Focus News
Trending

ಶಾಸಕರ ಮಾದರಿ ಶಾಲೆಯಲ್ಲಿ ಸಂಪನ್ನ ಗೊಂಡ ಪೌರತ್ವ ಶಿಬಿರ: ಸಿರಿತನ – ಬಡತನ ಶಾಶ್ವತವಲ್ಲ : ದೇವಿದಾಸ ಸುವರ್ಣ

ಅಂಕೋಲಾ: ಕೆ. ಎಲ್. ಇ ಶಿಕ್ಷಣ ಮಹಾವಿದ್ಯಾಲಯದ ಪೌರತ್ವ ತರಬೇತಿ ಶಿಬಿರ ತಾಲೂಕಿನ ಬಾಸಗೋಡದ ಶಾಸಕರ ಮಾದರಿ ಹಿ.ಪ್ರಾ ಶಾಲೆಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಮೂರು ದಿನಗಳ ಕಾಲ ನಡೆದ ಶಿಬಿರವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ನೆರವೇರಿತು. ಪೌರತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ವ್ಯಂಗ್ಯ ಚಿತ್ರಕಾರ ದೇವಿದಾಸ ಸುವರ್ಣ, ಜೀವನವನ್ನು ವ್ಯರ್ಥವಾಗಿಸದೇ ಅರ್ಥಪೂರ್ಣವಾಗಿ ಕಳೆಯೋಣ.

ಸಿರಿತನ -ಬಡತನ ಶಾಶ್ವತವಲ್ಲ. ಕೀರ್ತಿ ಅಪಕೀರ್ತಿಯ ಸನ್ನಿವೇಶವೂ ಎದುರಾಗುತ್ತದೆ ಎಂದು ಹೇಳಿ ಹನಿಗವನ, ಮತ್ತಿತರ ಸನ್ನಿವೇಶಗಳೊಂದಿಗೆ ಹಾಸ್ಯ ಸೇರಿಸಿ ಮನರಂಜನೆ ನೀಡಿದರು. ಸಭಾ ಧ್ಯಕ್ಷತೆ ವಹಿಸಿ ಮಾತನಾಡಿದ ಶಿಕ್ಷಣ ಮಹಾವಿದ್ಯಾಯದ ಪ್ರಾಚಾರ್ಯ ವಿನಾಯಕ ಹೆಗಡೆ, 16 ವರ್ಷಗಳಿಂದ ನಿರಂತರವಾಗಿ ಪೌರತ್ವ ತರಬೇತಿ ಶಿಬಿರವು ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಈ ಬಾರಿ ವಿಶಿಷ್ಟ ಎನ್ನುವಂತೆ ಶಿಬಿರಾರ್ಥಿಗಳ ಸಹಬಾಳ್ವೆ ಮತ್ತು ಒಗ್ಗಟ್ಟಿನ ಮಂತ್ರದಿಂದ ನಿಜವಾದ ಪೌರತ್ವ ತರಬೇತಿ ಶಿಬಿರಕ್ಕೆ ಅರ್ಥ ಬಂದಿದೆ ಎಂದರು.

ಪೌರತ್ವ ತರಬೇತಿ ಶಿಬಿರದ ಸಮನ್ವಯಾಧಿಕಾರಿ ಡಾ. ಪುಷ್ಪಾ ನಾಯ್ಕ ಮಾತನಾಡಿ, ಪ್ರಶಿಕ್ಷಣಾರ್ಥಿಗಳ ಶಿಸ್ತು ಸಮಯಪ್ರಜ್ಞೆ ಮತ್ತು ಸ್ನೇಹ ಜೀವನ ಕೌಶಲ್ಯಗಳಿಂದ ಶಿಬಿರ ಅರ್ಥಪೂರ್ಣವಾಗಿ ಸಂಪನ್ನಗೊಂಡಿದೆ. ಉಪನ್ಯಾಸಕರ ಸಹಕಾರವೂ ಸೇರಿದಂತೆ, ಯಾವುದೇ ಅಡಚಣೆಗಳಿಲ್ಲದೆ ಶಿಬಿರ ನಡೆದಿದ್ದು ಸಂತಸ ತಂದಿದೆ ಎಂದರು.

ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಪ್ರವೀಣಾ ನಾಯಕ, ಸಿಟಿಸಿ ಕಾರ್ಯದರ್ಶಿ ಶ್ರೀಕಾಂತ ಬಾಡ್ಕರ ವೇದಿಕೆಯಲ್ಲಿದ್ದರು. ಗೌರೀಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಮನೋಜ ಗೌಡ ಪ್ರಾರ್ಥಿಸಿದರು.. ಗಣೇಶ ನಾಯ್ಕ ಸ್ವಾಗತಿಸಿದರು, ಪೂರ್ಣಾ ಹಬ್ಬು ವಂದಿಸಿದರು. ಮಣಿಕಂಠ ನಾಯ್ಕ, ಭರತ್ ಗೌಡ, ಚೇತನಾ ಪಾಟೀಲ್ ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕರಾದ ಮಂಜುನಾಥ ಇಟಗಿ, ರಾಘವೇಂದ್ರ ಅಂಕೋಲೆಕರ್, ಅಮ್ರೀನಾಜ್ ಶೇಕ್, ಪೂರ್ವಿ ಹಳ್ಗೇಕರ ಇದ್ದರು. ಕಾಲೇಜಿನ ಪ್ರಶಿಕ್ಷಣಾರ್ಥಿಗಳು, ಸ್ಥಳೀಯರು, ಇತರರು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button