ಜನವಸತಿ ಪ್ರದೇಶಗಳಲ್ಲಿ ಹೆಜ್ಜೇನು ಕಾಟ: ಜನರ ಮೇಲೆ, ಸಾಕು ಪ್ರಾಣಿಗಳ ಮೇಲೆ ದಾಳಿ : ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಅoಕೋಲಾ: ಹವಾಮಾನ ವೈಪರೀತ್ಯ ಮತ್ತಿತರ ಕಾರಣಗಳಿಂದ ಕೆರಳುತ್ತಿರುವ ಜೇನು ಹುಳುಗಳು ಆಗಾಗ ದಾಳಿ ಮಾಡುತ್ತಿರುವ ಸುದ್ದಿ ಕಳೆದ ಕೆಲ ಕಾಲದಿಂದ ಜಿಲ್ಲೆಯ ಹಲವೆಡೆ ಕೇಳಿಬಂದಿದೆ. ಅಂಕೋಲಾ ತಾಲೂಕಿನಲ್ಲಿಯೂ ತುಸು ಹೆಚ್ಚು ಜೇನು ದಾಳಿಯಿಂದ ನಾಗರಿಕ ಸಮಾಜ ಆತಂಕ ಪಡುವಂತಾಗಿದೆ. ಶೈಕ್ಷಣಿಕ ಸಂಸ್ಥೆಗಳು, ರೈಲ್ವೆ ನಿಲ್ದಾಣ ರಸ್ತೆ, ದೇವಾಲಯ, ವಸತಿ ಸಮುಚ್ಚಯಗಳ ಅಕ್ಕ ಪಕ್ಕದ ಮರ ಮತ್ತಿತರ ಪ್ರದೇಶಗಳಲ್ಲಿ ಹೆಜ್ಜೇನುಗಳು ಹಲವೆಡೆ ಗೂಡು ಕಟ್ಟಿರುವುದು ಕಂಡು ಬರತೊಡಗಿದ್ದು, ಹಲವೆಡೆ ಅಮ ಏಕಾಏಕಿ ದಾಳಿ ಮಾಡಿರುವುದರಿಂದ ಹತ್ತಾರು ಜನ ಅಸ್ವಸ್ಥಗೊಂಡು ಆಸ್ಪತ್ರೆ ಸೇರುವಂತಾಗಿದೆ. ಇತ್ತೀಚೆಗೆ ತಾಲೂಕಿನ ಖಾಸಗಿ ಶೈಕ್ಷಣಿಕ ಸಂಸ್ಥೆಯೊoದರ ಬಳಿ ಮಕ್ಕಳ ಮೇಲೆ ಜೇನು ಮೇಣಗಳು ದಾಳಿ ನಡೆಸಿತ್ತು. ಅದೇ ರೀತಿ ಮಂಜಗುಣಿ ಮುಖ್ಯ ರಸ್ತೆಗೆ ಹೊಂದಿಕೊoಡು ಪೂಜಗೇರಿಗೆ ಹೊಂದಿಕೊoಡ ತೆಂಕಣಕೇರಿ ಗ್ರಾಮದ ಮನೆಯೊಂದರ ಬಳಿ ಅಚಾನಕ್ ಆಗಿ ದಾಳಿ ಮಾಡಿದ್ದ ಜೇನು ನೊಣಗಳು 10 ಕ್ಕೂ ಹೆಚ್ಚು ಕೋಳಿ ಮತ್ತು ಮರಿಗಳ ಸಾವಿಗೆ ಕಾರಣವಾಗಿದ್ದವು ಎನ್ನಲಾಗಿದ್ದು,ಅದೃಷ್ಟವಶಾತ್ ಮನೆಯವರು ಬಾಗಿಲು ಹಾಕಿಕೊಂಡು ಜೇನು ದಾಳಿಯಿಂದ ತಪ್ಪಿಸಿಕೊಂಡಿದ್ದರು.

ಇತ್ತೀಚೆಗಷ್ಟೆ ಜಮಗೋಡ ರೈಲ್ವೆ ಸ್ಟೇಷನ್ ಕ್ರಾಸ್ ಬಳಿ, ಹೆದ್ದಾರಿ ದಾಟಿ ನಡೆದು ಹೋಗುತ್ತಿದ್ದ ಚಲನಚಿತ್ರ ಚಿತ್ರೀಕರಣ ತಂಡದ ಇಬ್ಬರು ಕಾರ್ಮಿಕರ ಮೇಲೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಈ ಕುರಿತು ವಿಸ್ಮಯ ವಾಹಿನಿಯಲ್ಲಿ ವಿಸ್ತೃತ ವರದಿ ಪ್ರಕಟಿಸಿ ಸಂಬoಧಿಸಿದ ಇಲಾಖೆ ಜೇನುಗೂಡು ತೆರವುಗೊಳಿಸದಿದ್ದರೆ ಮತ್ತೆ ಜೇನು ದಾಳಿಯ ಸಾಧ್ಯತೆ ಕುರಿತು ಸ್ಥಳೀಯರಿಗಿರುವ ಆತಂಕ ದೂರಮಾಡುವಂತೆ ಸಂಬoಧಿತ ಇಲಾಖೆಗಳಿಗೆ ಎಚ್ಚರಿಸಲಾಗಿತ್ತು.ಅದಾವುದೋ ಕಾರಣದಿಂದ ಸಂಬoಧಿತ ಇಲಾಖೆಗಳು ಜೇನುಗೂಡು ತೆರವುಗೊಳಿಸಲು ವಿಳಂಬ ಮಾಡಿದ ಪರಿಣಾಮವಾಗಿ ಅದೇ ಸ್ಥಳದ ಅಕ್ಕಪಕ್ಕ ಮತ್ತೆ ಕೆಲವರು.ಜೇನು ದಾಳಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆ ಸೇರುವಂತಾಯಿತು. ಎರಡನೇ ಘಟನೆಯ ಬಳಿಕವಾದರೂ ಎಚ್ಚೆತ್ತು ಕೊಳ್ಳುವ ಮೂಲಕ ಜೇನುಗೂಡು ತೆರವು ಗೊಳಿಸಿದ ಇಲಾಖೆ ಕೊಂಚವಾದರೂ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದಂತಿದೆ ಎನ್ನುತ್ತಾರೆ ಕೆಲ ಸಾರ್ವಜನಿಕರು.

ಕಳೆದ 2-3 ದಿನಗಳ ಹಿಂದೆ ಐದಾರು ಜನರು ಜೇನು ದಾಳಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಬೆನ್ನಿಗೇ ಅದರ ಮಾರನೇ ದಿನ ಪಟ್ಟಣ ವ್ಯಾಪ್ತಿಯ ಮಹಾಮಾಯ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ಮಧ್ಯಾಹ್ನದ ಊಟದ ಸಮಯಕ್ಕೆ ಹನುಮಟ್ಟದ ತಮ್ಮ ಮನೆಯತ್ತ ತಾಯಿಯೊಂದಿಗೆ ಸ್ಕೂಟಿಯಲ್ಲಿ ಕುಳಿತು ತೆರಳುತ್ತಿದ್ದ ಪುಟಾಣಿ ವಿದ್ಯಾರ್ಥಿನಿ ಯೋರ್ವಳಿಗೆ , ರಸ್ತೆಯಂಚಿನ ವಿದ್ಯುತ್ ಕಂಬದ ಹತ್ತಿರವಿರುವ ಮರವೊಂದರಲ್ಲಿ ಗೂಡು ಮಾಡಿಇದ್ದ ಜೇನು ಹುಳುಗಳು, ದಾಳಿ ಮಾಡಿದ ಪರಿಣಾಮ ಪುಟಾಣಿ ವಿದ್ಯಾರ್ಥಿಯು ಅಸ್ವಸ್ಥಗೊಳ್ಳುವಂತಾಗಿತ್ತು. ಈ ಪ್ರದೇಶದಲ್ಲಿ ಈಗಲೂ ಜೇನುಗೂಡು ಹಾಗೆಯೇ ಇದ್ದು ಕೂಡಲೆ ಅದರ ತೆರವಿಗೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಮತ್ತಷ್ಟು ಅಪಾಯದ ಸಾಧ್ಯತೆಗಳಿವೆ ಎನ್ನುತ್ತಾರೆ ಸ್ಥಳೀಯರು.

ಕಳೆದ ವರ್ಷ ಅಬಕಾರಿ ಇಲಾಖೆಯ ಸಿಬ್ಬಂದಿ ಓರ್ವರು ಜೇನು ದಾಳಿಯ ತೀವೃತೆಗೆ ಮೃತ ಪಟ್ಟಿದ್ದನ್ನು ಸ್ಮರಿಸಬಹುದಾಗಿದ್ದು,ಮತ್ತೆ ಕೆಟ್ಟ ಘಟನೆಗಳು ಮರುಕಳಿಸದಂತೆ ಸಂಬoಧಿತ ಇಲಾಖೆಗಳು ಹೆಚ್ಚಿನ ಕ್ರಮ ಕೈಗೊಂಡು ನಾಗರಿಕ ಸುರಕ್ಷತೆಗೆ ಇವತ್ತು ನೀಡಬೇಕಿದೆ. ಅಂತೆಯೇ ಎಲ್ಲಿಯಾದರೂ ಅಪಾಯಕಾರಿ ಜೇನುಗೂಡು ಕಂಡುಬoದಲ್ಲಿ ಸಾರ್ವಜನಿಕರು ಸಂಬoಧಿತ ಇಲಾಖೆಗಳ ಗಮನಕ್ಕೆ ತರಬೇಕಿದೆ ಮತ್ತು ಮಹಿಳೆಯರು, ಮಕ್ಕಳು, ವೃದ್ಧರು ಓಡಾಡುವ ಸ್ಥಳಗಳಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version