Focus NewsImportant
Trending

ಪೋಸ್ಟ್ ಮೆನ್ ದಯಾ ವಿಧಿವಶ: ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರು

ಅಂಕೋಲಾ: ಪೋಸ್ಟ್ ಮೆನ್ ದಯಾ ಎಂದೇ ತಾಲೂಕಿನಾದ್ಯಂತ ಚಿರಪರಿಚಿತರಾಗಿದ್ದ, ಪುರಸಭೆ ವ್ಯಾಪ್ತಿಯ ಲಕ್ಷ್ಮೇಶ್ವರ ವಾರ್ಡಿನ ಭಟ್ಟನ ಭಾಗ ನಿವಾಸಿ ದಯಾನಂದ ವೆಂಕಟ್ರಮಣ ನಾಯ್ಕ (70) , ಡಿಸೆಂಬರ್ 21 ರ ಬುಧವಾರ ಬೆಳಗಿನ ಜಾವ ವಿಧಿವಶರಾದರು. ಮೃತ ದಯಾನಂದ ನಾಯ್ಕ ಈ ಹಿಂದೆ ಅಂಚೆ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಕಳೆದ ಕೆಲವು ವರ್ಷಗಳ ಹಿಂದೆ ಹೃದಯ ( ಬೈಪಾಸ್ ) ಸರ್ಜರಿಗೊಳಗಾಗಿದ್ದರೂ,ಲವಲವಿಕೆಯಿಂದಲೇ ಜೀವನ ಸಾಗಿಸುತ್ತಾ ಸಮಾಜದ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳಿ ಬದುಕಿದ್ದರು.

ಊರಿನಲ್ಲಿ ನಡೆಯುವ ಯುಗಾದಿ  ಹಬ್ಬ ಮತ್ತಿತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದರು. ನಿವೃತ್ತಿ ನಂತರ   ಜನಸೇವೆ ಮಾಡುವ ಇಂಗಿತ ವ್ಯಕ್ತಪಡಿಸಿ ಸ್ಥಳೀಯ ಸಂಸ್ಥೆ ಚುನಾವಣೆಗೂ ಸ್ಪರ್ಧಿಸಿದ್ದರು. ಮೃದು ಸ್ವಭಾವದ ಇವರು ತಮ್ಮ ಹಾಸ್ಯ ಪ್ರವತ್ತಿ ಮೂಲಕ ಆತ್ಮೀಯರನ್ನು ನಗಿಸಿ, ತಾನು ಖುಷಿ ಪಡುವ ಸ್ವಭಾವ ಇವರದ್ದಾಗಿತ್ತು. ಮೃತರಿಗೆ ಪತ್ನಿ , ಓರ್ವ ಮಗ, ಮೂವರು ಪುತ್ರಿಯರಿದ್ದು ಇವರಲ್ಲಿ ಈರ್ವರ ವಿವಾಹವಾಗಿ ತುಂಬು ಸಂಸಾರ ನಡೆಸುತ್ತಿದ್ದಾರೆ.,ಕಿರಿಯ ಕುವರಿ ಗೋವಾದಲ್ಲಿ ಖಾಸಗೀ  ಉದ್ಯೋಗದಲ್ಲಿದ್ದು,ಇತ್ತೀಚಿಗಷ್ಟೇ ತನ್ನ ತಂದೆಯನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ,ಆರೋಗ್ಯ ತಪಾಸಣೆಗೆ ಕಾಳಜಿ ತೆಗೆದುಕೊಂಡಿದ್ದರು.

ಎಂದಿನಂತೆ ಓಡಾಡಿಕೊಂಡು ರಾತ್ರಿ ಮಲಗಿದ್ದ ದಯಾ ನಾಯ್ಕ ಇವರು ಬೆಳಗಿನ ಜಾವ 3.30 ರ ಸುಮಾರಿಗೆ ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರಳೆದರೆಂದು ಕುಟುಂಬದವರು  ತಿಳಿಸಿದ್ದಾರೆ.ಇವರ ನಿಧನದ ಸುದ್ದಿ ತಿಳಿದ ಕುಟುಂಬಸ್ಥರು,ಬಂಧುಗಳು, ಹಿತೈಷಿಗಳು,ಆಪ್ತರು, ಸುತ್ತಮುತ್ತಲಿನ  ನೂರಾರು ಜನರು ಮೃತರ ಅಂತಿಮ ದರ್ಶನ ಪಡೆದರು. ಕೋಟೆವಾಡದ ಹಿಂದೂ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.ವಿವಿಧ ಸ್ಥರದ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು,ಊರ ಪ್ರಮುಖರು,ಅಂಚೆ ಇಲಾಖೆಯವರು ಸೇರಿದಂತೆ ಹಲವರು ದಯಾನಂದ ನಾಯ್ಕ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 

 ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button