Follow Us On

WhatsApp Group
Focus NewsImportant
Trending

ಪಡ್ಡೆ ಹುಡುಗನ ಬೇಕಾಬಿಟ್ಟಿ ಬೈಕ್  ವಿಲೀಂಗ್ ಗೆ ಬ್ರೇಕ್ : ಡ್ಯುಕ್ ಬೈಕ್ ನಲ್ಲಿ ಮುಂಬದಿ ಚಕ್ರ ಎತ್ತಿ ಅಪಾಯಕಾರಿ  ಸವಾರಿ ಮಾಡುತ್ತಿದ್ದವನಿಗೆ ಬಿಸಿ ಮುಟ್ಟಿಸಿದ ಪೊಲೀಸರು  

ಅಂಕೋಲಾ: ಪಟ್ಟಣದಲ್ಲಿ ಬೇಕಾಬಿಟ್ಟಿಯಾಗಿ  ಅತಿ ವೇಗ ಮತ್ತು ಅಜಾಗರೂಕತೆಯಿಂದ ಬೈಕ್  ಚಲಾಯಿಸಿ,ಅಪಾಯಕಾರಿ ರೀತಿಯಲ್ಲಿ  ರಸ್ತೆ ನಡುವೆ ವೀಲಿಂಗ್ ಮಾಡುತ್ತ,ಇತರ ರಸ್ತೆ ಸಂಚಾರಿಗಳು ಮತ್ತು ಬೀದಿ ಬದಿ ವ್ಯಾಪಾರಸ್ಥರು ಸೇರಿದಂತೆ ಹಲವರ  ಭಯ ಮತ್ತು ಆತಂಕಕ್ಕೆ ಕಾರಣನಾಗಿದ್ದ ಪಡ್ಡೆ ಯುವಕನ ಮೇಲೆ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.  

ಅಗ್ರಗೋಣ  ಜೂಗ ನಿವಾಸಿ ವಿಶಾಲ. ಗಂಗಾಧರ ಎಚ್ (20) ಎಂಬಾತನೇ  ಬೇಕಾಬಿಟ್ಟಿ ಬೈಕ್ ವೀಲಿಂಗ್ ಮಾಡಿರುವ ಆರೋಪಿಯಾಗಿದ್ದಾನೆ. ಈತನು ತಾನು ತಂದಿದ್ದ ಕೆ.ಎ30 ಡಬ್ಲೂ 7273 ನಂಬರಿನ 250 ಸಿ.ಸಿ ಸಾಮರ್ಥ್ಯದ ಕೆ.ಟಿ.ಎಂ ಡ್ಯೂಕ್ ಬೈಕ್ ನ್ನು ನಿಷ್ಕಾಳಜಿಯಿಂದ,  ಬೈಕ್ ನ ಮುಂಬದಿ  ಚಕ್ರವನ್ನು  ಮೇಲೆತ್ತಿ, ಹಿಂಬದಿ ಒಂದೇ ಚಕ್ರದ ಮೇಲೆ ಸಿನೀಮೀಯ ಶೈಲಿಯಲ್ಲಿ ವಿಲಿಂಗ್ ಮಾಡಿ ಸ್ಥಳೀಯರ ಆತಂಕ ಹೆಚ್ಚುವಂತೆ ಮಾಡಿದ್ದ. ಈತನು ಕಳೆದ ಕೆಲ  ದಿನಗಳಿಂದ ಅಂಕೋಲಾ ಪಟ್ಟಣದ ವಿವಿಧ ರಸ್ತೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇದೇ ರೀತಿ ಬೈಕ್ ಚಲಾಯಿಸುತ್ತಿದ್ದ ಆರೋಪ ಕೇಳಿ ಬಂದಿತ್ತು. 

ಆತನ ಪತ್ತೆಗೆ ಬೆನ್ನು ಬಿದ್ದ ಪೊಲೀಸರು  ರಸ್ತೆಗಳಲ್ಲಿ ಅಳವಡಿಸಿರುವ ಸಿ.ಸಿ ಕೆಮರಾ ಪುಟೇಜ್ ಮತ್ತಿತರ  ರೀತಿಯ ತನಿಖೆ ಮುಂದುವರಿಸಿದ್ದರು ಎನ್ನಲಾಗಿದೆ. ಈ ನಡುವೆ ಜೂನ್  20 ರಂದು ಮಂಗಳವಾರ, ಮೀನು ಮಾರುಕಟ್ಟೆ ಕಡೆಯಿಂದ ಅಂಬಾರಕೊಡ್ಲ ಕ್ರಾಸ್ ಕಡೆ ಜನ ದಟ್ಟನೆ ಪ್ರದೇಶದಲ್ಲಿ ಅತಿ ವೇಗದಲ್ಲಿ ಬೈಕ್ ಚಲಾಯಿಸಿ ಜನರ ಜೀವಕ್ಕೆ ಅಪಾಯ ಸಂಭವಿಸುವ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದ ವೇಳೆ , ಸ್ಥಳೀಯರ ಮಾಹಿತಿ ಆಧರಿಸಿ , ಬೈಕ್ ಸವಾರನ ಮೇಲೆ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಚಂದ್ರಕಾಂತ ನಾಯ್ಕ ದೂರು ದಾಖಲಿಸಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಚ್. ಸಿ ಪದ್ಮಾ ಗಾಂವಕರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಮುಂದುವರೆಸಿದ್ದಾರೆ.

ಕಳೆದ ವರ್ಷ ಜುಲೈ ತಿಂಗಳಲ್ಲಿ  ಕುಮಟಾ- ಬೆಟ್ಕುಳಿ ಬಳಿ ಇದೇ ಬೈಕ್ ಬಡಿದು ವ್ಯಕ್ತಿಯೊಬ್ಬರು ತೀವ್ರ ಗಾಯಗೊಂಡಿದ್ದು ಆ ಕುರಿತು ಸಹ ಪ್ರಕರಣ ದಾಖಲಾಗಿದೆ. ಆರೋಪಿತನು ಆಗಾಗ  ಮಾದನಗೇರಿ, ಗೋಕರ್ಣ,ಹೊನ್ನಾವರ ಮತ್ತು ಅಂಕೋಲಾ ಕಡೆಯತ್ತಲೂ ಇದೇ ರೀತಿಯ ಬೈಕ್ ವೀಲಿಂಗ್ ನಡೆಸುತ್ತಿದ್ದ ಎನ್ನಲಾಗಿದ್ದು, ಈತನ ಪುಂಡಾಟಿಕೆಯಿಂದ ಹಲವರು ನೆಮ್ಮದಿ ಕಳೆದುಕೊಳ್ಳುವಂತಾಗಿತ್ತು ಎನ್ನಲಾಗಿದೆ.

ತಾವು ಹೋಗಿ ಬಂದಲೆಲ್ಲಾ ಈತ ಮತ್ತು ಈತನ ಜೊತೆಗಿರುವ ಇನ್ನೋರ್ವ ತಮಗೆ ಬುದ್ದಿ ಹೇಳಲು ಬಂದವರಿಗೆ, ಕ್ಯಾರೇ ಎನ್ನದೇ ತಮಗೆ ಅವರು ಗೊತ್ತು, ಇಲಾಖೆಯ ಹಲವರೂ  ಗೊತ್ತು ಎಂದು ಹೇಳಿ ತಮ್ಮ ದೊಡ್ಡಸ್ಥಿಕೆ ಪ್ರದರ್ಶಿಸುತ್ತಿದ್ದರು ಎನ್ನಲಾಗಿದೆ. ಇದೇ ವಾಹನ ಹಾಗೂ ಸವಾರನ ಮೇಲೆ ಗೋಕರ್ಣ ಠಾಣೆಯಲ್ಲಿಯೂ ಈ ಹಿಂದೆ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ. ಆದರೂ ತನ್ನ ಚಾಳಿ ಮುಂದುವರಿಸಿದ್ದ ಈತನ ಮೇಲೆ ಪೊಲೀಸ್ ಅಂಕೋಲಾ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗುವಂತಾಗಿದ್ದು,ಬೇಕಾಬಿಟ್ಟಿ ಬೈಕ್ ಚಲಾಯಿಸುವ  ಇತರೆ ಪಡ್ಡೆ ಹೈಕಳಿಗೆ ಎಚ್ಚರಿಕೆಯ ಘಂಟೆ ಭಾರಿಸಿದಂತಾಗಿದೆ. 

ಇತ್ತೀಚಿನ ದಿನಗಳಲ್ಲಿ ಇಂತಹ ಬೈಕ್ ವಿಲಿಂಗ್ ಮೂಲಕ ಸಾಮಾಜಿಕ ಜಾಲತಾಣ ಮತ್ತಿತರೆಡೆ ಮಿಂಚಬೇಕೆಂಬ ಹುಚ್ಚು ಭ್ರಮೆಯಲ್ಲಿ ಕೆಲ ಯುವ ಜನತೆ ಹೀರೋ ಕ್ರೇಜಿನ ಅಲೆಯಲ್ಲಿ ತೇಲುತ್ತಿದ್ದು, ಅಪಾಯಕಾರಿ ರೀತಿಯಲ್ಲಿ ಬೈಕ್ ಸವಾರಿ, ಸ್ಟಂಟ್ ಮಾಡುತ್ತಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸರ್ವರ ಸುರಕ್ಷತೆ ದೃಷ್ಟಿಯಿಂದ ಅವಕ್ಕೆಲ್ಲ ಕಡಿವಾಣ ಹಾಕಲೇಬೇಕಿದೆ.  ತಾಲೂಕಿನ ಹಾಗೂ ಜಿಲ್ಲೆಯ ಈ ಹಿಂದಿನ ಕೆಲ ಘಟನೆಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬೇಕಾಬಿಟ್ಟಿ ಓಡಾಡುವ, ಶಾಂತತಾ ಭಂಗ ಮಾಡಲೆತ್ನಿಸುವ ಪುಂಡರ ಹಾವಳಿ ನಿಯಂತ್ರಿಸಲು ಕೆಲ ಪೊಲೀಸ್ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಮುಂದಾದಾಗ, ಅಂತಹ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿ , ಪುಂಡರ ಬೆಂಬಲಿಗರು ಅಧಿಕಾರಿ ಹಾಗೂ ಸಿಬ್ಬಂದಿಗಳ ಮನೋಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡಿದ ಉದಾಹರಣೆಯೂ ಇದೆ. 

ಆದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅವಕ್ಕೆಲ್ಲ ಬಗ್ಗದೇ,ಜಗ್ಗದೇ, ಆಯಕಟ್ಟಿನ ಪ್ರದೇಶಗಳಲ್ಲಿ ಕಣ್ಣಾವಲಿಟ್ಟು  ಕಟ್ಟು ನಿಟ್ಟಿನ ಕಾನೂನು  ಕ್ರಮ ಕೈಗೊಳ್ಳುವ ಮೂಲಕ ನಾಗರಿಕರ ಮತ್ತು ಶಾಲಾ – ಕಾಲೇಜು ವಿದ್ಯಾರ್ಥಿನಿಯರು ಸೇರಿದಂತೆ ಇತರರ  ಹಿತ ಕಾಯಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಅಂಕೋಲಾ ಪೊಲೀಸರ ಕ್ರಮಕ್ಕೆ ಹಲವೆಡೆಯಿಂದ ಮೆಚ್ಚುಗೆ ಮಾತು ಕೇಳಿ ಬರುತ್ತಿದೆ. ಇದೇ ವೇಳೆ  ಕೆಲ ಪಾಲಕರು ಸಹ ಸಾಲ ಮಾಡಿ ತಮ್ಮ ಮಕ್ಕಳಿಗೆ ಐಷಾರಾಮಿ ಬೈಕ್ ಕೊಡಿಸುವ ಮುನ್ನ ಹತ್ತು ಬಾರಿ ಯೋಚಿಸಲೇ ಬೇಕಿದೆ. ಇಲ್ಲದಿದ್ದರೆ ಮುಂದೊಂದು ದಿನ  ಅವರದೇ ಮಕ್ಕಳಿಗೆ ಇಲ್ಲವೇ ಅವರಿಂದ ಇತರರಿಗೆ ಜೀವ ಹಾನಿಯಾದರೆ ನಂತರ ಪಶ್ಚಾತಾಪ ಪಡಬೇಕಾದ ದಿನಗಳು ಬಂದರೂ ಬಂದೀತು. ಹಾಗಾಗದೇ ಎಲ್ಲರೂ ನೆಮ್ಮದಿ ಜೀವನ ಸಾಗಿಸಲು ಸರ್ವರೂ ,ಕಾನೂನಿನ ಪರಿಮಿತಿ ಅರಿತು ಸಹಕರಿಸಬೇಕಿದೆ.              

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button