ಅಂಕೋಲಾ: ಪಟ್ಟಣದಲ್ಲಿ ಇಂದು ನಡೆದ ಈದ್ ಮಿಲಾದ್ ಮೆರವಣಿಗೆ ಜೈಹಿಂದ್ ಸರ್ಕಲ್ ಬಳಿ ಅಗಮಿಸುತ್ತಿದ್ದಂತೆ ಕೆಲ ಕಾಲ ಗೊಂದಲದ ವಾತಾವರಣ ಕಂಡುಬಂತು. ಧ್ವನಿವರ್ಧಕ ಬಳಸಿ ಹಾಡಿಗೆ ಹೆಜ್ಜೆ ಹಾಕಿ ಕುಣಿಯ ಬಯಸುತ್ತಿದ್ದ ಕೆಲ ಯುವಕರ ನಡೆಗೆ ಅದೇ ಸಮಾಜದ ಒಂದಿಬ್ಬರು ಹಿರಿಯರು ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದ್ದು ,ಹಿರಿಯರು ಮತ್ತು ಕಿರಿಯರ ಮಧ್ಯೆ ಕಾವೇರಿದ ವಾತಾವರಣ ಕಂಡುಬಂದಿತ್ತು.
ಇದನ್ನು ಸೂಕ್ಷ್ಮವಾಗಿ ಗಮನಿಸಿದ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಕೂಡಲೇ ಮಧ್ಯಪ್ರವೇಶಿಸಿ,ಹಬ್ಬದ ಆಚರಣೆಗೆ ತೊಡಕಾಗದಂತೆ ಹಿರಿಯರು ಮತ್ತು ಹಿರಿಯರು ಕೂಡಿ ನಡೆಯಬೇಕು.ಕಿವಿಗಡಚಿಕ್ಕುವ ಸಂಗೀತದಿಂದ ಇತರರಿಗೆ ತೊಂದರೆಯಾಗದಂತೆ ಮೆಲು ದನಿಯ ಸಂಗೀತದೊಂದಿಗೆ ಹಬ್ಬದ ಸಂಭ್ರಮ ಮುಂದುವರಿಸಿ ಎಂದು ಕಿರಿಯರಿಗೆ ತಿಳಿಹೇಳಿ ವಾತಾವರಣ ತಿಳಿಗೊಳಿಸಿದರು.ಆದರೂ ಒಂದಿಬ್ಬರು ಯುವಕರು ತಮ್ಮ ಸಮಾಜದ ಹಿರಿಯರ ಬಗ್ಗೆ ಏರು ಧ್ವನಿಯಲ್ಲಿ ಮಾತನಾಡಿದ್ದು, ಸಮಾಜದ ಕೆಲ ಹಿರಿಯರಿಗೆ ಇರಿಸು ಮುರಿಸು ತಂದತಾಯಿತು.
ವದಂತಿಗಳಿಗೆ ಕಿವಿಗೊಡಬೇಡಿ
ಅದೇ ಸಮಾಜದ ಹಿರಿಯರು ಮತ್ತು ಕಿರಿಯರ ನಡುವಿನ ಹೊಂದಾಣಿಕೆಯ ಕೊರತೆಯಿಂದ ಕೆಲಕಾಲ ಗೊಂದಲ ಏರ್ಪಟ್ಟು ಜನಜಂಗುಳಿ ಕೂಡಿದಂತಾಗಿ ಅಲ್ಲಿ ಏನು ನಡೆಯುತ್ತಿದೆ ಎಂದು ದೂರದಿಂದ ನೋಡಿದವರಿಗೆ ಸರಿಯಾಗಿ ಅರ್ಥವಾಗದೆ,ಪಟ್ಟಣದಲ್ಲಿ ಈ ವಿಷಯ ನಾನಾ ರೀತಿಯ ಚರ್ಚೆಗೆ ಕಾರಣವಾಗಿತ್ತು.ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಸುದ್ದಿ ಹರಡಿ,ನಾನಾ ಚರ್ಚೆಗೆ ಕಾರಣವಾಗಿತ್ತು ಪೊಲೀಸರ ಸಕಾಲಿಕ ಮಧ್ಯಪ್ರವೇಶ ಮತ್ತು ಪರಿಸ್ಥಿತಿ ನಿಭಾಯಿಸಿದ ರೀತಿಗೆ ಹಲವೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.
ಒಟ್ಟಿನಲ್ಲಿ ಈ ಒಂದು ಘಟನೆಯ ಹೊರತಾಗಿ ತಾಲೂಕಿನ ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಮುಸ್ಲಿಂ ಬಾಂಧವರು ಈದ್ ಮಿಲಾದನ್ನು ಸಂಭ್ರಮ ದಿಂದ ಆಚರಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ