Follow Us On

Google News
Big News
Trending

ಮಳೆನೀರು ಹರಿಯಲು ಅಡ್ಡಿಯಾದ ನೌಕಾನೆಲೆ ಕಾಮಗಾರಿ: ಹತ್ತಾರು ಮನೆ, ನೂರಾರು ಎಕರೆ ಭೂಮಿ ಜಲಾವೃತ

ಕಾರವಾರ: ಮಳೆಯಿಲ್ಲದೆ ಕಂಗೆಟ್ಟಿದ್ದ ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಕಳೆದ ಕೆಲದಿನಗಳಿಂದ ಉತ್ತಮ ಮಳೆಯಾಗತೊಡಗಿದೆ. ಆದರೆ ಹೀಗೆ ಸುರಿದ ಮಳೆ ನೀರು ಸರಾಗವಾಗಿ ಹರಿದು ಹೋಗುವಲ್ಲಿ ನೌಕಾನೆಲೆಯಿಂದ ನಡೆಸಿದ ಕಾಮಗಾರಿಯೊಂದು ಊರಿಗೆ ಊರೇ ಮುಳುಗುವಂತಾಗಿದೆ. ಉತ್ತರಕನ್ನಡ ಜಿಲ್ಲೆಯಾದ್ಯಂತ ಮಳೆ ಆರ್ಭಟ ಜೋರಾಗಿದೆ. ಕಾರವಾರ ಸೇರಿದಂತೆ ಕರಾವಳಿಯಾದ್ಯಂತ ಒಂದು ವಾರದಿಂದ ಉತ್ತಮಮಳೆಯಾಗಿದೆ. ಆದರೆ ಹೀಗೆ ಸುರಿದ ಮೊದಲ ಮಳೆಯೇ ಕಾರವಾರ ತಾಲ್ಲೂಕಿನ ಚೆಂಡೀಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಡೂರು ಗ್ರಾಮಸ್ಥರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಗ್ರಾಮದ ಸುತ್ತಮುತ್ತಲಿನ ನೂರಾರು ಎಕರೆ ಪ್ರದೇಶ ಮೊದಲ ಮಳೆಗೆ ನೀರು ತುಂಬಿಕೊoಡಿದ್ದು ಜಮೀನುಗಳು ಮಧ್ಯೆ ಇರುವ ಮನೆಗಳು ಇದೀಗ ದ್ವೀಪದಂತಾಗಿವೆ.

ಅಲ್ಲದೇ ಈ ಮಳೆ ಹೀಗೆ ಮುಂದುವರಿದಲ್ಲಿ ಮನೆಗಳು ಮುಳುಗಡೆಯಾಗುವ ಆತಂಕ ಇದೀಗ ಸ್ಥಳೀಯರಿಗೆ ಎದುರಾಗಿದೆ. ಅಷ್ಟಕ್ಕೂ ಈ ಎಲ್ಲ ರಾದ್ದಾಂತಕ್ಕೆ ನೌಕಾನೆಲೆಯ ಕಾಮಗಾರಿ ಕಾರಣ ಎನ್ನಲಾಗುತ್ತಿದೆ. ಸಮುದ್ರಕ್ಕೆ ಹರಿಯುವ ನೀರಿಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಿದ ಕಾರಣ ಇದೀಗ ಗ್ರಾಮದ ಸುತ್ತಮುತ್ತಲಿನ ಕೃಷಿ ಭೂಮಿಗಳಲ್ಲಿ ನೀರು ತುಂಬಿಕೊoಡಿದೆ. ಇದರಿಂದ ಜಮೀನುಗಳ ಮಧ್ಯೆ ಮನೆಗಳನ್ನು ಕಟ್ಟಿಕೊಂಡವರು ಸೊಂಟದ ಸನಿಹ ಮುಳುಗುವ ನೀರಿನಲ್ಲಿ ಮಕ್ಕಳು, ವೃದ್ಧರು ಓಡಾಡುವ ಸ್ಥಿತಿ ಇದೆ. ಈ ಬಗ್ಗೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಇನ್ನು ಗ್ರಾಮದಲ್ಲಿ 15 ಕ್ಕೂ ಹೆಚ್ಚು ಮನೆಗಳಿವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಸಮಸ್ಯೆ ಇತ್ತಾದರೂ ಈ ಭಾರಿ ಮೊದಲ ಮಳೆಗೆ ಸಮಸ್ಯೆ ಗಂಭೀರವಾಗಿದೆ. ಇದರಿಂದ ನೂರಾರು ಎಕರೆ ಕೃಷಿ ಭೂಮಿ ಪಾಳು ಬಿಡುವಂತಾಗಿದೆ. 2008 ರಲ್ಲಿ ಇದೇ ರಿತಿ ನೀರು ತುಂಬಿಕೊAಡು ಮನೆಗಳನ್ನು ಕಳೆದುಕೊಂಡಿದ್ದ ಜನ ಇದೀಗ ಮರಳಿ ಸಹಜ ಜೀವನ ನಡೆಸುತ್ತಿರುವಾಗ ಮತ್ತೆ ಮಳೆಯಿಂದ ಮನೆಗಳು ಕುಸಿಯುವ ಆತಂಕ ಎದುರಾಗಿದೆ. ಇದೇ ಕಾರಣಕ್ಕೆ ಮನೆ ಮಕ್ಕಳನ್ನು ಸಂಬoಧಿಕರ ಮನೆಗಳಲ್ಲಿ ಇಡಲಾಗಿದೆ. ಒಂದೊಮ್ಮೆ ನೀರು ತುಂಬಿಕೊoಡಲ್ಲಿ ಗ್ರಾಮದಿಂದ ತೆರಳಲು ಅನುಕೂಲವಾಗುವಂತೆ ದೋಣಿ ಇಡಲಾಗಿದೆಯಾದರೂ ಅದು ಕೂಡ ಒಡೆದುಹೋಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ ಯಾರು ಕೂಡ ಸ್ಪಂಧನೆ ನೀಡುತ್ತಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇನ್ನು ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ ನೌಕಾನೆಲೆಯಿಂದ ಹರಿಯುವ ಹಳ್ಳಕ್ಕೆ ಮಣ್ಣು ತುಂಬಿ ರಸ್ತೆ ನಿರ್ಮಿಸಿದ್ದರಿಂದ ಈ ರಿತಿ ಸಮಸ್ಯೆಯಾಗಿತ್ತು. ಆದರೆ ಇದೀಗ ನೌಕಾನೆಲೆಯವರು ಮಣ್ಣು ತೆರವುಗೊಳಿಸುತ್ತಿರುವ ಮಾಹಿತಿ ಇದೆ. ಮಳೆ ನೀರಿನಿಂದ ತುಂಬಿಕೊoಡಿದ್ದ ಗ್ರಾಮಕ್ಕೆ ಸ್ಥಳೀಯ ಪಂಚಾಯಿತಿ ಅಧ್ಯಕ್ಷರ ಜೊತೆ ಭೇಟಿ ನೀಡಿ ಸ್ಥಳಿಯರಿಂದ ಸಮಸ್ಯೆ ಆಲಿಸಿದ್ದೇವೆ. ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರ ತೆರೆಯಲಾಗುವುದು. ಮಳೆ ನೀರು ಮತ್ತೆ ಹೆಚ್ಚಾದಲ್ಲಿ ಮಾಹಿತಿ ನೀಡಲು ಕೂಡ ಸೂಚಿಸಿದ್ದು ಕಾಳಜಿ ಕೇಂದ್ರಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಚೆಂಡಿಯಾ ಗ್ರಾಮ ಪಂಚಾಯಿತಿ ಪಿಡಿಓ ನಾಗೇಶ ತೆಂಡೂಲ್ಕರ್ ತಿಳಿಸಿದ್ದಾರೆ.

ಒಟ್ಟಾರೆ ಮಳೆ ನೀರು ಹರಿದುಹೋಗುವ ಪ್ರದೇಶದಲ್ಲಿ ನೌಕಾನೆಲೆಯಿಂದ ಕಾಮಗಾರಿ ನಡೆಸಿದ ಕಾರಣ ಜನ ಪರದಾಡುವಂತಾಗಿದೆ. ಮಳೆಗಾಲ ಈಗ ತಾನೆ ಆರಂಭಗೊoಡಿರುವ ಕಾರಣ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಮುಂದಾಗುವ ಅನಾಹುತ ತಪ್ಪಿಸಬೇಕಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button