ಅಂಕೋಲಾ : ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಅಂಕೋಲಾದಲ್ಲಿ ನಡೆದಿದೆ. ಬೆಳಂಬಾರ ತಾಳೇಬೈಲಿನ ಶಿಲ್ಪಾ ಎಂ ಗೌಡ (17) ಮೃತ ದುರ್ದೈವಿಯಾಗಿದ್ದು,ಸರ್ಕಾರಿ ಪದವಿ ಪೂರ್ವ ಕಾಲೇಜು ಅಂಕೋಲಾದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದಳು.
ಮಾರ್ಚ್ 9 ರಿಂದ ಆರಂಭವಾಗಿರುವ ಸೆಕೆಂಡ್ ಪಿಯು ಪರೀಕ್ಷೆಯಲ್ಲಿ ಆರಂಭದ ಎರಡು ವಿಷಯಗಳ ಪರೀಕ್ಷೆ ಎದುರಿಸಿದ್ದ ಅವಳು ಬುಧವಾರ ಬೆಳಿಗ್ಗೆ ತಂದೆ-ತಾಯಿಗಳು ಎಂದಿನಂತೆ ಕೃಷಿ – ಕೂಲಿ ಕೆಲಸಕ್ಕೆ ಮನೆಯಿಂದ ಹೊರಗಡೆ ಹೋಗಿದ್ದ ವೇಳೆ , ಯಾರೂ ಇಲ್ಲದಿರುವುದನ್ನು ಗಮನಿಸಿ ,ಅದಾವುದೋ ಕಾರಣದಿಂದ ಮನನೊಂದು ವಿಷ (ಮೋನೊಪ್ಲಸ್–36 ) ಸೇವಿಸಿರುವ ಸಾಧ್ಯತೆಯಿದ್ದು,ಕೆಲ ಹೊತ್ತಿನ ಬಳಿಕ ವಾಂತಿ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಂಕೋಲಾದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬರುತ್ತಿರುವ ವೇಳೆ ಕೊನೆಯುಸಿರೆಳೆದಳು ಎನ್ನಲಾಗಿದೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ್ ಆಸ್ಪತ್ರೆ ಶವಾಗಾರದಲ್ಲಿಡಲಾಗಿದೆ.ಓದಿನಲ್ಲಿ ಚುರುಕಾಗಿಯೇ ಇದ್ದ ಈ ಹುಡುಗಿ ತನ್ನ ಪರೀಕ್ಷೆ ಚೆನ್ನಾಗಿ ಆಗದಿರುವುದಕ್ಕೆ ಇಲ್ಲವೇ ಬೇರೆ ಯಾವುದೋ ಕಾರಣದಿಂದ ಆತ್ಮಹತ್ಯೆಗೆ ಶರಣಾದಳೇ ಎನ್ನುವ ಮಾತು ಸ್ಥಳೀಯರಿಂದ ಕೇಳಿ ಬಂದಿದ್ದು, ಈ ವರೆಗೂ ಸಾವಿಗೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.ಮನೆಯ ಮುದ್ದಿನ ಮಗಳನ್ನು ಕಳೆದುಕೊಂಡ ಬಡ ಕುಟುಂಬದ ( ತಂದೆ- ತಾಯಿ) ರೋದನ ಮುಗಿಲುಮುಟ್ಟಿದೆ.
ಯುವತಿಯ ಅಕಾಲಿಕ ನಿಧನದಿಂದ ಗ್ರಾಮದಲ್ಲಿ ಶೋಕದ ವಾತಾವರಣ ಕಂಡುಬಂದಿದೆ.ವಿದ್ಯಾರ್ಥಿನಿಯ ಸಾವಿನ ಸುದ್ದಿ ಕೇಳಿ ತಿಳಿದ ಶಾಸಕಿ ರೂಪಾಲಿ ನಾಯ್ಕ, ಶಿಲ್ಪಾಳ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿ ನೊಂದ ಕುಟುಂಬಕ್ಕೆ ತುರ್ತು ಸಹಾಯ ನೀಡಿ ಸಾಂತ್ವನ ಹೇಳಲು ಮುಂದಾಗಿದ್ದಾರೆ..
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ