Follow Us On

WhatsApp Group
Important
Trending

ದೇವರೇ ಮೈ ಮೇಲೆ ಬಂದಂತೆ ಆವೇಶದಿಂದ ವರ್ತನೆ
ಮಹಿಳೆಗೆ ಮದುವೆಯ ಅಭಯ ನೀಡಿದ ದೈವನರ್ತಕ
ಎಲ್ಲೆಡೆ ವೈರಲ್ ಆಗಿದೆ ವಿಡಿಯೋ

ಅಂಕೋಲಾ: ಅದೊಂದು ದೇವತಾರಾಧನೆಯ ಸ್ಥಳ. ಅಲ್ಲಿ ದೇವತಾ ಕಾರ್ಯ ಮಾಡಿಕೊಂಡಿರಬೇಕಿದ್ದ ವ್ಯಕ್ತಿ ಯೋರ್ವ ತನ್ನ ಮನದಾಸೆಯನ್ನು ಪೂರೈಸಿಕೊಳ್ಳಲೋ ಅಥವಾ ಭಕ್ತರಾಗಿ ಬಂದು ಪರಿಚಯ ಮಾಡಿಕೊಂಡಿದ್ದ ಮಹಿಳೆಯ ಮನದಾಸೆ ಪೂರೈಸಲೋ ಎಂಬಂತೆ,ದೇವರೇ ಮೈ ಮೇಲೆ ಬಂದಂತೆ ಆವೇಶದಿಂದ ವರ್ತಿಸಿರುವ ವಿಡಿಯೋ ವೈರಲ್ ಆಗಿದ್ದು,ಪೂಜಾರಿ ಆಡಿದ ಮಾತಿನ ಮೂಲ ಕೆದಕುವಂತಾಗಿದೆ.

ದೈವ ಮತ್ತು ದೈವಭಕ್ತಿ ಕುರಿತು ಪ್ರಪಂಚದ ವಿವಿಧ ಧರ್ಮ, ಜಾತಿ ಜನಾಂಗಗಳಲ್ಲಿ ವಿಭಿನ್ನ ಆಚರಣೆ ಇದ್ದು , ಹಲವೆಡೆ ಇವು ಆಯಾ ಭಾಗದ ಜನರ ಭಕ್ತಿ,ಪರಂಪರೆ,ಆಚರಣೆ ಮೇಲೆ ನಿಂತಿದೆ.ಆಧುನಿಕತೆಯ ಇಂದಿನ ಕಾಲದಲ್ಲಿಯೂ ಆಸ್ತಿಕ ಭಕ್ತರೆನಿಸಿದ ಹಲವರು ತಾವು ನಂಬಿದ ದೇವರನ್ನೇ ಪೂಜಿಸಿಕೊಂಡು ಬಂದಿದ್ದರೆ,ಕೆಲ ನಾಸ್ತಿಕ ಭಕ್ತರು ದೇವರೇ ಇಲ್ಲ ಎಂದು ವಾದಿಸುವವರು ಇದ್ದಾರೆ.ಈ ನಡುವೆ ಕೆಲವರು ತಮ್ಮ ಅಜ್ಞಾನ ಇಲ್ಲವೇ ಮೂಡನಂಬಿಕೆಯಿಂದಲೂ ಹಲವು ಆಚರಣೆಗಳನ್ನು ಮುಂದುವರಿಸುತ್ತಿರುತ್ತಾರೆ. ಇಂತಹ ಆಚರಣೆಗಳೇ ಕೆಲವೊಮ್ಮೆ ಸಮಾಜದಲ್ಲಿ ನಾನಾ ಚರ್ಚೆಗಳನ್ನು ಹುಟ್ಟಿ ಹಾಕಿ ಆಚರಣೆ ಮಾಡಿದವರನ್ನು ಬೀದಿಗೆ ತಂದು ನಿಲ್ಲಿಸಿ ನಗೆ ಪಾಟಿಲಿಗೀಡಾಗಿಸಿದ ಹಲವು ನಿದರ್ಶನಗಳನ್ನು ಕಾಣಬಹುದಾಗಿದೆ.

ಅಂತಹದೇ ಒಂದು ವಿಶಿಷ್ಟ ಆಚರಣೆ ನಡೆಸಲು ಹೋದ ಪೂಜಾರಿಯೋರ್ವ್ ಮೈ ಮೇಲೆ ದೇವರು ಬಂದಂತೆ ನರ್ತಿಸಿ, ಆವೇಶ ಭರಿತನಾಗಿ ಆಡಿದ ಮಾತುಗಳು ಅಲ್ಲಿ ನೆರೆದವರರೋರ್ವರ ಮೊಬೈಲ್ ಕ್ಯಾಮರದಲ್ಲಿ ರೆಕಾರ್ಡ್ ಆಗಿ ಆ ವಿಡಿಯೋ ಈಗ ಎಲ್ಲೆಡೆ ವೈರಲಾಗುತ್ತಿದೆ..ಅಂಕೋಲಾ ತಾಲೂಕಿನ ಅಂಬಾರಕೊಡ್ಲ ಭಾಗದಲ್ಲಿ ನಡೆದ ಈ ಘಟನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಹಿಂದಿನಿಂದಲೂ ಒಂದು ಕುಟುಂಬದವರು ಸ್ಥಳೀಯ ದೇವತೆ ರೂಪದಲ್ಲಿ ಪೂಜಿಸಿಕೊಂಡು ಬರುತ್ತಿದ್ದ ಚಿಕ್ಕ ಗುಡಿ,ನೂರಾರು ಭಕ್ತಾದಿಗಳ ಸಹಾಯ ಸಹಕಾರದಿಂದ ದೊಡ್ಡ ದಾಗಿ ಮಾರ್ಪಟ್ಟು ಆಸ್ತಿಕ ಭಕ್ತರನ್ನು ಕರೆಯುತ್ತಿದೆ.

ಇಲ್ಲಿಯ ದೇವಸ್ಥಾನದ ಒಳ ಹಾಗೂ ಹೊರ ಆವರಣದ ಪ್ರಶಾಂತತೆ, ಶುಚಿತ್ವ ಮತ್ತಿತರ ಕಾರಣಗಳು ತಮ್ಮ ಮನಸ್ಸಿಗೆ ನೆಮ್ಮದಿ ನೀಡುತ್ತವೆ ಎನ್ನುತ್ತಾರೆ ಕೆಲವು ಭಕ್ತರು.ಈ ಹಿಂದಿನಿಂದಲೂ ನಾವು ಇಲ್ಲಿ ನಡೆದುಕೊಳ್ಳುತ್ತಿದ್ದು ನಮ್ಮ ಅನೇಕ ಕಷ್ಟ ಕಾರ್ಪಣ್ಯಗಳು ಶ್ರೀದೇವರ ಕೃಪೆಯಿಂದಲೇ ನಿವಾರಣೆಯಾಗಿದೆ ಎನ್ನುವ ಭಕ್ತರು ಇದ್ದಾರೆ.ಹಾಗಾಗಿಯೇ ಇಲ್ಲಿನ ಕೆಲ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಪೂಜಾ ಕಾರ್ಯಗಳಲ್ಲಿ ನೂರಾರು ಭಕ್ತರು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸುವುದು,ಹರಕೆ ಸೇವೆ ಒಪ್ಪಿಸುವುದು ಮತ್ತಿತರ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಆದರೆ ಇತ್ತೀಚಿಗೆ ಕನ್ನಡದ ಧಾರ್ಮಿಕ ಕಾರ್ಯಕ್ರಮ ಒಂದರಲ್ಲಿ ಆವೇಶ ಭರಿತನಾದ ಸ್ಥಳೀಯ ಪೂಜಾರಿ ಹೆಣ್ಣು ಮಗಳೊಬ್ಬಳನ್ನು ಉದ್ದೇಶಿಸಿ,ನೀನು ನನ್ನ ಮನದನ್ನೆ ಎಂಬ ಅರ್ಥದಲ್ಲಿ ಇದು ಸತ್ಯ ಇದು ಸತ್ಯ ಇದು ಸತ್ಯ ಎಂಬಂತೆ ಆಡಿದ ಮಾತುಗಳು,ಭಕ್ತರ ಭಾಷೆಯಲ್ಲಿ ದೇವನುಡಿಯನಿಸಿದರು ಸಹ ಇದು ಪೂಜಾರಿಯ ಮನದಾಸೆಯ ಮಾತುಗಳು ಎಂಬಂತಿದೆ.ಈ ಮಾತು ಸಾರ್ವಜನಿಕ ವಲಯದಲ್ಲಿ ಹಲವು ಚರ್ಚೆಗೆ ಕಾರಣವಾಗಿದ್ದು ಮಾಧ್ಯಮದವರು ಅಸಲಿಯತ್ತಿನ ಬೆನ್ನು ಬಿದ್ದಾಗ ಕೆಲವು ಅಂಶಗಳು ಗಮನಕ್ಕೆ ಬಂದಿವೆ.ವೈಯಕ್ತಿಕ ಬದುಕಿನಲ್ಲಿ ದಾಂಪತ್ಯದ ಕಹಿ ಅನುಭವ ಪಡುತ್ತಿರುವ ಪೂಜಾರಿ ಹಾಗೂ ಕರೋನಾ ಮತ್ತಿತರ ಸಂಕಷ್ಟದ ಸಮಯದಲ್ಲಿ ಗಂಡನನ್ನು ಕಳೆದುಕೊಂಡಿದ್ದ ಮಹಿಳೆಯೋರ್ವಳು, ನೊಂದು ಇದೆ ಕ್ಷೇತ್ರಕ್ಕೆ ಬಂದು ತನ್ನ ಸಂಕಟ ಹೇಳಿಕೊಂಡು ತದನಂತರ ತನ್ನಿಬ್ಬರು ಮಕ್ಕಳು ಮತ್ತು ತನಗೆ ಆಸರೆ ದೊರೆತರೆ ಚೆನ್ನಾಗಿತ್ತು ಎಂಬರ್ಥದಲ್ಲಿ ನಿವೇದಿಸಿಕೊಂಡಿದ್ದಳು ಎನ್ನಲಾಗಿದ್ದು,ಬರ -ಬರುತ್ತಾ ಪೂಜಾರಿ ಹಾಗೂ ಭಕ್ತ ಮಹಿಳೆಯ ನಡುವೆ ಪರಸ್ಪರ ಹೊಂದಾಣಿಕೆ ಭಾವನೆ ಮೂಡಿ ,ಇಬ್ಬರಿಗೂ ಇದನ್ನು ಸಮಾಜದ ಮುಂದೆ ತೋರ್ಪಡಿಸಿಕೊಳ್ಳಲಾಗದೆ ದೇವತಾರಾದನೆಯ ದಿನ ಈ ರೀತಿ ತಮ್ಮ ಇಚ್ಛೆಯನ್ನು ಸಾರ್ವಜನಿಕರೆದುರು ತೋರ್ಪಡಿಸಿಕೊಂಡರೆ ಎಂಬ ಮಾತು ಕೇಳಿ ಬಂದಂತಿದೆ. ಕಾನೂನಿನ ತೊಡಕಿಲ್ಲದಿದ್ದರೆ ಪರಸ್ಪರರು ಒಪ್ಪಿ ಮದುವೆಯಾದರೆ ಯಾರ ಅಡ್ಡಿ ಆತಂಕಗಳು ಬರಲಾರವು ಎಂದು ಕೆಲವರು ಹೇಳುತ್ತಾರೆಯಾದರೂ,ಇನ್ನು ಕೆಲವರ ಪ್ರಕಾರ ಅವರ ವೈಯಕ್ತಿಕ ಜೀವನದ ವಿಷಯ ನಮಗೆ ಬೇಡ . ಆದರೆ ದೇವರ ಹೆಸರಿನಲ್ಲಿ ಹೀಗೆ ಮಾಡುವುದು ಎಷ್ಟು ಸರಿ ಎಂದು ಕೇಳುವಂತಾಗಿದೆ. ಪೂಜಾರಿ ತಾನಾಡಿದ ಯಡವಟ್ಟಿನ ಮಾತಿನಿಂದ ಹಲವು ಭಕ್ತರ ಮನಸ್ಸಿಗೆ ನೋವುಂಟು ಮಾಡಿದಂತಿದೆ., ಮುಂದೆಯಾದರೂ ಪೂಜಾರಿ ಯಾವುದೇ ಧಾರ್ಮಿಕ ಭಾವನೆಗಳಿಗೆ ದಕ್ಕೆ ಬರದಂತೆ ತನ್ನ ತಪ್ಪು ಸರಿಪಡಿಸಿಕೊಂಡು ಬೇಕಾದರೆ ಅವಳ ಜೊತೆಯೇ ಬಾಳಿ ಬದುಕಲಿ ಎನ್ನುವವರು ಇದ್ದಾರೆ.

ತಮ್ಮಿಂದ ಇತರೆ ಭಕ್ತರಿಗೆ ಆಗಿರಬಹುದಾದ ನೋವಿನ ಭಾವನೆಗಳಿಗೆ ಪೂಜಾರಿ ಹಾಗೂ ಆ ಮಹಿಳೆ ಕಡೆಯವರು ಪ್ರತಿಕ್ರೀಯಿಸಿ ಕ್ಷಮೆ ಕೋರಿದ್ದಾರೆ ಎನ್ನಲಾಗಿದ್ದು ,ವಿಷಯದ ಗಂಭೀರತೆ ಕೊಂಚ ಕಡಿಮೆಯಾದಂತಿದೆ.

ವಿಸ್ಮಯ ನ್ಯೂಸ್ ವಿಲಾಸ್ ನಾಯಕ ಅಂಕೋಲಾ

Back to top button