ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿಷ್ಣುವರ್ಧನ್ ಎನ್ ಅವರು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದು, ತಾವು ಅಧಿಕಾರ ಸ್ಪೀಕರಿಸಿದ ಬಳಿಕ ಮೊದಲ ಬಾರಿಗೆ ಅಂಕೋಲಾ ಪೊಲೀಸ್ ಠಾಣೆಗೆ ಭೇಟಿ ನೀಡಿ, ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು.
ಕಾರು, ಬಸ್ ಹಾಗೂ ಬೈಕ್ ನಡುವೆ ಸರಣಿ ಅಪಘಾತ: ಬಸ್ ಅಡಿ ಚಕ್ರಕ್ಕೆ ಸಿಲುಕಿ ಓರ್ವ ಸಾವು: ಇಬ್ಬರು ಮಕ್ಕಳಿಗೆ ಗಾಯ
ಜಿಲ್ಲಾ ಪೊಲೀಸ್ ಮುಖ್ಯಸ್ಥರು ಮೊದಲ ಬಾರಿಗೆ ತಮ್ಮ ಠಾಣೆಗೆ ಆಗಮಿಸುತ್ತಿರುವದರಿಂದ ಸ್ವಾಗತಕ್ಕೆ ಸಜ್ಜಾಗಿ ನಿಂತಿದ್ದ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಮತ್ತು ಪಿ ಎಸ್ ಐ ಪ್ರವೀಣ ಕುಮಾರ, ಪ್ರೇಮನಗೌಡ ಪಾಟೀಲ್ ಮತ್ತು ಇತರೆ ಸಿಬ್ಬಂದಿಗಳು ಗೌರಪೂರ್ವಕವಾಗಿ ಬರಮಾಡಿಕೊಂಡರು.
ಠಾಣೆಗೆ ಬೇಟಿ ನೀಡಿದ ಪೊಲೀಸ್ ವರಿಷ್ಠ ವಿಷ್ಣುವರ್ಧನ್ ಠಾಣೆಯ ಒಳ ಆವರಣ ವೀಕ್ಷಿಸಿ, ನಂತರ ಕೆಲವೊಂದು ಪ್ರಮುಖ ಕಡತಗಳನ್ನು ಪರಿಶೀಲಿಸಿ ಬೀಟ್ ವ್ಯವಸ್ಥೆ ಕುರಿತು ಮಾಹಿತಿ ಪಡೆದುಕೊಂಡರು. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇನ್ನಷ್ಟು ಚುರುಕಾಗಿ ಕೆಲಸ ಮಾಡುವಂತೆ ಸೂಚಿಸಿದರು. ಠಾಣೆಯ ಒಂದು ಹಳೆ ಜೀಪ್ ( ಡಕೋಟಾದಂತಿರುವ ) ಎಸ್ಕಾರ್ಟ್ ವ್ಯವಸ್ಥೆ ಮತ್ತಿತರ ತುರ್ತು ಸಂದರ್ಭಗಳಲ್ಲಿ ಆಗಾಗ ಕೈ ಕೊಡುತ್ತಿರುವುದರ ಬಗ್ಗೆ ಗಮನಕ್ಕೆ ತಂದಾಗ, ಹೊಸ ವಾಹನ ವ್ಯವಸ್ಥೆಯನ್ನು ಆದಷ್ಟು ಬೇಗ ಕಲ್ಪಿಸಲು ಯತ್ನಿಸುವುದಾಗಿ ತಿಳಿಸಿ,ಇಲಾಖೆ ಮಟ್ಟದಲ್ಲಿ ಚರ್ಚಿಸಿ ಸಿಬ್ಬಂದಿಗಳ ಇತರೆ ಕುಂದು ಕೊರತೆ ಇದ್ದರೂ ಬಗೆಹರಿಸಲಾಗುವುದು ಎಂದರು.
ಮಟ್ಕಾ ಮತ್ತಿತರ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕುವುದಾಗಿ ಹೇಳಿದ ಎಸ್ ಪಿ ಬೀಟ್ ವ್ಯವಸ್ಥೆ ಮತ್ತಷ್ಟು ಗಟ್ಟಿಗೊಳಿಸಲು ಕ್ರಮ ಕೈಗೊಳ್ಳುವಂತೆ ಸಿಪಿಐ ಅವರಿಗೆ ಸೂಚಿಸಿದರು. ಇತ್ತೀಚಿಗೆ ಅಂಕೋಲಾದಲ್ಲಿ ಸಿನಿಮೀಯ ರೀತಿಯಲ್ಲಿ ನಡೆದ ಕೆಟಿಎಂ ಹೊಸ ಡ್ಯುಕ್ ಬೈಕ್ ಕಳ್ಳತನ ಪ್ರಕರಣದ ಕುರಿತಂತೆ ಉತ್ತರಿಸಿದ ಎಸ್ ಪಿ ವಿಷ್ಣುವರ್ಧನ್, ಅಂಗಡಿ ಮತ್ತಿತರ ವಾಣಿಜ್ಯ ಕಟ್ಟಡಗಳು,ಮನೆ, ದೇವಸ್ಥಾನ ಹೀಗೆ ಸಾಧ್ಯವಾದಲೆಲ್ಲಾ ಸಾರ್ವಜನಿಕರು ಹೆಚ್ಚು ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳುವುದರಿಂದ ಅವರ ಸ್ವತ್ತುಗಳ ರಕ್ಷಣೆಗೂ ಮತ್ತು ಪೋಲೀಸ್ ತನಿಖೆ ದೃಷ್ಟಿಯಿಂದಲೂ ಅನುಕೂಲಕರ .
ಹೀಗಾಗಿ ಸಿಸಿ ಕ್ಯಾಮರಾ ಅಳವಡಿಸಿಕೊಂಡು ಸಾರ್ವಜನಿಕರು ಇಲಾಖೆ ಜೊತೆ ಸಹಕರಿಸ ಬೇಕೆಂದು ಕರೆ ನೀಡಿದರು. ಇದು ತಾಲೂಕಿಗೆ ನನ್ನ ಪ್ರಥಮ ಭೇಟಿಯಾಗಿದ್ದು,ಇಲ್ಲಿಯ ಒಟ್ಟಾರೆ ವಾತಾವರಣದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕಾಲಾವಕಾಶ ಬೇಕಿದೆ. ಆ ಬಳಿಕವಷ್ಟೇ ಮತ್ತೆ ಏನೆಲ್ಲಾ ಆಡಳಿತಾತ್ಮಕ ಸುಧಾರಣೆ ತರಲು ಸಾಧ್ಯ ಎಂದು ಯೋಚಿಸಬಹುದು.
ಮತ್ತೆ ಮತ್ತೆ ತಾಲೂಕಿಗೆ ಭೇಟಿ ನೀಡುತ್ತಿರುತ್ತೇನೆ ಎಂದು ಹೇಳಿ, ನಗು ಮೊಗದಿಂದಲೇ ಜಿಲ್ಲಾ ಕೇಂದ್ರ ಕಾರವಾರಕ್ಕೆ ಮರಳಿ ಹೊರಟರು. ಇನ್ನೂ ಯಾಕೆ ಬಂದಿಲ್ಲ ನಮ್ಮ ಎಸ್ ಪಿ ಸಾಹೇಬರು ಎ೦ದು ಬಹು ದಿನಗಳಿಂದ ಕಾತರಿಸುತ್ತಿದ್ದ ತಾಲೂಕಿನ ಕೆಲ ಸಾರ್ವಜನಿಕರು,ಜಿಲ್ಲೆಯ ಹಿರಿಯ ಅಧಿಕಾರಿ ಬಂದಿರುವ ಸುದ್ದಿ ಕೇಳಿ, ಸ್ಟೇಶನ್ ಎದುರಿನ ಸರ್ಕಲ್ ಬಳಿ ನಿಂತು ಸ್ಟೇಶನನತ್ತ ಇಣುಕಿ ನೋಡುತ್ತ, ತಮ್ಮ – ತಮ್ಮೊಳಗೆ ಅಧಿಕಾರಿಯ ದೇಹಧಾಡ್ಯತೆ, ತಾಲೂಕಿನಲ್ಲಿ ಮುಂದೆ ತೆಗೆದುಕೊಳ್ಳ ಬಹುದಾದ ಬಿಗು ಕ್ರಮಗಳ ಬಗ್ಗೆ ಚರ್ಚಿಸುತ್ತಿರುವಂತೆ ಕಂಡುಬಂತು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ