ಕುಮಟಾ: ಗೋರೆಯ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಹಯೋಗದಲ್ಲಿ ” ವಿದ್ಯಾರ್ಥಿ ದೇವೋಭವ ” ಉಪನ್ಯಾಸ ಕಾರ್ಯಕ್ರಮವು ಜರುಗಿತು. ಆರಂಭದಲ್ಲಿ ಅತಿಥಿಗಳು ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು ಗುರುವಂದನೆ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮವನ್ನು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಡಾ. ವೀರೇಶಾನಂದ ಸರಸ್ವತೀ ಸ್ವಾಮಿಗಳು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.
ಸ್ವತಃ ಇಂಜಿನಿಯರ್ ಪದವಿಧರರಾಗಿ ನಂತರ ಅಧ್ಯಾತ್ಮಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ ಪೂಜ್ಯ ಶ್ರೀಗಳು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಕಠಿಣ ಪರಿಶ್ರಮ, ಏಕಾಗ್ರತೆ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಎಲ್ಲ ವಿದ್ಯಾರ್ಥಿಗಳೂ, ಸಾಮಾನ್ಯರಲ್ಲೂ ಅಸಾಮಾನ್ಯರಾಗಿ ಬೆಳೆಯಬೇಕೆಂದು ಉಪದೇಶಿಸಿದರು. ಇದೇ ಸಂದರ್ಭದಲ್ಲಿ ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಪರಮಾನಂದ ಸರಸ್ವತೀ ಸ್ವಾಮಿಗಳು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮವು ಸಾಧನೆಗೆ ಪ್ರೇರೇಪಣೆ ನೀಡುತ್ತದೆ. ವಿದ್ಯಾರ್ಥಿಗಳು ಯೋಜನಾ ಬಧ್ದರಾಗಿ ಅಭ್ಯಾಸದಲ್ಲಿ ನಿರತರಾದರೆ ಅತ್ಯುನ್ನತ ಸಾಧನೆ ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಡಾ. ಜಿ.ಜಿ ಹಗಡೆ ಮಾತನಾಡಿ ಗುರುಕುಲ ಮಾದರಿಯಲ್ಲಿ ಶಿಕ್ಷಣ ನೀಡುತ್ತಿರುವ ನಮ್ಮ ಕಾಲೆಜಿನಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳು ಪೂಜ್ಯರ ಮಾತುಗಳಿಗೆ ಕಿವಿಗೊಟ್ಟು ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡು ಉನ್ನತ ಸಾಧನೆ ಮಾಡಲು ಇಂದೇ ಸಂಕಲ್ಪ ಮಾಡಬೇಕು. ಈ ದಿಶೆಯಲ್ಲಿ ನಿರಂತರ ಪ್ರಯತ್ನ ಸಾಗಬೇಕು ಎಂದರು.ಕಾಲೇಜಿನ ಪ್ರಾಂಶುಪಾಲರಾದ ಡಿ. ಎನ್ ಭಟ್ಟ ರವರು ಪೂಜ್ಯರೀರ್ವರನ್ನು ಸ್ವಾಗತಿಸಿ ಪರಿಚಯಿಸಿದರು.
ವಿಸ್ಮಯ ನ್ಯೂಸ್, ಕುಮಟಾ