ಹದಗೆಟ್ಟ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಿಡಗಳನ್ನೆಟ್ಟು ಸಾಂಕೇತಿಕ ಪ್ರತಿಭಟನೆ | ಲಾರಿ ಮಾಲೀಕರ ಸಂಘದಿಂದಲೂ ಪ್ರತಿಭಟನೆಯ ಎಚ್ಚರಿಕೆ
ಅಂಕೋಲಾ: ತಾಲೂಕು ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 63 ಸಂಪೂರ್ಣ ಕೆಟ್ಟು ಹೋಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮೀಣ ಘಟಕ ಮತ್ತು ಸುಂಕಸಾಳ, ಹೆಬ್ಬುಳ, ಮಾಸ್ತಿಕಟ್ಟೆ, ರಾಮನಗುಳಿ, ವಜ್ರಳ್ಳಿ ಭಾಗದ ಸಾರ್ವಜನಿಕರು ಹೆದ್ದಾರಿ ಹೊಂಡಗಳಲ್ಲಿ ಬಾಳೆ ಮತ್ತು ಅಡಿಕೆ ಗಿಡಗಳನ್ನು ನೆಟ್ಟು ಪ್ರತಿಭಟಸಿದರು.
ರಾಷ್ಟ್ರೀಯ ಹೆದ್ದಾರಿ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಚಾಲಕರು ಸಹ ಸ್ವಯಂಪ್ರೇರಿತರಾಗಿ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಕರವೇ ಸುಂಕಸಾಳ ಗ್ರಾಮೀಣ ಘಟಕದ ಅಧ್ಯಕ್ಷ ಮಂಜುನಾಥ ಭಟ್ಟ ಈ ಸಂದರ್ಭದಲ್ಲಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಈ ರೀತಿ ದುರುಸ್ಥಿಯಲ್ಲಿರುವುದು ನಾಚಿಗೆಗೇಡು ಅಧಿಕಾರಿಗಳು, ಜನಪ್ರತಿನಿಧಿಗಳು ಇದೇ ರಸ್ತೆಯಲ್ಲಿ ಸಂಚಾರ ನಡೆಸಿದರೂ ಯಾರೂ ದುರುಸ್ಥಿ ಕುರಿತು ಆಸಕ್ತಿ ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೈಕ್ ಗೆ ಡಿಕ್ಕಿ ಹೊಡೆದ ಪಿಕಪ್: ಸ್ಥಳದಲ್ಲೇ ಯುವಕ ಸಾವು
ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ತಾಲೂಕು ಅಧ್ಯಕ್ಷ ಸಂದೀಪ ನಾಯ್ಕ ಮಾತನಾಡಿ ಪ್ರತಿದಿನ 20 ಸಾವಿರಕ್ಕೂ ಅಧಿಕ ವಾಹನಗಳ ಸಂಚಾರ ಇರುವ ರಸ್ತೆಯನ್ನು ಕಳೆದ ಏಳು ವರ್ಷಗಳಿಂದ ಸಂಪೂರ್ಣ ದಾಂಬರೀಕರಣ ಮಾಡದೇ ನಿರ್ಲಕ್ಷ್ಯ ಮಾಡಲಾಗಿದೆ ಎಂದರು.ಸ್ಥಳೀಯ ಪ್ರಮುಖ ಉದಯ ನಾಯ್ಕ ಮಾತನಾಡಿದರು.
ತಾ.ಪಂ ಮಾಜಿ ಸದಸ್ಯ ವಿಲ್ಸನ್ ಡಿ ಕೋಸ್ತಾ, ಸ್ಥಳೀಯ ಪ್ರಮುಖ ಸುರೇಶ ನಾಯ್ಕ, ಸಚಿನ ನಾಯಕ, ವಿನೋದ ಶೆಟ್ಟಿ, ನಾಗರಾಜ ಗೌಡ ಮೊದಲಾದವರು ಪಾಲ್ಗೊಂಡಿದ್ದರು.
ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿ ದುರಸ್ಥಿ ಕುರಿತು ಉತ್ತರ ಕನ್ನಡ ಜಿಲ್ಲೆಯ ಲಾರಿ ಮಾಲಿಕರ ಸಂಘ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.
ತಾಲೂಕಿನ ಬಾಳೇಗುಳಿಯಿಂದ ಯಲ್ಲಾಪುರದ ವರೆಗೆ ರಾಷ್ಟ್ರೀಯ ಹೆದ್ದಾರಿ 63 ಸಂಪೂರ್ಣ ಕೆಟ್ಟು ಹೋಗಿದ್ದು ಕೂಡಲೇ ದುರಸ್ಥಿಗೆ ಕ್ರಮ ಕೈಗೊಳ್ಳಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಟಿಪ್ಪರ್ ಮತ್ತು ಟ್ಯಾಂಕರ್ ಲಾರಿ ಮಾಲಿಕರ ಸಂಘದ ವತಿಯಿಂದ ಅಧ್ಯಕ್ಷ ಗಣಪತಿ ನಾಯಕ ಮೂಲೆಮನೆಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ವಿವಿಧ ಯೋಜನೆಗಳಿಂದ ನಿರಾಶ್ರಿತರಾಗಿ ಯಾವುದೇ ಉದ್ಯೋಗಾವಕಾಶ ಇಲ್ಲದೇ ಜೀವನ ನಿರ್ವಹಣೆಗೆ ಲಾರಿ ಉದ್ಯಮ ಆರಂಭಿಸಿರುವ ಲಾರಿ ಮಾಲಿಕರು ಇಂಧನ ಬೆಲೆ ಏರಿಕೆ ,ಟಯರ್ ಮತ್ತು ಇತರೇ ಬಿಡಿ ಭಾಗಗಳ ವಿಪರೀತ ಬೆಲೆ ಹಚ್ಚಳ, ಹೊರ ಜಿಲ್ಲೆಗಳ ಲಾರಿಗಳ ಪೈಪೋಟಿಯ ನಡುವೆಯೂ ಉದ್ಯಮ ಮುಂದುವರೆಸಿಕೊಂಡು ಹೋಗುತ್ತಿದ್ದು ಇದರಿಂದಾಗಿ ಅನೇಕರ ಕೂಲಿ ಕಾರ್ಮಿಕರ ಜೀವನ ನಿರ್ವಹಣೆಗೆ ಅನುಕೂಲವಾಗಿದೆ ಇದೀಗ ರಾಷ್ಟ್ರೀಯ ಹೆದ್ದಾರಿ 63 ಸಂಪೂರ್ಣ ಹೊಂಡಮಯವಾಗಿದ್ದು ಅಂಕೋಲಾದಿಂದ ಯಲ್ಲಾಪುರಕ್ಕೆ ಸಾಗಲು ನಾಲ್ಕು ಘಂಟೆಗಳ ಸಮಯ ಬೇಕಿದೆ, ರಸ್ತೆ ದುರುಸ್ಥಿಯಿಂದ ವಾಹನಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಇಂಧನ ಬೇಕಾಗಿದ್ದು ಬಿಡಿ ಭಾಗಗಳಿಗೆ ಹಾನಿ ಸಂಭವಿಸಿ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸುತ್ತಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಲವು ಭಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಕೂಡಲೇ ರಾಷ್ಟ್ರೀಯ ಹೆದ್ದಾರಿ ದುರುಸ್ಥಿಗೆ ಕ್ರಮ ಕೈಗೊಳ್ಳದಿದ್ದರೆ ತಾಲೂಕಿನ ಬಾಳೇಗುಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಟಿಪ್ಪರ್ ಮತ್ತು ಟ್ಯಾಂಕರ್ ಲಾರಿ ಮಾಲಿಕರ ಸಂಘದ ಅಧ್ಯಕ್ಷ ಗಣಪತಿ ನಾಯಕ ಮೂಲೆಮನೆ ಅವರು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಕಳೆದ ಎರಡು ಮೂರು ದಿನಗಳ ಹಿಂದೆ ಅಗಸೂರು ವ್ಯಾಪ್ತಿಯ ಹೊನ್ನಳ್ಳಿಯಲ್ಲಿ ಗಂಗಾವಳಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಿಸುವ ಯೋಜನೆಗೆ ಸಂಬಂಧಿಸಿದಂತೆ ಹಮ್ಮಿಕೊಳ್ಳಲಾದ ಗ್ರಾಮ ಸಭೆಯ ಕೊನೆಯಲ್ಲಿ,ಸ್ಥಳೀಯ ನಿವೃತ್ತ ಪ್ರಾಚಾರ್ಯರೋರ್ವರು ಹೆದ್ದಾರಿ ಅವ್ಯವಸ್ಥೆ ಕುರಿತು ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದರು. ಇದೇ ವೇಳೆ ಸಾಮಾಜಿಕ ಕಾರ್ಯಕರ್ತರೋರ್ವರು ಅವ್ಯವಸ್ಥೆ ಸರಿಪಡಿಸುವಂತೆ ಧ್ವನಿಗೂಡಿಸಿದ್ದರು. ಸಾರ್ವಜನಿಕ ಪ್ರತಿಭಟನೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಿದಾಗ,ಈಗಾಗಲೇ ಹೆದ್ದಾರಿ ತುರ್ತು ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಮಂಜೂರಿ ದೊರೆತು ಮಳೆ ಕಡಿಮೆ ಆದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಎ೦ದು ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಹೆದ್ದಾರಿ ಅವ್ಯವಸ್ಥೆ ಸುಧಾರಿಸುವಂಥಾಗಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ