ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದಲ್ಲಿರುವ ಮಾಸೂರು ಒಂದು ಪುಟ್ಟ ಹಳ್ಳಿ. ಇಲ್ಲಿ ಹರಿಯುತ್ತಿರುವ ಅಘನಾಶಿನಿ ನದಿಯ ತಟದಲ್ಲಿ ಮಾಸೂರು ಮತ್ತು ಸುತ್ತಮುತ್ತಲಿನ ಊರುಗಳ ಆರಾಧ್ಯ ದೇವರಾದ ಶ್ರೀ ಬಬ್ರುಲಿಂಗೇಶ್ವರನ ದಿವ್ಯ ದೇವಾಲಯವಿದೆ. ಈ ದೇವಾಲಯದ ಸುತ್ತಲೂ ನೀರಿನಿಂದ ಆವೃತವಾಗಿರುವುದರಿಂದ ಇದನ್ನು ಮಾಸೂರು ಕೂರ್ವೆ ಎಂದು ಕರೆಯುತ್ತಾರೆ.
ನಮ್ಮ ಊರಿನ ಜನರು ಮಳೆಗಾಲದಲ್ಲಿ, ಬಿರುಗಾಳಿಯಲ್ಲಿ, ಬಿರು ಬೇಸಿಗೆಯಲ್ಲಿ, ಚುಮು ಚುಮು ಚಳಿಯಲ್ಲಿ ದೋಣಿಗಳ ಮೂಲಕ ನದಿಯನ್ನು ದಾಟಿ, ಕಷ್ಟಪಟ್ಟು ಪರಿಶ್ರಮದಿಂದ, ಗದ್ದೆಯನ್ನು ನೇಗಿಲು ಅಥವಾ ಟ್ರ್ಯಾಕ್ಟರ್ ನಿಂದ ಊಳದೇ, ಬೆಳಿಗ್ಗೆಯಿಂದ ಸಂಜೆವರೆಗೂ ಕೇವಲ ಗುದ್ದಲಿಯನ್ನು ಮಾತ್ರ ಉಪಯೋಗಿಸಿ ಗದ್ದೆಯನ್ನು ಕಡಿದು, ಕೊಚ್ಚಿ ಹಸನು ಮಾಡಿ, ಬೀಜ ಬಿತ್ತಿ, ಫಸಲು ಬೆಳೆದು, ಕಟಾವು ಮಾಡಿ, ಅಲ್ಲೇ ಬಡಿದು, ಭತ್ತವನ್ನು ಹುಲ್ಲಿನಿಂದ ಪ್ರತ್ಯೇಕಿಸಿ, ಎಲ್ಲರೂ ಒಟ್ಟಿಗೆ ಭತ್ತವನ್ನು ಮನೆಗೆ ತಂದು ರೈಸ್ ಮಿಲ್ಲಿಗೆ ಸಾಗಿಸುವುದರಿಂದ “ಮಹಾ ಶೂರರರು” ಎಂದು ನಮ್ಮ ಜನರನ್ನು ಕರೆಯುತ್ತಿದ್ದರು, ಅದು ಕ್ರಮೇಣ ಮಾಶೂರ, ಮಾಸೂರ ಆಗಿ “ಮಾಸೂರು” ಎಂದು ನಮ್ಮ ಊರಿಗೆ ಹೆಸರು ಬಂತು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಮಾಸೂರು ಕಾಂಡ್ಲಾ ವನಗಳ ತವರೂರು ಎಂದು ಪ್ರಸಿದ್ಧಿ ಪಡೆಯುತ್ತಿದೆ.
ದಿನಾಂಕ 15-01-2023 ಮತ್ತು 16-01-2023ರಂದು ಶ್ರೀ ಬಬ್ರುಲಿಂಗೇಶ್ವರ ದೇವರ ಕಳಸ ಉತ್ಸವ ನಡೆಯುತ್ತದೆ. ಇದು ಇಲ್ಲಿನ ಅತ್ಯಂತ ದೊಡ್ಡ ಮತ್ತು ಸಂಭ್ರಮದ ಹಬ್ಬ. ಮೊದಲನೆಯ ದಿನ ಮಾಸೂರಿನ ಕಲಶ ದೇವಸ್ಥಾನ ಮತ್ತು ಕೋಮಾರ ಗೋಳಿ ಜೈನ ಜಟಕ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಿ, ಶ್ರೀ ಬಬ್ರುದೇವರ ಮತ್ತು ಬಾಗಿಲ ಬೀರ, ಸೂಲದ ಬೀರರ ಕಳಸಗಳು ಲುಕ್ಕೇರಿ ದೇವರಬೋಳೆಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಹೋಗುತ್ತದೆ. ಅಲ್ಲಿ ತುಲಾಭಾರ ಮತ್ತು ಸೇವೆಯ ನಂತರ ಭಕ್ತರ ಆರತಿಯನ್ನು ಸ್ವೀಕರಿಸುತ್ತಾ ಕಳಸಗಳು ಮರಳಿ ಮಾಸೂರಿನ ಕಳಶ ದೇವಾಲಯಕ್ಕೆ ಮರಳಿ ಬರುತ್ತವೆ. ಹೆಣ್ಣು ಮಕ್ಕಳ ಆರತಿ, ಗಂಡು ಮಕ್ಕಳ ಹೊಡೆ ಸೇವೆ ನಡೆಯುತ್ತವೆ.
ಎರಡನೆಯ ದಿನ ಕಳಸಗಳು ಎದ್ದು ಅಘನಾಶಿನಿ ನದಿಯ ಮೂಲಕ ದೋಣಿಯ ಮೇಲೆ ಸಂಚಾರ ಮಾಡಿ ಬಬ್ರುದೇವರ ಮಂದಿರಕ್ಕೆ ಹೋಗುತ್ತವೆ. ಹೋಗುವದಕ್ಕಿಂತ ಪೂರ್ವದಲ್ಲಿ ದುಷ್ಟ ಶಕ್ತಿಯನ್ನು ಮೆಟ್ಟುತ್ತಾ, ಶಿಷ್ಟ ಶಕ್ತಿಯನ್ನು ರಕ್ಷಿಸುತ್ತಾ, ಭಕ್ತರ ಸಮಸ್ಯೆಗಳಿಗೆ ವಿಚಾರದ ಮೂಲಕ ಪರಿಹಾರ ನೀಡುತ್ತಾ ಸಾಗುತ್ತವೆ. ಶ್ರೀ ಬಬ್ರುಲಿಂಗೇಶ್ವರನ ಸನ್ನಿಧಿಯಲ್ಲಿ ತುಲಾಭಾರ ಸೇವೆ ನಡೆಯುತ್ತದೆ.
ಇದೊಂದು ಅತ್ಯದ್ಭುತ ಮತ್ತು ಅಭೂತಪೂರ್ವ ಕಳಸ ಉತ್ಸವ. ಜೀವನದಲ್ಲಿ ಒಮ್ಮೆಯಾದರೂ ಮಾಸೂರಿನ ಕಳಸ ಉತ್ಸವ ನೋಡಿದರೆ ಮನಸ್ಸಿಗೆ ಶಾಂತಿ ಸಿಗುತ್ತದೆ. ಧನ್ಯತಾ ಭಾವ ಮೂಡುತ್ತದೆ. ಸರ್ವರೂ ಈ ಉತ್ಸವದಲ್ಲಿ ಪಾಲ್ಗೊಂಡು ಶ್ರೀ ಬಬ್ರುದೇವರ ಕೃಪೆಗೆ ಪಾತ್ರರಾಗಿ ಹಾಗೂ ದಿನಾಂಕ 18-01-2023ರಂದು ರಾತ್ರಿ 9.30ಕ್ಕೆ ಮಾಸೂರಿನಲ್ಲಿ ಶ್ರೀ ಬಬ್ರುಲಿಂಗೇಶ್ವರ ಯುವಕ ಮಂಡಳಿ ಸಂಯೋಜಿಸಿರುವ “ಸತ್ವಪರೀಕ್ಷೆ” ಯಕ್ಷಗಾನವಿದೆ ಎಂದು ಊರಿನ ಸಮಸ್ತ ಗ್ರಾಮಸ್ಥರು ವಿನಂತಿಸಿಕೊಂಡು ಸರ್ವರಿಗೂ ಆಹ್ವಾನಿಸಿದ್ದಾರೆ.
ವಿಸ್ಮಯ ನ್ಯೂಸ್, ಕುಮಟಾ