ಅಂಕೋಲಾ: ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನ ಗಟ್ಟಿತನದ ಮೂಲಕ ಮೇರು ವ್ಯಕ್ತಿತ್ವ ಹೊಂದಿ ನಾಯಕ ಎಂದೇ ಗುರುತಿಸಲ್ಪಡುವ ಪಂಪ ಪ್ರಶಸ್ತಿ ಪುರಸ್ಕೃತ ಖ್ಯಾತ ವಿಮರ್ಶಕ ಜಿ. ಎಚ್. ನಾಯಕ (80) ಅವರು ಮೈಸೂರಿನಲ್ಲಿ ವಿಧಿವಶರಾದರು.
ಮೂಲತಃ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದವರಾದ ಗೋವಿಂದ್ರಾಯ ಬೀರಣ್ಣ ನಾಯಕ ಅವರು, ಹಂಪಿ ಕನ್ನಡ ವಿಶ್ವವಿದ್ಯಾಲಯ, ಮೈಸೂರು ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ಕನ್ನಡ ಸಾಹಿತ್ಯ ಲೋಕದಲ್ಲಿ ಕಥೆ, ಕವನ, ವಿಮರ್ಶಾ ಕೃತಿಗಳನ್ನು ಸಂಪಾದಿಸಿರುವ ಅವರು 2010 ರಲ್ಲಿ ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠ ಪ್ರಶಸ್ತಿಗಳಲ್ಲೊಂದಾದ ಪಂಪ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದರು.
ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿ.ಎಂ.ಇನಾಮದಾರ ವಿಮರ್ಶೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಿ.ಎಸ್. ಶಿವರುದ್ರಪ್ಪ ವಿಮರ್ಶೆ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ತೀ.ನಂ.ಶ್ರೀ ವಿಮರ್ಶೆ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿದಂತೆ ನೂರಾರು ಗೌರವಗಳಿಗೆ ಭಾಜನರಾಗಿದ್ದರು.
ಜಿ.ಎಚ್. ನಾಯಕ ಅವರ ನಿಧನಕ್ಕೆ ನಾಡಿನ ಸಾಹಿತ್ಯ ಲೋಕದ ದಿಗ್ಗಜರು, ವಿವಿಧ ಸಂಘಟನೆಗಳು , ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ