ಅಂಕೋಲಾ : ಹಟ್ಟಿಕೇರಿ (ಪಾಂಡುಪರ ) ಹಳ್ಳದಲ್ಲಿ ತೇಲಿ ಬಂದಿರಬಹುದಾದ ಭಾರೀ ಗಾತ್ರದ ಕಾಡುಕೋಣ,ಕಳೇಬರವಾಗಿ ಪತ್ತೆಯಾದ ಘಟನೆ ತಾಲೂಕಿನ ಬೆಲೇಕೇರಿ ಗ್ರಾಪಂ ವ್ಯಾಪ್ತಿಯ ಬೊಗ್ರಿಗದ್ದೆಯಲ್ಲಿ ನಡೆದಿದೆ. ಜೂನ್ 30 ರ ಶುಕ್ರವಾರ ಸಂಜೆಯ ವೇಳೆಗೆ ಹಳ್ಳದ ನೀರಿನಲ್ಲಿ ಭಾರೀ ಗಾತ್ರದ ಪ್ರಾಣಿಯೊಂದು ತೇಲಿ ಬರುತ್ತಿರುವುದನ್ನು ಕಂಡ ಸ್ಥಳೀಯರು ಹತ್ತಿರದಿಂದ ಅದನ್ನು ಗಮನಿಸಿದಾಗ ಕಾಡುಕೋಣ ಎಂದು ಗೊತ್ತಾಗಿ ಆಶ್ಚಯ೯ ಪಡುವಂತಾಗಿದೆ.
ನಂತರ ಬೊಗ್ರಿಗದ್ದೆಯ ಕಟ್ಟಿಗೆ ಮಿಲ್ ಸಮೀಪದ ಸೇತುವೆ ಬಳಿ ವನ್ಯಜೀವಿ ಸಂರಕ್ಷಣಾ ತಂಡದ ಸದಸ್ಯ ಅವರ್ಸಾದ ಮಹೇಶ ನಾಯ್ಕ ಮತ್ತಿತರರು ಹಳ್ಳದ ನೀರಿನಲ್ಲಿ ತೇಲಿ ಬಂದಿದ್ದ ಕಾಡು ಕೋಣದ ಕಳೇಬರ ನೀರಿನ ಹರಿವಿಗೆ ಮುಂದೆ ಸಾಗದಂತೆ ಹಗ್ಗ ಕಟ್ಟಿ ತಡೆ ಹಿಡಿದಿದ್ದಾರೆ. ವಿಷಯ ತಿಳಿದ ವಲಯ ಅರಣ್ಯ ಅಧಿಕಾರಿ ಜಿ. ವಿ ನಾಯ್ಕ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ನಂತರ ಸ್ಥಳೀಯ ಉದ್ಯಮಿ ಶ್ರೀಧರ ನಾಯ್ಕ ಇವರ ಕಟ್ಟಿಗೆ ಮಿಲ್ ಬಳಿ ಇದ್ದ ಕ್ರೇನ್ ಬಳಸಿ,ಕಾಡುಕೋಣದ ಕಳೇ ಬರವನ್ನು ನೀರಿನಿಂದ ಹರಸಾಹಸಪಟ್ಟು ಮೇಲೆತ್ತಲಾಗಿದೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಸಲು ಬೇರೊಂದು ವಾಹನದಲ್ಲಿ ತುಂಬಿ ಸಾಗಿಸಲಾಗಿದೆ.
ಕಾಡುಕೋಣದ ಕತ್ತಿನ ಭಾಗದಲ್ಲಿ ಪೆಟ್ಟು ಬಿದ್ದಂತಿದ್ದು ರಕ್ತ ಸೋರಿಕೆಯಾದಂತಿದೆ. ಹಾಗಾಗಿ ಈ ಕಾಡುಕೋಣ ಕಳ್ಳ ಬೇಟೆಗಾರರ ಗುಂಡೇಟಿಗೆ ಬಲಿಯಾಗಿರಬಹುದೇ ? ಅಥವಾ ಕ್ರೂರ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ನೀರಿಗೆ ಬಿದ್ದು ಹಳ್ಳದ ಸೆಳೆತಕ್ಕೆ ಸಿಲುಕಿ ಸಾವನಪ್ಪಿರಬಹುದೇ? ಇತರೇ ಕಾರಣಗಳೇನಿರಬಹುದು ಎಂಬಿತ್ಯಾದಿ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಂತಿದೆ.ಹಟ್ಟಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿಯೂ ಕಾಡುಕೋಣಗಳು ಇವೆ ಎನ್ನಲಾಗಿದೆ.
ಒಟ್ಟಿನಲ್ಲಿ ಬೊಗ್ರಿಗದ್ದೆ ಬಳಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಸ್ಥಳೀಯರ ಕೌತುಕಕ್ಕೆ ಕಾರಣವಾಗಿರುವ ದೊಡ್ಡ ಕೊಂಬುಗಳುಳ್ಳ ಭಾರೀ ಗಾತ್ರದ ಕಾಡುಕೋಣದ ಬಗೆಗಿನ ಇನ್ನಷ್ಟು ವಿಚಾರ,ಹಾಗೂ ಸಾವಿನ ಕುರಿತಾದ ನಿಖರ ಕಾರಣಗಳು ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ