ಈಶ್ವರನ ಜಾತ್ರೆಗೆ ಬಂದು ಶಿವನ ಪಾದ ಸೇರಿದ| ಮೀನುಗಾರಿಕೆಗೆ ತೆರಳಿದವ ನೀರು ಪಾಲಾದ

ತಂದೆ ತಾಯಿ ಇಲ್ಲದ ಪುಟಾಣಿಗೆ ಬೇಕಿದೆ ಪ್ರೀತಿಯ ಸಾಂತ್ವನ ಹಾಗೂ ನೆರವು

ಅಂಕೋಲಾ :ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೋರ್ವ ಮೃತ ಪಟ್ಟ ಘಟನೆ ಅಂಕೋಲಾ ತಾಲೂಕಿನ ಹಾರವಾಡದಲ್ಲಿ ಸಂಭವಿಸಿದೆ.
ಕಾರವಾರ ತಾಲೂಕಿನ ಚಿತ್ತಾಕುಲ ಸೀಬರ್ಡ್ ನಿರಾಶ್ರಿತರ ಕಾಲನಿ ನಿವಾಸಿ ವಾಸು ಪಾಂಡುರಂಗ ಹರಿಕಂತ್ರ ( 42 )ಮೃತ ದುರ್ದೈವಿಯಾಗಿದ್ದು ಈತ ಕೆಲವು ದಿನಗಳ ಹಿಂದಷ್ಟೇ ಈಶ್ವರ ದೇವಸ್ಥಾನದ ಜಾತ್ರೆಗೆಂದು ಹಾರವಾಡದ ತನ್ನ ತಂಗಿಯ ಮನೆಗೆ ಬಂದಿದ್ದ ಎನ್ನಲಾಗಿದೆ.

Banking Jobs: ಬ್ಯಾಂಕ್ ಆಫ್ ಇಂಡಿಯಾದಲ್ಲಿ 500 ಉದ್ಯೋಗಾವಕಾಶ: ಆರಂಭಿಕ ವೇತನ 36 ಸಾವಿರದಿಂದ 63 ಸಾವಿರ

ಸೋಮವಾರ ಹಾರವಾಡದಲ್ಲಿ ಬೀಸು ಬಲೆಯ ಮೂಲಕ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಈತ ಆಯತಪ್ಪಿ ಆಕಸ್ಮಿಕವಾಗಿ ನೀರು ಪಾಲಾದ ಎನ್ನಲಾಗಿದೆ. ಮೀನುಗಾರಿಕೆಗೆ ತೆರಳಿದ್ದ ತನ್ನ ಅಣ್ಣ ರಾತ್ರಿಯಾದರು ಮನೆಗೆ ಮರಳದಿರುವುದರಿಂದ ಕಂಗಾಲಾದ ಆತನ ಸಹೋದರಿ ಮತ್ತು ಕುಟುಂಬಸ್ಥರು ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಡಿದರೂ ಕತ್ತಲಾದ್ದರಿಂದ ಪ್ರಯೋಜನವಾಗಿರಲಿಲ್ಲ. ಸೋಮವಾರ ಬೆಳಿಗ್ಗೆ ಆತ ಮೃತ ದೇಹವಾಗಿ ಪತ್ತೆಯಾಗಿದ್ದು ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಸಮುದ್ರದ ಅಲೆಗಳ ಏರಿಳಿತಕ್ಕೆ ಸಿಲುಕಿ, ಹಾರವಾಡದ ಗಾಬೀತವಾಡದ ಗಜನಿ ಪ್ರದೇಶದ ಬಳಿ ಶವ ಕಂಡುಬಂದಿದೆ. ಅಂಕೋಲಾ ಪೊಲೀಸ್ ನಿರೀಕ್ಷಕರಾದ ರಾಬರ್ಟ್ ಡಿಸೋಜ, ಉಪ ನಿರೀಕ್ಷಕರಾದ ಕುಮಾರ್ ಕಾಂಬಳೆ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತೀರಾ ಇಕ್ಕಟ್ಟಿನ , ಜಾರುವಿಕೆ ಹಾಗೂ ಅಪಾಯಕಾರಿ ಸ್ಥಳ ದಾಟಿಸಿ ಮೃತ ದೇಹವನ್ನು ಸಾಗಿಸುವುದು ಕಷ್ಟ ಸಾಧ್ಯವಾಗಿತ್ತು. ಸ್ಥಳೀಯ ಮೀನುಗಾರರ ಸಹಾಯದೊಂದಿಗೆ,ಕರಾವಳಿ ಕಾವಲು ಪಡೆ ಕೆ. ಎನ್. ಡಿ ಸಿಬ್ಬಂದಿಗಳು ಮತ್ತಿತರರು ಮೃತದೇಹವನ್ನು ದೂರದಲ್ಲಿ ನಿಂತಿದ್ದ ಶವ ಸಾಗಾಣಿಕೆ ವಾಹನದವರೆಗೆ ಸಾಗಿಸಲು ಹರಸಾಹಸ ಪಟ್ಟರು.ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ನಾಯ್ಕ ,ಪೊಲೀಸ್ ಸಿಬ್ಬಂದಿಗಳು, ಹಾರವಾಡದ ಸ್ಥಳೀಯರು ಮತ್ತು ಮೃತನ ಕುಟುಂಬಸ್ಥರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾಸ್ಪತ್ರೆ ಶಲಾಗಾರಕ್ಕೆ ಸಾಗಿಸಲು ಸಹಕರಿಸಿದರು.

ಕಾರವಾರ ಚಿತ್ತಾಕುಲ ಮೂಲದ ನಿವಾಸಿಯಾಗಿದ್ದ ಈತ ಕಳೆದ ಎರಡು ಮೂರು ವರ್ಷಗಳ ಹಿಂದಷ್ಟೇ ತನ್ನ ಹೆಂಡತಿಯನ್ನು ಕಳೆದುಕೊಂಡಿದ್ದ ಈತ ಅದೇ ಚಿಂತೆಯಲ್ಲಿ ವಿಪರೀತ ಸರಾಯಿ ಕುಡಿಯುತ್ತಿದ್ದ ಎನ್ನಲಾಗಿದೆ. ಈ ಹಿಂದೆ ತಾಯಿ ಮತ್ತು ಈಗ ತಂದೆಯನ್ನು ಕಳೆದುಕೊಂಡ ಮಗು ಮಾತ್ರ ತಬ್ಬಲಿಯಂತಾಗಿದ್ದು ವಿಧಿಯಾಟವೇ ಸರಿ.,ನೊಂದ ಪುಟಾಣಿಗೆ ಪ್ರೀತಿಯ ಸಾಂತ್ವನದ ಜೊತೆ ಭದ್ರ ಭವಿಷ್ಯಕ್ಕಾಗಿ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ನೆರವಿನ ಪರಿಹಾರ ನೀಡಬೇಕಿದೆ.

ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ

Exit mobile version