ಅಂಕೋಲಾ: ತಾಲೂಕಿನ ಹೊನ್ನಳ್ಳಿಯ ಪದ್ಮಶ್ರೀ ತುಳಸಿ ಗೌಡ ಅವರಿಗೆ ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಧಾನ ಮಾಡಿ ಗೌರವಿಸಿದ ಕೆಲವೇ ದಿನಗಳಲ್ಲಿ, ಕಲಬುರ್ಗಿಯ ಶ್ರೀಸತ್ಯಸಾಯಿಬಾಬಾ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವತಿಯಿಂದಲೂ ಗೌರವ ಡಾಕ್ಟರೇಟ್ ಗಾಗಿ ಪ್ರತಿಷ್ಠಿತರ ಸಾಲಿನಲ್ಲಿ ತುಳಸಿ ಗೌಡ ಅವರ ಹೆಸರನ್ನು ಪ್ರಕಟಿಸಲಾಗಿದೆ. ಈ ಮೂಲಕ ವೃಕ್ಷ ಮಾತೆ ಹೊನ್ನಳ್ಳಿ ತುಳಸಿ ಗೌಡ ಅವರಿಗೆ ತಿಂಗಳ ಅಂತರದಲ್ಲಿ ಡಬಲ್ ಡಾಕ್ಟರೇಟ್ ಗೌರವ ಅರಸಿ ಬಂದಂತಾಗಿದೆ.
ಕಲಬುರ್ಗಿ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವ ಕಾರ್ಯಕ್ರಮ ಜುಲೈ 3 ರಂದು ಸಂಜೆ 4.30 ಕ್ಕೆ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ನಡೆಯಲಿದ್ದು ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸೇವೆ ಹಾಗೂ ಸಾಧನೆ ಮಾಡಿದ ದೇಶದ ಆರು ಜನ ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗುವುದು. ಅಂಥವರ ಸಾಲಿನಲ್ಲಿ ಪದ್ಮಶ್ರೀ ಡಾ.ತುಳಸಿ ಗೌಡ ಅವರು ಒಬ್ಬರಾಗಿರುವುದು ಹಿರಿಯಜ್ಜಿಯ ಸ್ಥಾನ-ಮಾನಗಳನ್ನು ಮತ್ತಷ್ಟು ಎತ್ತರಕ್ಕೇರಿಸಿದಂತಾಗಿದೆ.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮಾ, ರಾಜ್ಯದ ರಾಜ್ಯಪಾಲ ಥಾವರಚಂದ ಗೆಹ್ಲೋಟ್, ವಿಶ್ವ ವಿದ್ಯಾಲಯದ ಸಂಸ್ಥಾಪಕ ಸದ್ಗುರು ಮಧುಸೂಧನ ಸಾಯಿ, ಕುಲಪತಿ ಬಿ.ಎನ್. ನರಸಿಂಹಮೂರ್ತಿ, ಉಪ ಕುಲಪತಿ ಡಾ.ಶ್ರೀಕಾಂತ ಮೂರ್ತಿ ಪಾಲ್ಗೊಳಲಿದ್ದು, ಅಂಕೋಲಾ ತಾಲೂಕಿನ ಪದ್ಮಶ್ರೀ ತುಳಸಜ್ಜಿ ಇವರನ್ನು ಹಸಿರೀಕರಣ ಮತ್ತು ಸಮಾಜ ಸೇವೆಗಾಗಿ ಗುರುತಿಸಿ, ಗೌರವ ಡಾಕ್ಟರೇಟ್ ಪ್ರಧಾನ ಮಾಡಲಿದ್ದಾರೆ. ಇನ್ನುಳಿದಂತೆ
ವಿಜ್ಞಾನ ಮತ್ತು ತಂತ್ರಜ್ಞಾನದ ಸೇವೆಗಾಗಿ ಪ್ರೊ.ಅಜಯ ಸೂದ್, ಕ್ರೀಡಾ ಕ್ಷೇತ್ರದಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಂಡದ ಕೋಚ್ ಪುಲ್ಲೇಲ ಗೋಪಿಚಂದ, ಕಲೆ ಮತ್ತು ಸಂಗೀತ ಕ್ಷೇತ್ರಕ್ಕೆ ಗಾಯಕ ಆರ್. ಆರ್. ಪದ್ಮನಾಭ, ಆರೋಗ್ಯ ಸೇವೆಗೆ ನಿಮಾನ್ಸ್ ನ ನರ ವಿಜ್ಞಾನ ತಜ್ಞೆ ಡಾ.ಪ್ರತಿಮಾ ಮೂರ್ತಿ, ಶೈಕ್ಷಣಿಕ ಸೇವೆಗೆ ವಾರಣಾಸಿಯ ವಿಜಯಶಂಕರ ಶುಕ್ಲಾ ಗೌರವ ಡಾಕ್ಟರೇಟ್ ಸ್ಟೀಕರಿಸಲಿದ್ದು ಅದ್ದೂರಿ ಸಮಾರಂಭಕ್ಕೆ ಸಿದ್ಧತೆಗಳು ಭರದಿಂದಸಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ