Focus NewsImportant
Trending

ಚಲಿಸುತ್ತಿದ್ದ ಓಮಿನಿ ಕಾರಿನಲ್ಲಿ ಆಕಸ್ಮಿಕ ಬೆಂಕಿ: ಸುಟ್ಟುಕರಕಲಾದ ಕಾರು

ಅಂಕೋಲಾ : ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಓಮಿನಿ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, ಹೊತ್ತಿ ಉರಿದು ಕಾರು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಅಂಕೋಲಾ ತಾಲೂಕಿನ ಬಾಳೆಗುಳಿ ವ್ಯಾಪ್ತಿಯಲ್ಲಿ ಸಂಭವಿಸಿದೆ.   ಮುರ್ಡೇಶ್ವರ ಬಸ್ತಿಮಕ್ಕಿ ನಿವಾಸಿ ನೌಶಾದ್ ಹಾಸಿಂ ಪಟೇಲ್ ಎನ್ನುವವರು, ಗೋವಾದಿಂದ ತನ್ನ ಹೆಂಡತಿ ಮತ್ತು ಮಕ್ಕಳನ್ನು  ಕರೆತರುವ ಸಲುವಾಗಿ , ತನ್ನ ಸಹೋದರ ಈರ್ಷಾದ್ ಅಹ್ಮದ್ ಹಾಸಿಂ ಪಟೇಲ್ ಇವರ ಮಾಲಕತ್ವದ KA 20 -B 4583 ನಂಬರಿನ ಓಮಿನಿ ಕಾರ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ದಾರಿ ಮಧ್ಯೆ ಅಂಕೋಲಾ ದಿಂದ ಕಾರವಾರ ಕಡೆ ಸಾಗುವ ರಾ.ಹೆ 66 ರ  ಬಾಳೆಗುಳಿ ಓವರ್ ಬ್ರಿಜ್ ಹತ್ತಿರ ಈ ಬೆಂಕಿ ಅವಘಡ ಸಂಭವಿಸಿದೆ.

ವಾಹನ ಚಲಿಸುತ್ತಿರುವಾಗಲೇ ಅದಾವುದೋ ಕಾರಣದಿಂದ ಬೆಂಕಿ ಕಾಣಿಸಿಕೊಂಡಿತ್ತು ಎನ್ನಲಾಗಿದ್ದು, ಅಪಾಯದ ಅರಿವರಿತ  ಚಾಲಕ ವಾಹನವನ್ನು ಬದಿಗೆ ನಿಲ್ಲಿಸಿ, ವಾರ್ಹದಿಂದ ಕೆಳಗಿಳಿದು ಬಂದಿದ್ದಾನೆ. ಗ್ಯಾಸ್ ಪಿಟೆಡ್ ವಾಹನವಾಗಿರುವುದರಿಂದ ಬೆಂಕಿಯ ಜ್ವಾಲೆ ಹೆಚ್ಚುತ್ತಾ ಹೋಗಿ, ಕಾರು ಧಗಧಗಿಸಿ ಉರಿಯಲಾರಂಭಿಸಿದೆ. ಸುದ್ದಿ ತಿಳಿದ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಲು ಹರ ಸಾಹಸ ಪಡುವಂತಾಯಿತು. ಅಗ್ನಿಶಾಮಕ ದಳದ ವಾಹನದಲ್ಲಿದ್ದ ನೀರು ಖಾಲಿಯಾಗಿ, ಹತ್ತಿರದ ಮೋಹನ ಪುರ್ಸು ನಾಯ್ಕ ಇವರ ಮನೆಯ ಬಾವಿಯಿಂದ ನೀರು ಪಡೆದು,ಕಾರ್ಯಚರಣೆ ಮುಂದುವರಿಸಬೇಕಾಯಿತು. ಸ್ಥಳೀಯರು ಸಹಕರಿಸಿದರು.

ಆದರೂ ಈ ವೇಳೆಗಾಗಲೇ ಓಮಿನಿ ಕಾರ್ ನ ಮುಂಭಾಗದ ಟೈಯರ್, ಸೀಟು ಮತ್ತಿತರ ಭಾಗಗಳು ಬೆಂಕಿಯ  ಕೆನ್ನಾಲಿಗೆಯಲ್ಲಿ ಸಂಪೂರ್ಣ ಸುಟ್ಟು ಕರಕಲಾಯಿತು. ಗ್ಯಾಸ್ ಫಿಟೆಡ್ ವಾಹನವಾಗಿರುವುದರಿಂದ ಹಾಗೂ ಮತ್ತಿತರ ಕಾರಣಗಳಿಂದ ಅಪಾಯದ ಸಾಧ್ಯತೆ ಹೆಚ್ಚಿರುವುದನ್ನು  ಮನಗಂಡ ಪಿ. ಎ ಸೈ ಉದ್ದಪ್ಪ ಅಶೋಕ ಧರೆಪ್ಪನವರ ಹಾಗೂ ಸ್ಥಳೀಯ ಪೊಲೀಸ ಸಿಬ್ಬಂದಿಗಳು, ಸ್ಥಳದಲ್ಲಿ ಹಾಜರಿದ್ದು ಕೆಲ ಕಾಲ ರಸ್ತೆ ಸಂಚಾರ ಬಂದ ಮಾಡಿ, ಮಾರ್ಗ ಬದಲಿಸಿ ಸಂಚಾರ ಸುರಕ್ಷತೆಗೆ ಕರ್ತವ್ಯ ನಿರ್ವಹಿಸಿದರು.

ಐಆರ್ ಬಿ ಅಂಬುಲೆನ್ಸ್ ವಾಹನ ತಂದು ಮುನ್ನೆಚ್ಚರಿಕೆ ವಹಿಸಲಾಯಿತು. ಎನ್ ಎಚ್ ಐ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು ಸುಗಮ ಸಂಚಾರಕ್ಕೆ ಸಹಕರಿಸಿದರು. ಅದೃಷ್ಟ ವಶಾತ್ ಬೆಂಕಿ ತಗುಲಿದ ವಾಹನ ಚಾಲಕನಿಗೆ ಯಾವುದೇ ಅಪಾಯವಾಗಿಲ್ಲ. ಘಟನೆ ಕುರಿತಂತೆ ಹೆಚ್ಚಿನ ಮತ್ತು ನಿಖರ ಮಾಹಿತಿ ತಿಳಿದು ಬರ ಬೇಕಿದೆ.                           

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button