ಅಂಕೋಲಾ : ಹೋಲ್ ಸೇಲ್ ಕಿರಾಣಿ ಅಂಗಡಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು, ಲಕ್ಷಾಂತರ ರೂ ಮೌಲ್ಯದ ಕಿರಾಣಿ ಸಾಮಾನುಗಳು ಸುಟ್ಟು ಕರಕಲಾದ ಘಟನೆ ರಾ.ಹೆ 66ರ ಅಂಚಿನ ಬಾರ್ ಮತ್ತು ಕಟ್ಟಿಗೆ ಮಿಲ್ ಹತ್ತಿರ ಸಂಭವಿಸಿದೆ. ಚಂದ್ರಿಕಾ ಪ್ರೊವಿಸನ್ ಸ್ಟೋರ್ಸ್ ಎನ್ನುವುದು ತಾಲೂಕಿನ ಪ್ರಖ್ಯಾತ ಹೋಲ್ ಸೇಲ್ ಮತ್ತು ರಿಟೇಲ್ ಅಂಗಡಿಯಾಗಿದ್ದು, ಕಡಿಮೆ ದರದಲ್ಲಿ ಗುಣಮಟ್ಟದ ಸಾಮಾನುಗಳು ಇಲ್ಲಿ ದೊರೆಯುತ್ತದೆ ಎ೦ದು ಹಲವು ಗ್ರಾಹಕರು ಇದೇ ಅಂಗಡಿಯಲ್ಲಿ ವ್ಯವಹರಿಸುತ್ತಿದ್ದು, ಹಳ್ಳಿಗಾಡಿನ ಚಿಕ್ಕ ಪುಟ್ಟ ಅಂಗಡಿಕಾರರು ಸಹ ಇಲ್ಲಿಂದಲೇ ಸಾಮಾಗ್ರಿಗಳನ್ನು ಖರೀದಿಸಿ, ತಮ್ಮ ಅಂಗಡಿಯಲ್ಲಿಟ್ಟು ಮರು ಮಾರಾಟ ಮಾಡುತ್ತಿದ್ದರು.
ಡಿವೈಡರ್ ಹಾರಿ ಅಡ್ಡ ಬಂದು ಬಸ್ಸಿಗೆ ಬಡಿದುಕೊಂಡ ಕಾರು: ಹೊಸ ವರ್ಷದ ಮೊದಲ ದಿನವೇ ನಾಲ್ವರ ದುರ್ಮರಣ
ಕೆಲ ಪ್ರಮುಖ ಉತ್ಪನ್ನಗಳ ಡಿಸ್ಟ್ರಿಬ್ಯುಟರ್ ಆಗಿಯೂ ಇದೇ ಅಂಗಡಿಯವರು ಗುರುತಿಸಿಕೊಂಡಿದ್ದು ಪ್ರತಿ ದಿನ ಇಲ್ಲಿ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಲಾಗುತ್ತಿತ್ತು ಎನ್ನಲಾಗಿದ್ದು, ದೊಡ್ಡ ಪ್ರಮಾಣದ ಈ ಅಂಗಡಿ ಮತ್ತು ಹೊಂದಿಕೊಂಡಿರುವ ಹಿಂಬದಿ ಗೋಡನ್ ನಲ್ಲಿ ದಾಸ್ತಾನು ಇಡಲಾದ ಸಾಮಾನಗಳೆಲ್ಲ ಬಹುತೇಕ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ ಎನ್ನಲಾಗಿದ್ದು, ಲಕ್ಷಾಂತರ ಮೌಲ್ಯದಿಂದ ಕೋಟಿ ರೂ ಮೌಲ್ಯದ ವರೆಗೆ ಹಾನಿ ಸಂಭವಿಸಿರುವ ಸಾಧ್ಯತೆ ಕೇಳಿ ಬಂದಿದ್ದು ,ಒಟ್ಟಾರೆ ಹಾನಿಯ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರ ಬೇಕಿದೆ.
ಅದಾವುದೋ ಕಾರಣದಿಂದ ಅಂಗಡಿ ಒಳಗಿಂದ ಒಳಗೆ ಬೆಂಕಿ ಕಾಣಿಸಿಕೊಂಡು ಮಧ್ಯರಾತ್ರಿ ವೇಳೆ ದಾಸ್ತಾನು ಕೊಠಡಿ ಹಾಗೂ ಸಾಮಾಗ್ರಿಗಳಿಗೆ ಹೊತ್ತಿ ಉರಿದಿರುವ ಸಾಧ್ಯತೆ ಕೇಳಿ ಬಂದಿದ್ದು, ತಗಡಿನ ಮೇಲ್ಚಾವಣಿ ಇರುವುದರಿಂದ ಒಮ್ಮೇಲೆ ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ. ಒಳಗಡೆಯಿಂದ ಚಟ ಪಟ ಸದ್ದು ಕೇಳಿ ಬರಲಾರ೦ಭಿಸಿದಂತೆ ಹತ್ತಿರದಲ್ಲೇ ಇದ್ದ ವಾಚಮನ್ ಓರ್ವ ಕಳ್ಳರಿರಬಹುದೇ ಎಂದು ನೋಡಲು ಹೋದಾಗ ಬೆಂಕಿ ಅವಘಡ ವಾಗಿರುವುದು ಗಮನಕ್ಕೆ ಬಂದು, ಪಕ್ಕದ ಬಾರ್ ಕೆಲಸಗಾರರು ಮತ್ತು ತಮ್ಮ ಮಾಲಕರಿಗೆ ವಿಷಯ ತಿಳಿಸಿದರು ಎನ್ನಲಾಗಿದೆ.
ಈ ವಿಷಯನ್ನು ನಂತರ ಅಗ್ನಿ ಶಾಮಕ ಠಾಣೆಗೂ ತಿಳಿಸಲಾಗಿ, ಎರಡು ವಾಹನಗಳಲ್ಲಿ ಆಗಮಿಸಿದ ಅಗ್ನಿಶಾಮಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ತಡ ರಾತ್ರಿಯಿಂದ ಬೆಳಗಿನ ವರೆಗೆ ನಿರಂತರ ಕಾರ್ಯಾಚರಣೆ ನಡೆಸಿ ತಮ್ಮ ವಾಹನಕ್ಕೆ 6 ಕ್ಕೂ ಹೆಚ್ಚು ಬಾರಿ ನೀರು ತುಂಬಿಕೊಂಡು, ಅಗ್ನಿ ಶಮನಕ್ಕೆ ಕರ್ತವ್ಯ ನಿರ್ವಹಿಸಿದರು. ಇದೇ ವೇಳೆ ಹೆಸ್ಕಾಂ ಸಿಬ್ಬಂದಿಗಳು ಆಗಮಿಸಿ ಕೆಲ ಮುಂಜಾಗೃತಾ ಕ್ರಮ ಕೈಗೊಂಡರು. ಅಕ್ಕ ಪಕ್ಕಗಳಲ್ಲೇ ಕಟ್ಟಿಗೆ ಮಿಲ್ ಗಳಿರುವುದು ಸ್ಥಳೀಯರ ಆತಂಕ ಹೆಚ್ಚುವಂತೆ ಮಾಡಿತ್ತಾದರೂ, ಅದೃಷ್ಟವಶಾತ್ ಬೆಂಕಿ ಪಸರಿಸದೇ ಸಂಭವನೀಯ ಇನ್ನಷ್ಟು ಹಾನಿ ತಪ್ಪಿದಂತಾಗಿದೆ.
ಕಿರಾಣಿ ಅಂಗಡಿಯಲ್ಲಿದ್ದ ಸಾಮಾಗ್ರಿಗಳು ಸುಟ್ಟು ಉಂಟಾದ ದಟ್ಟ ಹೊಗೆ ಮತ್ತು ಉಸಿರಾಡಿಸಲು ಕಷ್ಟಕರವಾದ ವಾಸನೆಯಿಂದ ಗೋಡನ್ ಒಳಗೆ ಪ್ರವೇಶಿಸಲು ಕಷ್ಟ ಸಾಧ್ಯವಾಗಿ, ಕಾರ್ಯಾಚರಣೆಗೆ ತೊಡಕಾಗಿತ್ತು ಎನ್ನಲಾಗಿದ್ದು, ಕಾರ್ಯಾಚರಣೆಗೆ ಅನುಕೂಲವಾಗುವಂತೆ ಕಟ್ಟಡದ ಒಂದು ಬದಿಯ ಹಳೆಯ ಕಿಡಕಿ ತೆರವುಗೊಳಿಸಿ ಕಾರ್ಯಾಚರಣೆ ಮುಂದುವರೆಸಲಾಯಿತು ಎನ್ನಲಾಗಿದೆ. ಸ್ಥಳೀಯರು , ವಂದಿಗೆ ಗ್ರಾಮಸ್ಥರು ಸಹಕರಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ