ಹೊನ್ನಾವರ: ತಾಲೂಕಿನ ಹಿರೇಬೈಲ್ ಗ್ರಾಮದ ಚಂದುಬೇಣದ ಶ್ರೀ ಚಂದ್ರಮೌಳೇಶ್ವರ ಶ್ರೀ ಲಕ್ಷ್ಮೀನಾರಾಯಣ ದೇವಾಲಯದಲ್ಲಿ ಕಾರ್ತೀಕ ದೀಪೋತ್ಸವವು ಶೃದ್ಧಾ ಭಕ್ತಿಯಿಂದ ನೆರವೇರಿತು. ಹರಿ ಮತ್ತು ಹರ ಇಬ್ಬರೂ ಮೇಳೈಸಿರುವ ಅಪರೂಪದ ಸ್ಥಳ ಚಂದುಬೇಣ ಕ್ಷೇತ್ರ. ಇಲ್ಲಿ ಶ್ರೀ ಹರಿಯು ಲಕ್ಷ್ಮೀ ನಾರಾಯಣನಾಗಿ, ಹರನು ಚಂದ್ರಮೌಳೇಶ್ವರನಾಗಿ ಭಕ್ತರ ಕಷ್ಟಗಳನ್ನು ಕಳೆದು ಇಷ್ಟಾರ್ಥಗಳನ್ನು ಈಡೇರಿಸುತ್ತಾ ನೆಲೆಸಿದ್ದಾರೆ. ಹೊನ್ನಾವರದಿಂದ 25 ಕಿಲೋಮೀಟರ್ ಅಂತರದಲ್ಲಿ ಈ ಪುರಾತನ ದೇವಾಲಯವಿದ್ದು, ಎಂಟುನೂರು ವರ್ಷಗಳ ಇತಿಹಾಸವನ್ನು ಹೊಂದಿ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿದೆ. ದೇವಾಲಯದ ಗರ್ಭಗುಡಿಯನ್ನು ಕಲ್ಲಿನಿಂದ ಗೋಲಾಕೃತಿಯಲ್ಲಿ ಸುಂದರವಾಗಿ ನಿರ್ಮಿಸಿದ್ದು ಇಲ್ಲಿನ ವಾಸ್ತುಶಿಲ್ಪದ ವಿಶೇಷತೆಯಾಗಿದೆ.
ನಿಂತಲ್ಲೇ ಬೆಂಕಿಗೆ ಆಹುತಿಯಾದ ಟ್ಯಾಂಕರ್ : ಆಕಸ್ಮಿಕ ಹಾನಿಯಿಂದ ಕಂಗಾಲಾಗಿದೆ ಕುಟುಂಬ
ಕಾರ್ತಿಕ ಮಾಸದಲ್ಲಿ ಪ್ರತಿನಿತ್ಯ ಇಲ್ಲಿ ಭಜನಾ ಸಂಕೀರ್ತನೆ, ಹಾಗೂ ದೀಪೋತ್ಸವ ಸೇವೆ ನಡೆಯುವುದು. ಅದರಂತೆ ಊರಿನ ರವಿ ನಾಯ್ಕ್ ಕುಟುಂಬದವರ ಕಾರ್ತೀಕ ದೀಪೋತ್ಸವ ಸೇವೆಯಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಭಜನೆಯನ್ನು ಆಲಿಸಿ, ಪೂಜೆಯ ಕ್ಷಣಗಳನ್ನು ಕಣ್ತುಂಬಿಕೊoಡು ಪುನೀತರಾದರು. ಭಕ್ತಿ ಭಜನಾ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸುಬ್ರಾಯ ಹೆಗಡೆ, ಸುಜೇಂದ್ರ ಭಂಡಾರಿ ಹರಡಸೆ ಮುಂತಾದವರು ಪಾಲ್ಗೊಂಡಿದ್ದರು. ಕುಮಾರಿ ಅಕ್ಷತಾ ನಾಯ್ಕ್ ಶ್ರೀ ದೇವರ ಎದುರು ಅಂದವಾಗಿ ಬಿಡಿಸಿದ ಆಕರ್ಷಕ ರಂಗೋಲಿ ಕಲಾಭಿಮಾನಿಗಳ ಶ್ಲಾಘನೆಗೆ ಸಾಕ್ಷಿಯಾಯಿತು.
ಮಹಾಮಂಗಳಾರತಿಯ ಬಳಿಕ ಪ್ರಸಾದ ವಿತರಣೆಯೊಂದಿಗೆ ಈ ದಿನದ ದೀಪೋತ್ಸವ ಸಂಪನ್ನಗೊoಡಿದ್ದು, ಈ ಸಂದರ್ಭದಲ್ಲಿ ದೇವಾಲಯದ ಅಧ್ಯಕ್ಷ ವಿನಾಯಕ ಶಾನಭಾಗ್ ಮಾತನಾಡಿ “ಇಲ್ಲಿ ಕಾರ್ತೀಕ ಮಾಸದ ಒಂದು ತಿಂಗಳ ಪರ್ಯಂತ ಗ್ರಾಮದ ಭಕ್ತಾಧಿಗಳ ಸೇವೆಯಲ್ಲಿ ಭಜನೆ ಹಾಗೂ ದೀಪೋತ್ಸವ ನಡೆಯುತ್ತದೆ. ತಾಲೂಕಿನ ಹಾಗೂ ಜಿಲ್ಲೆಯ ಹೆಸರಾಂತ ಕಲಾವಿದರೆಲ್ಲ ಈ ಕ್ಷೇತ್ರಕ್ಕೆ ಬಂದು ಭಜನೆಯಲ್ಲಿ ಪಾಲ್ಗೊಂಡು ಶ್ರೀ ದೇವರಿಗೆ ಕಲಾಸೇವೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ.” ಎಂದರು.
ವಿಸ್ಮಯ ನ್ಯೂಸ್, ಹೊನ್ನಾವರ