Important
Trending

ಗೋವಾ ಮದ್ಯ ಅಕ್ರಮ ಸಾಗಾಟ: ಬಸ್ ನಿಲ್ದಾಣದ ಒಳಮಾರ್ಗದ ಬಳಿ ದಾಳಿ: ಆರೋಪಿ ವಶ

ಬೇಕಾಬಿಟ್ಟಿ ಮದ್ಯ ಮಾರಾಟ ಹಾಗೂ ಸಾಗಾಟಕ್ಕಿಲ್ಲ ಕಡಿವಾಣ ?

ಅಂಕೋಲಾ: ಯಾವುದೇ ಪರವಾನಗಿ ಇಲ್ಲದೇ ಗೋವಾ ರಾಜ್ಯದಲ್ಲಿ ತಯಾರಾದ 37.5 ಲೀಟರ್ ಗೋವಾ ಮದ್ಯವನ್ನು ಅಂಕೋಲಾ ಬಸ್ ನಿಲ್ದಾಣದ ಒಳಗೆ ಹೋಗುವ ಮಾರ್ಗದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದಾಗ ದಾಳಿ ನಡೆಸಿದ ಅಂಕೋಲಾ ವಲಯ ವ್ಯಾಪ್ತಿಯ ಅಬಕಾರಿ ಇಲಾಖೆ ಸಿಬ್ಬಂದಿಗಳು ಗೋವಾ ರಾಜ್ಯದ ಮದ್ಯ ಜಪ್ತುಪಡಿಸಿಕೊಂಡು, ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಗದಗ ಜಿಲ್ಲೆಯ ರೋಣ ತಾಲೂಕಿನ ನಾಗರಾಜ ಹುಲ್ಲಪ್ಪ ವಡ್ಡರ್ ಬಂಧಿತ ಆರೋಪಿಯಾಗಿದ್ದು ಈತ ಸುಮಾರು 6 ಸಾವಿರ ರೂಪಾಯಿ ಮೌಲ್ಯದ ಗೋವಾ ಸರಾಯಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆಯವರು ಅಂಕೋಲಾ ಬಸ್ ನಿಲ್ದಾಣಕ್ಕೆ ಹೋಗುವ ಒಳ ಮಾರ್ಗದಲ್ಲಿ ದಾಳಿ ನಡೆಸಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಅಬಕಾರಿ ನಿರೀಕ್ಷಕ ರಾಹುಲ್ ನಾಯಕ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ, ಉಪ ನಿರೀಕ್ಷಕ ಟಿ.ಬಿ.ಗೊಂಡ ಮತ್ತು ಸಿಬ್ಬಂದಿಗಳಾದ ಶ್ರೀಶೈಲ್ ಹಡಪದ ಮತ್ತು ಬಸಪ್ಪ ಅಂಗಡಿ ಪಾಲ್ಗೊಂಡಿದ್ದರು. ಅಬಕಾರಿ ಇಲಾಖೆ ಗೋವಾ ರಾಜ್ಯದ ಅಕ್ರಮ ಮದ್ಯ ಸಾಗಾಟದ ವಿರುದ್ಧ ಆಗಾಗ ದಾಳಿ ನಡೆಸಿದ ಕುರಿತು ಹಲವೆಡೆಯಿಂದ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿದೆ.

ಈ ನಡುವೆ ಕರ್ನಾಟಕದಲ್ಲಿ ತಯಾರಾದ ಮದ್ಯದ ಬೇಕಾಬಿಟ್ಟಿ ಮಾರಾಟ ಮತ್ತು ಸಾಗಾಟಕ್ಕೆ ಅವಕಾಶ ನೀಡಲಾಗಿದೆಯೇ ? ಅಬಕಾರಿ ಮತ್ತಿತರ ಸಂಬಂಧಿತ ಇಲಾಖೆಗಳಿಗೆ ಇಲ್ಲಿ ನಡೆಯುವ ಅಕ್ರಮ ಹೆಚ್ಚಾಗಿ ಗಮನಕ್ಕೆ ಬರುತ್ತಿಲ್ಲವೇ ಅಥವಾ ಬಂದರೂ ನಾಮಕಾವಾಸ್ತೆ ಅಲ್ಲೆಲ್ಲ ಕಣ್ಮುಚ್ಚಿ ಬಂದು – ಹೋಗುವುದು ಯಾಕೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬಂದಂತಿದೆ. ತಾಲೂಕಾ ಕಾರ್ಯ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ CL 2ನಡಿ ಬರುವ 6 ರಿಟೇಲ್ ಶಾಪ್ ( ವೈನ್ ಶಾಪ್ ಗಳು) ಸನ್ನದು ನಿಯಮಕ್ಕೆ ಅನುಗುಣವಾಗಿ ಮಾರಾಟ ಪ್ರಕ್ರಿಯೆ ನಡೆಸುತ್ತಿವೆಯೇ ? ಕೇವಲ ಕೌಂಟರ್ ಸೇಲ್ ನಡೆಸಬೇಕಾದ ಇವರು ಬಹುತೇಕ ಕಡೆ ತಮ್ಮ ಅಂಗಡಿ ಮುಂಗಟ್ಟು ಮತ್ತು ಅಕ್ಕ ಪಕ್ಕಗಳಲ್ಲಿ ರಾಜಾರೋಷವಾಗಿ ಕುಡಿತಕ್ಕೆ ಅವಕಾಶ ಮಾಡಿಕೊಡುತ್ತಿರುವುದು, ಎಂ.ಆರ್. ಪಿ ದರಕ್ಕಿಂತಲೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಕುರಿತು, ಮತ್ತು ತಮ್ಮಲ್ಲಿಂದ ಬೈಕ್ ಮತ್ತಿತರ ವಾಹನಗಳಲ್ಲಿ ಎಷ್ಟು ಬೇಕೋ ಅಷ್ಟು ಮಧ್ಯ ಸಾಗಾಟಕ್ಕೆ ಅನುಕೂಲ ಮಾಡಿಕೊಟ್ಟು ಗಲ್ಲಿ ಗಲ್ಲಿಗಳಲ್ಲಿ , ಸಣ್ಣ ಪುಟ್ಟ ಅಂಗಡಿಗಳಲ್ಲಿ ಬೇಕಾಬಿಟ್ಟಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಂತಿದೆ ಎಂಬ ಮಾತು ಕೇಳಿ ಬರಲಾರಂಭಿಸಿದೆ..

ಅದಕ್ಕೂ ಮಿಗಿಲಾಗಿ ಶಾಲಾ – ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಉದ್ಯೋಗಸ್ಥರು ಹೆಚ್ಚಿಗೆ ಸಂಖ್ಯೆಯಲ್ಲಿ ಓಡಾಡುವ ಕೆ.ಸಿ ರಸ್ತೆ ಮತ್ತಿತರೆಡೆ ನಿಯಮ ಮೀರಿ ಬೆಳಿಗ್ಗೆ ಬಹುಬೇಗನೆ ತೆರೆದಿರುವ ಇಂತಹ ವೈನ್ ಶಾಪ್ ಗಳಿಂದ ಆಗುವ ಕಿರಿಕಿರಿ, ತೊಂದರೆಗೆ ಕಡಿವಾಣ ಹಾಕಲು ಇಲಾಖೆಯಿಂದ ಸಾಧ್ಯವಿಲ್ಲವೇ ಎನ್ನುವಂತಾಗಿದೆ. ಇನ್ನು ತಾಲೂಕ ವ್ಯಾಪ್ತಿಯ ಎಂ.ಎಸ್. ಐಎಲ್, ಸಿ. ಎಲ್ 7, ಸಿ. ಎಲ್ 9, ಸಿ ಎಲ್ 8 ಸೇರಿದಂತೆ ಒಟ್ಟಾರೆಯಾಗಿ ಸರ್ಕಾರ ಮತ್ತು ಇಲಾಖೆಯ ಪರವಾನಿಗೆಯಡಿ ನಡೆಸಬೇಕಾದ ಬಾರ್ ಗಳು, ಬಾರ್ ಮತ್ತು ರೆಸ್ಟೋರೆಂಟ್ ಸೇರಿದಂತೆ ಪರವಾನಿಗೆ ಪಡೆದ ಎಲ್ಲಾ ಮಧ್ಯ ಮಾರಾಟಗಾರರ ಪೈಕಿ ಯಾರೆಲ್ಲಾ ಅಬಕಾರಿ ನಿಯಮಾವಳಿಗಳನ್ನು ಗಾಳಿಗೆ ತೂರಿ, ಸಮಯ ಮಿತಿ ಮರೆತು ಮತ್ತಿತರ ರೀತಿಯಲ್ಲಿ ಸನ್ನದು ನಿಯಮ ಉಲ್ಲಂಘಿಸಿ ಅಕ್ರಮವಾಗಿ ವ್ಯವಹಾರ ನಡೆಸುತ್ತಿದ್ದಾರೆ.

ಹಾಗೊಮ್ಮೆ ಸನ್ನದು ನಿಯಮ ಮೀರಿದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಇಲಾಖೆ ಹಿಂಜರಿಯುವುದೇಕೆ ಎನ್ನುವ ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದ್ದು, ಸಂಬಂಧಿತ ಇಲಾಖೆಗಳು ಬಿಗು ಕ್ರಮಗಳ ಮೂಲಕ ತಮ್ಮ ದಕ್ಷತೆ ತೋರಿಸಬೇಕಿದೆ.ಇಲ್ಲದಿದ್ದರೆ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವಂತೆ ಇಲಾಖೆಯ ಈ ಜಾಣಗುರುಡುತನ ಹಲವು ಸಂಶಯಗಳಿಗೆ ಕಾರಣವಾಗಲಿದೆ. ಸನ್ನದು ನಿಯಮಾವಳಿ ಮೀರಿದವರ ಮೇಲೆ ಇಲಾಖೆ ಅಧಿಕಾರಿಗಳು ಈಗಾಗಲೇ ಕೆಲ ಕ್ರಮ ಕೊಳ್ಳುತ್ತಿರಬಹುದಾದರೂ ಅದು ಇನ್ನಷ್ಟು ಚುರುಕಾಗಿ ನಡೆಯ ಬೇಕಿದೆ ಎನ್ನುವ ಮಾತು ಪ್ರಜ್ಞಾವಂತ ವಲಯದಿಂದ ಕೇಳಿ ಬಂದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button