹನದಲ್ಲಿ ತುಂಬಿಸಾಗಿಸುತ್ತಿದ್ದ ಕಾಲು ಕೋಟಿಗೂ ಅಧಿಕ ಮೌಲ್ಯದ ಗೋವಾ ಸರಾಯಿ ಸಾಗಾಟ ಜಾಲವನ್ನು ಪತ್ತೆ ಹಚ್ಚಿ ,ಪ್ರಕರಣ ದಾಖಲಿಸಿಕೊಳ್ಳುವುದರ ಮೂಲಕ ಪ್ರಶಂಸೆಗೆ ಪಾತ್ರವಾಗಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ