ಹಸೆ ಮಣೆ ಏರಿ ವರ್ಷವಾಗುವುದರೊಳಗೆ ಮಸಣದ ಹಾದಿ ತುಳಿದ ಮಹಿಳೆ| ಗಂಡ ಮತ್ತು ಗಂಡನ ಮನೆಯವರಿಂದಲೇ ಆತ್ಮಹತ್ಯೆಗೆ ಪ್ರೇರಣೆ ಆರೋಪ ?

ಅಂಕೋಲಾ: ಗಂಡನ ಮನೆಯವರ ಕಿರುಕುಳ ಸಹಿಸಲಾರದೇ ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೆಳಸೆ ಗ್ರಾಮದ ಹಂದಿಗದ್ದೆಯಲ್ಲಿ ಸಂಭವಿಸಿದೆ.
ಯಮುನಾ ವಿಘ್ನೇಶ್ವರ ಗೌಡ (30) ಮೃತ ದುರ್ದೈವಿ.

ಸಮುದ್ರದಲ್ಲಿ ಮುಳುಗುತ್ತಿದ್ದ ತಾಯಿ-ಮಗನ ರಕ್ಷಣೆ

ಮಾದನಗೇರಿ ಬಳಲೆ ನಿವಾಸಿಯಾದ ಈಕೆಯನ್ನು ಕಳೆದ 7 ತಿಂಗಳ ಹಿಂದೆ ಬೆಳಸೆಯ ವಿಘ್ನೇಶ್ವರ ಬುಧವಂತ ಗೌಡ ಎಂಬಾತನಿಗೆ ಮಾದನಗೇರಿಯ ದೇವಸ್ಥಾನ ಒಂದರಲ್ಲಿ ಅದ್ದೂರಿಯಾಗಿ ವಿವಾಹ ಮಾಡಿ ಕೊಡಲಾಗಿತ್ತು. ಮದುವೆಯಾಗಿ ಮೂರು ತಿಂಗಳ ನಂತರ ಗಂಡ ವಿಘ್ನೇಶ್ವರ ಗೌಡ ತನ್ನ ಮೈದುನನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ಗಮನಕ್ಕೆ ಬಂದಿದೆ ಎನ್ನಲಾಗಿದ್ದು, ಗಂಡನ ನಡವಳಿಕೆ ಬಗ್ಗೆ ಯಮುನಾ ಗೌಡ ಆ ಕುರಿತು ಪ್ರಶ್ನೆ ಮಾಡಿದ್ದಳು ಎನ್ನಲಾಗಿದೆ.

ಅಂದಿನಿಂದ ಗಂಡ , ಮೈದುನ , ಮೈದುನನ ಹೆಂಡತಿ ಮತ್ತು ಅತ್ತೆ ಸೇರಿ ಯಮುನಾಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತ ಬಂದಿದ್ದಾರೆ ಎಂಬ ಆರೋಪ‌ಕೇಳಿಬಂದಿದ್ದು, ಗಂಡನ ಮನೆ ಕಿರುಕುಳದ ಬಗ್ಗೆ ತನ್ನ ತವರು ಮನೆಗೆ ಸಹ ತಿಳಿದಿದ್ದಳು ಎನ್ನಲಾಗಿದೆ. ಮನೆಮಗಳ ಸಂಸಾರ ಚೆನ್ನಾಗಿರಲಿ ಎಂದುತವರು ಮನೆಯವರು ಈ ಕುರಿತು ಗಂಡನ ಮನೆಯವರಿಗೆ ಬುದ್ಧಿ ಹೇಳುವ ಪ್ರಯತ್ನ ಸಹ ನಡೆಸಿ,ಮುಂದೆ ಎಲ್ಲವೂ ಸರಿ ಹೋಗುತ್ತದೆ ಎಂಬ ಆಶಾಭಾವನೆಯಲ್ಲಿದ್ದರು ಎನ್ನಲಾಗಿದೆ.( ಈ ಎಲ್ಲಾ ಅಂಶಗಳು FIR ನಲ್ಲಿ ದಾಖಲಾಗಿದೆ )

ಆದರೆ ಕಿರುಕುಳ ಮುಂದುವರಿಸಿದ ಆರೋಪಿತರು, ಯಮುನಾಳಿಗೆ ಸಾಯುವಂತೆ ಪ್ರೇರೇಪಣೆ ನೀಡಿದ ಕಾರಣ ಸೋಮವಾರ ಬೆಳಗ್ಗೆ ತನ್ನ ಗಂಡನ ಮನೆಯ ಮೇಲಿನ ಮಹಡಿಯಲ್ಲಿರುವ ತನ್ನ ಕೊಠಡಿಯ ಕೋಣೆಯಲ್ಲಿ ಪಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಈ ಕುರಿತು ಮೃತಳ ಸಹೋದರ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದು, (ಮೃತಳ ಗಂಡ, ಗಂಡನ ತಮ್ಮ ಮತ್ತು ಅವನ ಹೆಂಡತಿ) ಸೇರಿದಂತೆ ಆರೋಪಿತರನ್ನು ವಶಕ್ಕೆ ಪಡೆದ ಪೊಲೀಸರು ಕಾನೂನು ಕ್ರಮ ಮುಂದುವರಿಸಿದ್ದಾರೆ. ಮದುವೆಯಾಗುವುದಕ್ಕೂ ಪೂರ್ವ ತನ್ನ ಶೈಕ್ಷಣಿಕ ಅರ್ಹತೆಯಿಂದ ಪಕ್ಕದ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಯಮುನಾ ಗೌಡ,ತದನಂತರ ಸರ್ಕಾರಿ ಪ್ರೌಢಶಾಲೆ ಶಿಕ್ಷಕನಾಗಿರುವ ವಿಷೇಶ್ವರ ಗೌಡ ಎಂಬಾತನನ್ನು ಮದುವೆಯಾಗಿ ಸುಃಖ ಸಂಸಾರದ ಕನಸು ಕಾಣುತ್ತಿದ್ದವಳು, ಗಂಡನ ಅನೈತಿಕ ಸಂಬಂಧ ಕಂಡು – ಕೊರಗಿ ಮನನೊಂದು ಆತ್ಮಹತ್ಯೆಗೆ ಶರಣಾಗುವಂತಾಗಿದೆ.

ನೇಣು ಬಿಗಿದುಕೊಳ್ಳುವುದಕ್ಕೂ ಮುನ್ನ ತನ್ನ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಮತ್ತು ಕಾಲುಂಗುರವನ್ನು ಬದಿಗೆ ತೆಗೆದಿಟ್ಟಿದ್ದಳು ಎನ್ನಲಾಗಿರುವುದು ಸಾವಿಗೆ ಶರಣಾಗುವ ಮುನ್ನ ಅವಳ ಮನಸ್ಥಿತಿಯನ್ನು ಎತ್ತಿ ತೋರಿಸುವಂತೆ. ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದಿರುವುದಾಗಿ ಹೇಳಲಾಗಿದ್ದು, ಪೋಲಿಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಹಸೆ ಮಣೆಯೇರಿ ವರ್ಷ ಕಳೆಯುವ ಷ್ಟರಲ್ಲಿಯೇ, ಹೂ ಮನಸ್ಸಿನ ಯಮುನಾ ಗೌಡ ಎಂಬ ಹೆಣ್ಣು ಮಗಳು ವಿಧಿಯಾಟಕ್ಕೆ ಸಿಲುಕಿ ಮಸಣದ ಹಾದಿ ತುಳಿಯುವಂತಾಗಿರುವುದು ಬೇಸರದ ಸಂಗತಿಯಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version