Follow Us On

WhatsApp Group
Focus News
Trending

ಪುರಾತತ್ವ ಪ್ರಪಂಚದ ದಿಗ್ಗಜ ಡಾ. ಎಸ್.ಆರ್. ರಾವ್ ಜನ್ಮ ಶತಮಾನೋತ್ಸವ ಆಚರಣೆ

ಅಂಕೋಲಾ : ಹರಪ್ಪ  ಸಂಸ್ಕೃತಿಯ ನೆಲೆಯಾಗಿದ್ದ ಗುಜರಾತಿನ ಬಂದರು ನಗರ ಲೋಥಲ್ ಅಲ್ಲದೆ ಶ್ರೀಕೃಷ್ಣ – ದ್ವಾರಕ ನಗರಗಳ ಇರುವಿಕೆಯ ಬಗ್ಗೆ ಸಂಶೋಧನೆ ನಡೆಸುವ ಮೂಲಕ ಭಾರತದ ಪ್ರಾಚ್ಯ ವಸ್ತು ಸಂಶೋಧನಾ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಮಹಾನ ಸಂಶೋಧಕ ಡಾ. ಎಸ್. ಆರ್. ರಾವ್. ಅವರು ಭಾರತದ ಹೆಮ್ಮೆಯ ಪುರಾತತ್ತ್ವ ತಜ್ಞರಾಗಿದ್ದರು ಎಂದು ಇತಿಹಾಸ ಸಂಶೋಧಕ ಅಂಕೋಲಾದ ಶ್ಯಾಮಸುಂದರ ಗೌಡ ಅಭಿಪ್ರಾಯಪಟ್ಟರು. 

ಅವರು ಇಲ್ಲಿನ  ಜಿ.ಸಿ. ಕಾಲೇಜಿನಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತರ ಕನ್ನಡ ಕಾರವಾರ, ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು, ಗೋಖಲೆ ಸೆಂಟಿನರಿ ಕಾಲೇಜು ಅಂಕೋಲಾ ಹಾಗೂ ಕಾಲೇಜಿನ ಇತಿಹಾಸ ವಿಭಾಗ ಮತ್ತು ಐಕ್ಯೂಎಸಿ ಇನಿಶಿಯೇಟಿವ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಖ್ಯಾತ ಪುರಾತತ್ಸ ತಜ್ಞರಾದ ಡಾ. ಎಸ್.ಆರ್. ರಾವ್ ಅವರ ಜನ್ಮ ಶತಮಾನೋತ್ಸವ ಆಚರಣೆ ಕಾರ್ಯಕ್ರಮದಲ್ಲಿ , ರಾವ್ ಅವರ ಜೀವನ ಸಾಧನೆಗಳ ಕುರಿತಾಗಿ ಉಪನ್ಯಾಸ ನೀಡಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ರಾಮಚಂದ್ರ ಎ.ಡಿ. ಮಾತನಾಡಿ `ನಾವು ಭೂಮಿಯ ಮೇಲೆ ಹುಟ್ಟಿದ್ದೇವೆಂದರೆ ನಮ್ಮಿಂದ  ಯಾವುದೋ ಒಂದು ಮಹತ್ಕಾರ್ಯ ಆಗಬೇಕಾಗಿದೆ ಎಂದು ಅರ್ಥ, ಅದನ್ನು ಅರಿತು ನಾವು ಮುನ್ನಡೆಯಬೇಕಾಗಿದೆ. ಎಸ್. ಆರ್. ರಾವ್ ಅವರಂಥ ಸಾಧಕರು ಶತಮಾನಕ್ಕೊಬ್ಬರು ಬರುತ್ತಾರೆ’ ಎಂದರು. ಜಿ.ಸಿ. ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್.ವಿ. ವಸ್ತ್ರದ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ  ವಿದ್ಯಾರ್ಥಿಗಳು  ಡಾ. ಎಸ್.ಆರ್. ರಾವ್ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಸಂಶೋಧನೆಯತ್ತ ಗಮನಹರಿಸಬೇಕು ಎಂದು ಹೇಳಿದರು.

ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ. ಎಮ್.ಎಮ್. ಪಾಟೀಲ್ ಪ್ರಾಸ್ತಾವಿಕ ಮಾತನಾಡಿ ಕಾಲೇಜಿನ ಇತಿಹಾಸ ವಿಭಾಗದ ಕುರಿತಾಗಿ ಮಾಹಿತಿ ನೀಡಿ  ಸರ್ವರನ್ನೂ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಪ್ರೊ. ಆರ್.ಪಿ.ಭಟ್ಟ ವಂದಿಸಿದರು. ಕಾಲೇಜಿನ ಜಿಮಖಾನ ಕಾರ್ಯದರ್ಶಿ ಸೃಜನ್ ನಾಯಕ ಕಾರ್ಯಕ್ರಮ ನಿರ್ವಹಿಸಿದರು.  ಕಸಾಪದ ಅಂಕೋಲಾ ಘಟಕಾಧ್ಯಕ್ಷ ಗೋಪಾಲಕೃಷ್ಣ ನಾಯಕ, ಹಿರಿಯ ಸಂಸ್ಕೃತಿ ಚಿಂತಕ ನಂದನ ಐಗಳ, ವಿಶ್ರಾಂತ ಪ್ರಾಚಾರ್ಯ ರವೀಂದ್ರ ಕೇಣಿ, ನಿರುಪಮಾ ಅಂಕೋಲೆಕರ ಮೊದಲಾದ ಗಣ್ಯರು ಹಾಗೂ ಕಾಲೇಜಿನ ಪ್ರಾಧ್ಯಾಪಕರುಗಳು, ಸಿಬ್ಬಂದಿಗಳು ಮತ್ತು  ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button