ಅಂಕೋಲಾ: ಈ ಹಿಂದೆ ಅಂಬುಲೆನ್ಸ್ ಅಪಘಾತದಿಂದ ಸುದ್ದಿಯಾಗಿದ್ದ ಬೈಂದೂರು ವ್ಯಾಪ್ತಿಯ ಶಿರೂರು ಟೋಲ್ ಗೇಟ್ ಮತ್ತೆ ಸುದ್ದಿ ಆಗುವಂತಾಗಿದೆ. ಟೋಲ್ ಗೇಟ್ ಬಳಿ ನಿಲ್ಲಿಸಲಾಗಿದ್ದ ಹೊಸ ಲಾರಿಯ, 5 ಟಯರ್ ಗಳನ್ನು ರಾತ್ರಿ ಬೆಳಗಾಗುವುದರೊಳಗೆ ಕಳಚಿದ್ದ ಕಳ್ಳರು ,ಕಳ್ಳತನ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು. ಟಾಯರ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬೈಂದೂರು ಪೊಲೀಸರು ಮಹಾರಾಷ್ಟ್ರದ ಮೂವರು ಆರೋಪಿತರನ್ನು ಬಂಧಿಸಿ ಅವರು ಕಳ್ಳತನ ಮಾಡಿದ ಟಯರುಗಳನ್ನು ವಶಪಡಿಸಿಕೊಂಡಿದ್ದಾರೆ.
ನವಿಲನ್ನೇ ನುಂಗಿದ ಬೃಹತ್ ಹೆಬ್ಬಾವು : ಜೀರ್ಣಿಸಿಕೊಳ್ಳಲಾಗದೆ ಹಾವಿನ ಪರದಾಟ : ಅಪರೂಪದ ದೃಶ್ಯ ಕಂಡು ಬೆರಗಾದ ಜನರು
ಮಹಾರಾಷ್ಟ್ರದ ಉಸ್ಮಾನಾಬಾದ್ ವಾಶಿ ನಿವಾಸಿಗಳಾದ ಶ್ಯಾಮ ಶಂಕರ ಶಿಂಧೆ (24), ಆಕಾಶ ಬಪ್ಪ ಶಿಂಧೆ (19) ಅಮೂಲ ರಾಮಾ ಕಾಳೆ (22) ಬಂಧಿತ ಆರೋಪಿಗಳಾಗಿದ್ದು , ಇವರು ಸೆಪ್ಟೆಂಬರ್ 15 ರಂದು ಬೈಂದೂರಿನ ಶಿರೂರು ಟೋಲ್ ಗೇಟ್ ಬಳಿ ನಿಲ್ಲಿಸಲಾಗಿದ್ದ ಅಂಕೋಲಾ ತಾಲೂಕಿನವರಿಗೆ ಸೇರಿದ ( ಕೆ.ಎ 30 ಎ 4807 ನೇ ನಂಬರಿನ 4 ಆಗಸ್ಟ್ 2022 ರಂದು ನೊಂದಣಿಯಾಗಿರುವ ) ಹೊಚ್ಚ ಹೊಸ 16 ಚಕ್ರದ ಲಾರಿಯ 5 ಟಯರ್ ಗಳನ್ನು ರಾತ್ರಿ ಸಮಯದಲ್ಲಿ ಬಿಚ್ಚಿ ಕಳ್ಳತನ ಮಾಡಿದ್ಧರು.
ನಿದ್ದೆಯಿಂದ ಎದ್ದು ನಸುಕಿನ ಜಾವ ಲಾರಿಯನ್ನು ಚಲಿಸಲು ಚಾಲಕ ಮುಂದಾದಾಗ ಗಾಡಿ ವಾಲಿ ನಿಂತಿತ್ತು.ಲಾರಿಯಿಂದ ಇಳಿದು ಏನಾಗಿದೆ ಎಂದು ನೋಡುವಷ್ಟರಲ್ಲಿ ತನ್ನ ವಾಹನದ ಐದು ಟಾಯರ್ ಗಳನ್ನು ಅದಾರೋ ಕದ್ದಿರುವುದು ಗಮನಕ್ಕೆ ಬಂದು ಈ ಕುರಿತು ಪೋಲೀಸ್ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡು ವಿವಿಧ ರೀತಿಯ ತನಿಖೆ ಕೈಗೊಂಡ ಪೊಲೀಸರ ತಂಡ ಹುಬ್ಬಳ್ಳಿ, ಗದಗ, ಕಲಘಟಗಿ ಮೊದಲಾದ ಭಾಗಗಳಲ್ಲಿ ವಿಚಾರಣೆ ನಡೆಸಿ ಸೆಪ್ಟೆಂಬರ್ 17 ರಂದು ಬೈಂದೂರಿನ ಪಡುವರಿ ಗ್ರಾಮದ ಒತ್ತಿಣೆನೆ ಬಳಿ ಮಹಾರಾಷ್ಟ್ರ ನೊಂದಣಿಯ (ಎಂ.ಎಚ್ 25 ಟಿ 6304) ಲಾರಿಯೊಂದರಲ್ಲಿ, ಕಳ್ಳತನ ಮಾಡಿದ್ದ ಟಯರುಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಆರೋಪಿಗಳನ್ನು ಬಂಧಿಸಿ, 1.85 ಲಕ್ಷ ರೂಪಾಯಿ ಮೌಲ್ಯದ 5 ಟಯರ್ ಗಳನ್ನು ಮತ್ತು ಕಳ್ಳ ಸಾಗಾಣಿಕಾ ಕೃತ್ಯಕ್ಕೆ ಬಳಸಿದ 35 ಲಕ್ಷ ರೂಪಾಯಿ ಮೌಲ್ಯದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಇದೇ ಆರೋಪಿಗಳ ಮೇಲೆ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿಯೂ ಪ್ರಕರಣಗಳು ದಾಖಲಾಗಿದೆ ಎಂದು ತಿಳಿದು ಬಂದಿದ್ದು ಈ ಕುರಿತು ತನಿಖೆ ಮುಂದುವರೆದಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠ ಅಕ್ಷಯ ಮಚ್ಚಿಂದ್ರ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಟಿ.ಸಿದ್ಧಲಿಂಗಪ್ಪ, ಕುಂದಾಪುರ ಡಿ.ವೈ.ಎಸ್. ಪಿ ಕೆ.ಶ್ರೀಕಾಂತ ಅವರ ಸೂಚನೆಯಂತೆ ಬೈಂದೂರು ಸಿ.ಪಿ.ಐ ಸಂತೋಷ ಕಾಯ್ಕಿಣಿ, ಪಿ.ಎಸ್. ಐ. ನಿರಂಜನ ಗೌಡ, ಮಹೇಶ ಕಂಬಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 2-3 ದಿನಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಕಳ್ಳತನದ ಜಾಲ ಭೇದಿಸಿದ ಬೈಂದೂರು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ