ಕಡ್ನೀರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ

ಹೊನ್ನಾವರ: `ಪಾಲಕರು ತಮ್ಮ ಮಕ್ಕಳಿಗೆ ಶೈಕ್ಷಣಿಕ ಬಳಕೆಗೆ ಮಾತ್ರ ಮೊಬೈಲ್ ನೀಡಬೇಕು. ಈಗಿನ ಪರಿಸ್ಥಿತಿಗೆ ಮೊಬೈಲ್ ಗೀಳಿನಿಂದ ಮಕ್ಕಳನ್ನು ಹೊರತರಬೇಕಾದ ತುರ್ತು ಇದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ಕಳವಳ ವ್ಯಕ್ತಪಡಿಸಿದರು. ತಾಲೂಕಿನ ಕಡ್ನೀರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರಲು ಕ್ರಮ ಕೈಗೊಳ್ಳಬೇಕು. ಮೊಬೈಲ್ ಬಳಕೆಯಿಂದ ಅನೇಕ ಅವಘಡಗಳು ಸಂಭವಿಸಿದೆ. ಮಕ್ಕಳು ಪುಸ್ತಕ ಓದುವ ಹವ್ಯಾಸ ಜೊತೆಗೆ ಯೋಗ ಮತ್ತು ಪ್ರಾಣಾಯಾಮ ಮಾಡಬೇಕು. ಮಕ್ಕಳಿಗೆ ಜಂಕ್ ಫುಡ್ನಿಂದ ದೂರವಿಡಬೇಕು. ಉತ್ತಮ ಸಂಸ್ಕಾರ, ಗುರು-ಹಿರಿಯರ ಮೇಲೆ ಗೌರವ ಇದ್ದಾಗ ಮಾತ್ರ ವಿದ್ಯಾರ್ಥಿಗಳನ್ನು ದೇಶದ ಉತ್ತಮ ಪ್ರಜೆಯನ್ನಾಗಿ ರೂಪಿಸಲು ಸಾಧ್ಯ ಎಂದರು.

ಕಡ್ನೀರು ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ತಾಲೂಕಿನಲ್ಲಿ 261 ಶಾಲೆಗಳಿದ್ದು, ಕೇವಲ 10 ಶಾಲೆಗಳಲ್ಲಿ 100ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೆಲ ಶಾಲೆಗಳಲ್ಲಿ 2 ರಿಂದ 10 ವಿದ್ಯಾರ್ಥಿಗಳಿರುವ ಶಾಲೆಗಳೂ ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳನ್ನು ನಡೆಸಲಾಗುತ್ತಿದೆ. ಕಡ್ನೀರು ಶಾಲೆಗಳಲ್ಲಿ 60 ವಿದ್ಯಾರ್ಥಿಗಳಿದ್ದು, ಪ್ರತಿಯೊಬ್ಬರೂ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಬೇಕು. ಕಡ್ನೀರು ಶಾಲಾ ದುರಸ್ಥಿಗೆ 1.5 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದರು.

ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಎಂ.ಜಿ.ನಾಯ್ಕ ಮಾತನಾಡಿ ಅನೇಕ ಶಾಲಾ ಕಾರ್ಯಕ್ರಮ ಗಮನಿಸಿದ್ದೇನೆ. ಆದರೆ ಕಡ್ನೀರು ಶಾಲೆಯ ವಿದ್ಯಾರ್ಥಿಗಳು ಸಮಯಪಾಲನೆ ಮತ್ತು ಶಿಸ್ತು ಅಳವಡಿಸಿಕೊಂಡು ಉತ್ತಮ ವ್ಯಾಸಂಗ ಮಾಡುತ್ತಿರುವುದು ಖುಷಿ ನೀಡಿದೆ. ಶ್ವೇತವರ್ಣದಲ್ಲಿ ಮಕ್ಕಳು ಶಿಸ್ತು, ವಿದೇಯತೆಯನ್ನು ಅಳವಡಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಸಾಧನೆಗೈದ ಲಕ್ಷ್ಮೀ ಗಣಪತಿ ನಾಯ್ಕ ಹಾಗೂ ಜ್ಯೋತಿ ಗೋಪಾಲ ನಾಯ್ಕ, ರಾಷ್ಟ್ರಮಟ್ಟದಲ್ಲಿ ಸಾಧನೆಮಾಡಿದ ರಮ್ಯಾ ಗಿರೀಶ ನಾಯ್ಕ ಹಾಗೂ ತೇಜಸ್ವಿನಿ ನಾಯ್ಕ ಅವರನ್ನು, ಆದರ್ಶ ವಿದ್ಯಾರ್ಥಿ ಕೀರ್ತನ್ ವಿನಾಯಕ ನಾಯ್ಕ, 6 ಮತ್ತು 7 ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರತಿಕ್ಷಾ ಶ್ರೀಕಾಂತ ನಾಯ್ಕ ಹಾಗೂ ರಕ್ಷಿತಾ ದಯಾನಂದ ನಾಯ್ಕ ಹಾಗೂ ಹೆಸ್ಕಾಂ ಮರಾಕಲ್ ಉಪಕೇಂದ್ರದ ಅಧಿಕಾರಿ ಶೇಖರ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.

ಗ್ರಾಪಂ ಸದಸ್ಯ ವಿನಯ ನಾಯ್ಕ ಮಕ್ಕಳ ಕೈಬರಹ ಪತ್ರಿಕೆ ಬಿಡುಗಡೆಗೊಳಿಸಿದರು. ಶಿಕ್ಷಕರ ಸಂಘದ ಉಪಾಧ್ಯಕ್ಷ ಸುರೇಶ ನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ದಿನೇಶ ನಾಯ್ಕ ಮಾತನಾಡಿದರು. ಉಪಾಧ್ಯಕ್ಷೆ ಪದ್ಮಾ ಉಲ್ಲಾಸ ಕಾಮತ್, ಗ್ರಾಪಂ ಸದಸ್ಯೆ ಮಲ್ಲಿಕಾ ಭಂಡಾರಿ, ಹಿರಿಯರಾದ ಮಂಜುನಾಥ ನಾಯ್ಕ, ತಿಮ್ಮಪ್ಪ ನಾಯ್ಕ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕಿ ಶಾರದಾ ಶರ್ಮಾ ಸ್ವಾಗತಿಸಿದರು. ಶಿಕ್ಷಕಿ ಭಾರತಿ ನಾಯ್ಕ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕರಾದ ಜ್ಯೋತಿ ಶೇಟ್ ನಿರೂಪಿಸಿದರು. ಎಚ್.ಎಂ.ನಾಯ್ಕ ವಂದಿಸಿದರು. ಅಂಗನವಾಡಿ ಶಿಕ್ಷಕಿ ಚಂದ್ರಕಲಾ ನಾಯ್ಕ, ಸಹಾಯಕಿ ವಿದ್ಯಾ, ಅಕ್ಷರದಾಸೋಹ ಸಿಬ್ಬಂದಿ ತಾರಾ, ಸುಶೀಲಾ ಸಹಕರಿಸಿದರು. ಸಭಾಕಾರ್ಯಕ್ರಮದ ನಂತರ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಸ್ಮಯ ನ್ಯೂಸ್, ಹೊನ್ನಾವರ

Exit mobile version