ಪ್ರವೇಶ ಪಡೆದ ವಿದ್ಯಾರ್ಥಿಗಳ ‘ಪಾಲಕರ ಸಮಾಗಮ ಕಾರ್ಯಕ್ರಮ: ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ

ಭಟ್ಕಳ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ 2022-23ನೇ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ‘ಪಾಲಕರ ಸಮಾಗಮ ಕಾರ್ಯಕ್ರಮವು’ ನಡೆಯಿತು. ಖ್ಯಾತ ಮನೋವೈದ್ಯರು, ಲೇಖಕರಾದ ಡಾ. ವಿರೂಪಾಕ್ಷ ದೇವರಮನೆಯವರು ಕಾರ್ಯಕ್ರಮ ಉದ್ಘಾಟಿಸಿ, “ಪಾಲಕರೊಂದಿಗೆ ಮಕ್ಕಳ ಸಂಬoಧ ಅತೀ ಮುಖ್ಯವಾದುದು, ಕಾರಣ ಪಾಲಕರು ತಮ್ಮ ಮಕ್ಕಳಿಗಾಗಿ ನಿತ್ಯ ಸಮಯ ಮೀಸಲಿರಿಸಬೇಕು ಹಾಗೂ ಕುಶಲೋಪರಿಯನ್ನು ವಿಚಾರಿಸಬೇಕು” ಎಂದು ತಿಳಿಹೇಳಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ವೀರೇಂದ್ರ ವಿ ಶ್ಯಾನಭಾಗ ಮಾತನಾಡಿ “ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪಾಲಕರು ಒದಗಿಸಕೊಡುವ ಸ್ವಚ್ಛಂದ-ಸAಸ್ಕಾರಯುತ ವಾತಾವರಣ ಅತೀ ಮುಖ್ಯ, ಕಾರಣ ಇಂತಹ ವಾತಾವರಣ ನಿರ್ಮಿಸುವಂತಾಗಲಿ ಹಾಗೂ ವಿದ್ಯಾರ್ಥಿಗಳಿಗೆ ಯಶಸ್ಸು ದೊರಕಲಿ” ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ್ಟ’ನ ಟ್ರಸ್ಟೀ ಮ್ಯಾನೇಜರ್ ರಾಜೇಶ್ ನಾಯಕ್ “ವಿದ್ಯಾರ್ಥಿಗಳು ಪದವಿಯ ಮೂರು ವರ್ಷಗಳ ಅವಕಾಶವನ್ನು ಸೂಕ್ತವಾಗಿ ಉಪಯೋಗಿಸಿ, ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು”ಎಂದು ಹೇಳಿದರು.

2021-22ನೇ ಪಿಯು ಪರೀಕ್ಷೆಯಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಅವರ ಪಾಲಕರನ್ನು ಪುರಸ್ಕರಿಸಲಾಯಿತು. ಹೊಸ ಕಂಪ್ಯೂಟರ ಎಡ್-ಆನ್ ಸರ್ಟಿಫಿಕೇಟ್ ತರಬೇತಿಯನ್ನು ಅನಾವರಣಗೊಳಿಸಲಾಯಿತು. ಪ್ರಾಂಶುಪಾಲರಾದ ಶ್ರೀನಾಥ ಪೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಗಳನ್ನು ಬಿ.ಬಿ.ಎ-ಬಿ.ಎ ವಿಭಾಗದ ಉಪಪ್ರಾಂಶುಪಾಲ ವಿಶ್ವನಾಥ ಭಟ್ಟ ಹಾಗೂ ಬಿ.ಸಿ.ಎ ವಿಭಾಗದ ಉಪಪ್ರಾಂಶುಪಾಲ ವಿಖ್ಯಾತ ಪ್ರಭು ಪರಿಚಯಿಸಿದರೆ, ಬಿ.ಕಾಂ ವಿಭಾಗದ ಉಪಪ್ರಾಂಶುಪಾಲ ಪಿ.ಎಸ್. ಹೆಬ್ಬಾರ್ ಕಾಲೇಜಿನ ವಿವಿಧ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಉಪನ್ಯಾಸಕ ಶಾಂತರಾಯ. ಜಿ ವಂದಿಸಿದರು. ವಿದ್ಯಾರ್ಥಿಗಳಾದ ಲಿಡಿಯಾ ಹಾಗೂ ತೇಜಸ್ವಿನಿ ಕಾರ್ಯಕ್ರಮವನ್ನು ನಿರೂಪಿಸಿದರು.

ವಿಸ್ಮಯ ನ್ಯೂಸ್, ಭಟ್ಕಳ

Exit mobile version