Big NewsImportant
Trending

ಕನಸಿನಲ್ಲಿ ದೇವರು ಹೇಳಿತೆಂದು ನಿಧಿಯಾಸೆಗಾಗಿ ಅರಣ್ಯದಲ್ಲಿ ಬಾವಿ ತೋಡಿದ ನಾಲ್ವರು ವಶಕ್ಕೆ: ಸಾರ್ವಜನಿಕರು ಬೆಚ್ಚಿ ಬಿದ್ದಿರೋದು ಏನಕ್ಕೆ?

ಕಾರವಾರ: ಒಂದೆಡೆ ದಟ್ಟ ಅರಣ್ಯದಲ್ಲಿ ಕಲ್ಲಿಗೆ ಹೂವು, ನಿಂಬೆಹಣ್ಣಿನ ಹಾರ ಹಾಕಿ ಅರಿಶಿಣ, ಕುಂಕುಮ ಇಟ್ಟು ಪೂಜೆ ಮಾಡಿರುವುದು. ಇನ್ನೊಂದೆಡೆ ಪೂಜೆ ಮಾಡಿದ ಸ್ಥಳದ ಪಕ್ಕದಲ್ಲೇ ದೊಡ್ಡ ಬಾವಿ ತೆಗೆಯುತ್ತಿರುವುದು, ಮತ್ತೊಂದೆಡೆ ವಿಷಯ ತಿಳಿದು ದಾಳಿ ನಡೆಸಿ ವ್ಯಕ್ತಿಗಳನ್ನ ವಶಕ್ಕೆ ಪಡೆದಿರುವ ಅರಣ್ಯ ಇಲಾಖೆ ಸಿಬ್ಬಂದಿ. ಅರೇ ಏನಪ್ಪಾ ಇದು, ಎಲ್ಲಾ ವಿಚಿತ್ರವಾಗಿದೆಯಲ್ಲ. ಏನ್ ನಡೀತಾ ಇದೆ ಇಲ್ಲಿ ಅಂತಾ ಯೋಚನೆ ಮಾಡ್ತಿದೀರಾ. ಇಂತಹದ್ದೊoದು ವಿಚಿತ್ರ ಘಟನೆ ನಡೆದಿರೋದು ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡದಲ್ಲಿ.

ಬೈಕಿಗೆ ಡಿಕ್ಕಿ ಹೊಡೆದ ಲಾರಿ: ಸ್ಥಳದಲ್ಲೇ ಲಾರಿಬಿಟ್ಟು ಪರಾರಿಯಾದ ಚಾಲಕ

ಶಿರವಾಡ ಗ್ರಾಮ ವ್ಯಾಪ್ತಿಯ ಸರ್ವೆ ನಂಬರ್ 195ರ ಅರಣ್ಯ ಪ್ರದೇಶದಲ್ಲಿ ಯಾರೋ ಅಪರಿಚಿತರು ಬಾವಿ ತೆಗೆಯುತ್ತಿದ್ದಾರೆ ಎನ್ನುವ ಮಾಹಿತಿ ಅರಣ್ಯ ಇಲಾಖೆಯವರಿಗೆ ತಿಳಿದು ಬಂದಿತ್ತು. ತಕ್ಷಣ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದಾಗ ಎಲ್ಲರಿಗೂ ಶಾಕ್ ಕಾದಿತ್ತು. ವ್ಯಕ್ತಿಯೋರ್ವ ತನಗೆ ಮಾರಿಕಾಂಬೆ ಅಮ್ಮ ಕನಸಿನಲ್ಲಿ ಬಂದು ಹೇಳಿದ್ದಾಳೆ. ಇಲ್ಲಿ ಬಾವಿ ತೋಡಿ ಈ ನೀರಿನಿಂದ ಅಭಿಷೇಕ ಮಾಡುವಂತೆ ಸೂಚನೆ ನೀಡಿದ್ದರಿಂದ ತಾನು ಬಾವಿ ತೆಗೆಯುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಆದರೆ ಈ ವೇಳೆ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ನಿಧಿ ಶೋಧಕ್ಕಾಗಿ ಬಾವಿ ತೆಗೆಯುತ್ತಿರುವುದು ಗಮನಕ್ಕೆ ಬಂದಿದ್ದು ತಕ್ಷಣ ಸ್ಥಳದಲ್ಲಿದ್ದ ನಾಲ್ವರನ್ನೂ ವಶಕ್ಕೆ ಪಡೆದುಕೊಂಡು ಬಾವಿ ತೋಡುತ್ತಿದ್ದ ಸಲಕರಣೆಗಳನ್ನ ಜಪ್ತು ಮಾಡಿದ್ದಾರೆ.

ಇನ್ನು ವಶಕ್ಕೆ ಪಡೆದ ವ್ಯಕ್ತಿ ಕಾರವಾರ ತಾಲೂಕಿನ ಶಿರವಾಡ ಮೂಲದವನಾಗಿದ್ದು ಆತನ ಹೆಸರು ಹಿದಾಯತ್ ಅಬ್ದುಲ್‌ಘನಿ ರಾಣೇಬೆನ್ನೂರು ಎಂದು ತಿಳಿದು ಬಂದಿದೆ. ಈತ ಕೆಲಸಗಾರರಾದ ರುಸ್ತುಂ ರಜಾಕ್‌ಸಾಬ್ ಪಠಾಣ್, ಹರ್ಷದ್ಅಲಿ ಹೈದರ್‌ಅಲಿ ಅನ್ಸಾರಿ ಹಾಗೂ ಸರ್ಫರಾಜ್ ಹಬೀಬುಲ್ಲಾ ಸಲ್ಮಾನಿ ಎಂಬುವವರೊoದಿಗೆ ಸೇರಿ ಬಾವಿ ತೋಡಿದ್ದಾನೆ. ಇವರು ಕಳೆದ ಎಳ್ಳುಅಮವಾಸ್ಯೆಯಂದು ಕಲ್ಲಿಗೆ ಪೂಜೆಯನ್ನ ಸಲ್ಲಿಸಿ ಬಾವಿ ತೋಡಲು ಆರಂಭಿಸಿದ್ದು ಸುಮಾರು ನಾಲ್ಕು ಅಡಿ ಸುತ್ತಳತೆಯಲ್ಲಿ ಬರೋಬ್ಬರಿ 15 ಅಡಿ ಮಣ್ಣು ಅಗೆದು ಬಾವಿ ತೋಡಿದ್ದಾರೆ.

ಪ್ರಮುಖ ಆರೋಪಿ ಹಿದಾಯತ್ ಅಬ್ದುಲ್‌ಘನಿ ಗುಜರಿ ವ್ಯಾಪಾರಿಯಾಗಿದ್ದು ಶಿರವಾಡದಲ್ಲೇ ಅಂಗಡಿ ಹೊಂದಿದ್ದಾನೆ. ಅಲ್ಲದೇ ಕಟ್ಟಡ ನಿರ್ಮಾಣ ಕೆಲಸವನ್ನ ಸಹ ಮಾಡಿಕೊಂಡಿದ್ದ ಎನ್ನಲಾಗಿದ್ದು ಜನರೊಂದಿಗೆ ಉತ್ತಮ ವ್ಯವಹಾರ ಸಂಬoಧವನ್ನ ಇರಿಸಿಕೊಂಡಿದ್ದಾನೆ. ಆದರೆ ಆತ ಈ ರೀತಿ ಕೃತ್ಯ ಎಸಗಿದ್ದು ಯಾಕೆ ಅನ್ನೋದು ಪರಿಚಯಸ್ಥರಿಗೆ ಅಚ್ಚರಿ ಮೂಡಿಸಿದೆ.

ಸದ್ಯ ಆರೋಪಿಗಳನ್ನ ವಶಕ್ಕೆ ಪಡೆದಿರುವ ಅರಣ್ಯ ಇಲಾಖೆ ಅಧಿಕಾರಿಗಳು 1973ರ ಕರ್ನಾಟಕ ಅರಣ್ಯ ಕಾಯ್ದೆಯಡಿ ಅಕ್ರಮ ಪ್ರವೇಶ, ಅರಣ್ಯ ಪ್ರದೇಶವನ್ನ ಇತರೆ ಕೆಲಸಕ್ಕೆ ಬಳಸಿಕೊಂಡಿರುವ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದುವರೆಗೆ ಪ್ರಕರಣದಲ್ಲಿ ನಾಲ್ವರು ಪತ್ತೆಯಾಗಿದ್ದು ಇವರಿಗೆ ಇನ್ಯಾರದ್ದಾದರೂ ಬೆಂಬಲ ಇತ್ತಾ ಅನ್ನೋದು ತನಿಖೆಯ ಬಳಿಕವೇ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button