Focus News
Trending

ಅಂಕೋಲಾ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ

ಅಂಕೋಲಾ : ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ಮತ್ತು ಬಾರ್ಡೋಲಿ ಪ್ರಶಸ್ತಿ ಗೌರವ ಸಮಾರಂಭವು ಮಂಗಳವಾರ ಪಟ್ಟಣದ ಪೂರ್ಣಪ್ರಜ್ಞಾ ಕರುಣ ವಿಜ್ಞಾನ ಸಂಯುಕ್ತ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಜರುಗಿತು. ತಹಶೀಲ್ದಾರ ಪ್ರವೀಣ ಹುಚ್ಚಣ್ಣನವರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು ಆಡಳಿತ ಯಂತ್ರ ಸರಿಯಾಗಿ ಕೆಲಸ ನಿರ್ವಹಿಸಬೇಕಾದರೆ ಪತ್ರಿಕಾರಂಗ ತುಂಬ ಸಹಕಾರಿಯಾಗುತ್ತದೆ. ಸಮಾಜದಲ್ಲಿನ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತಂದು ಅದನ್ನು ಬಗೆಹರಿಸುವಂತಹ ಕಾರ್ಯ ಪತ್ರಿಕೆಗಳಿಂದ ಆಗುತ್ತಿದೆ ಎಂದರು. ಜಿ ಸಿ ಕಾಲೇಜಿನ ಪ್ರಾಚಾರ್ಯರಾದ ಎಸ್ ವಿ ವಸ್ತ್ರದ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಉಪನ್ಯಾಸ ನೀಡಿ ಸಮೂಹ ಮಾದ್ಯಮಗಳು ಸಮಾಜದ ಎಲ್ಲರನ್ನೂ ತಲುಪುತ್ತಿಲ್ಲ. ಪತ್ರಿಕೆಗಳ ಮಾಲಿಕತ್ವ ಬಂಡವಾಳಿಗರ ಕೈಗೆ ಸೇರಿ ಪತ್ರಿಕೆಗಳಲ್ಲಿ ಬರುವ ಸುದ್ದಿಗಳ ಸ್ವರೂಪವೂ ಬದಲಾಗತೊಡಗಿದೆ.

ಫ್ಯಾಷನ್, ಕ್ರೈಂ, ಧಾರ್ಮಿಕ ಭಾವನೆಯನ್ನು ಕೆರಳಿಸುವಂತಹ ಸುದ್ದಿಗಳಿಗೆ ಮಹತ್ವ ಬಂದಿದೆ. ಕೆಲವು ಬಂಡವಾಳಿಗರು ತಮಗೆ ಬೇಕಾದಂತೆ ಪತ್ರಿಕೆಗಳನ್ನು ಬಳಸಿಕೊಳ್ಳುತ್ತಿದ್ದು ಯಾವುದೇ ಸರ್ಕಾರಗಳನ್ನೂ ನಿಯಂತ್ರಿಸುವ ಶಕ್ತಿಯನ್ನು ಬಂಡವಾಳಿಗ ಪತ್ರಿಕೆಗಳು ಹೊಂದಿವೆ. ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಬುದ್ದಿವಂತ ಪತ್ರಕರ್ತರೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕುವ ಪ್ರಸಂಗಗಳು ಹೆಚ್ಚಾಗುತ್ತಿವೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣ ಮತ್ತು ದೃಶ್ಯ ಮಾದ್ಯಮದ ಪ್ರಭಾವದಿಂದ ಪತ್ರಕರ್ತರಲ್ಲೂ ಉದ್ಯೋಗ ಸಮಸ್ಯೆ, ಉದ್ಯೋಗ ಭದ್ರತೆಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಹಾಗೆಂದು ಬದುಕನ್ನು ತ್ಯಾಗ ಮಾಡಿ ವೃತ್ತಿ ಮಾಡಬೇಕೆಂದಿಲ್ಲ ಎಂದರು. ಬಾರ್ಡೋಲಿ ಪ್ರಶಸ್ತಿ ಗೌರವವನ್ನು ಸ್ವೀಕರಿಸಿದ ಶಿರಸಿಯ ಹಿರಿಯ ಪತ್ರಕರ್ತ ಪ್ರದೀಪ ಶೆಟ್ಟಿ ಮಾತನಾಡಿ ನಾನು ಕೂಡ ದಕ್ಷಿಣದ ಬಾರ್ಡೋಲಿ ಎನಿಸಿದ ಅಂಕೋಲೆಯಲ್ಲಿ ಕೆಲವು ಕಾಲ ಪತ್ರಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ಇಂತಹ ಪುಣ್ಯನೆಲದಲ್ಲಿ ಬಾರ್ಡೋಲಿ ಹೆಸರಿನ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವದು ಬಹಳ ಹೆಮ್ಮೆಯಾಗುತ್ತಿದೆ. ಪತ್ರಿಕೋದ್ಯಮ ಒಂದು ಶ್ರೇಷ್ಠ ವೃತ್ತಿ ವಿದ್ಯಾರ್ಥಿಗಳು ಮಾದ್ಯಮ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಬೇಕು ಎಂದರು. ಪೂರ್ಣ ಪ್ರಜ್ಞಾ ಕರುಣಾ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಪ್ರಶಾಂತ ನಾಯಕ ಮಾತನಾಡಿ ಪತ್ರಕರ್ತರು ಅನೇಕ ಸಮಸ್ಯೆಗಳ ನಡುವೆಯೂ ನೈಜ ವರದಿಗಳ ಮೂಲಕ ಸಾಮಾಜಿಕ ಕಳಕಳಿ ತೋರಿಸುತ್ತಿರುವದು ಶ್ಲಾಘನೀಯ.

ಪತ್ರಿಕಾರಂಗದಲ್ಲಿ ವಿತರಕರ ಕಾರ್ಯವೂ ಕೂಡ ಮಹತ್ವವಾದದ್ದು ಅಂತಹ ಎಲೆಮರೆಯ ಕಾಯಿಗಳನ್ನೂ ಗುರುತಿಸುವಂತಾಗಬೇಕು ಎಂದರು. ನ್ಯಾಯವಾದಿ ಉಮೇಶ ನಾಯ್ಕ ಮಾತನಾಡಿ ಇಲ್ಲಿನ ಪತ್ರಕರ್ತರು ತಮ್ಮ ವೃತ್ತಿಯಲ್ಲೇ ಸಾಮಾಜಿಕ ಕಾರ್ಯಕರ್ತರೂ ಆಗಿರುವದು ಒಳ್ಳೆಯ ಬೆಳವಣಿಗೆ ಎಂದರು. ವೇದಿಕೆಯಲ್ಲಿ ಕಸಾಪ ತಾಲೂಕಾ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ ಮಾತನಾಡಿ ಕರಾವಳಿ ಭಾಗದಲ್ಲಿ ಪತ್ರಿಕೋದ್ಯಮ ಶಿಕ್ಷಣದ ಕಾಲೇಜು ಸ್ಥಾಪನೆಯಾಗಬೇಕು ಅಥವಾ ಪತ್ರಿಕೋದ್ಯಮ ವಿಷಯ ಅಧ್ಯಯನ ಪ್ರಾರಂಭವಾಗಬೇಕು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ವಿದ್ಯಾಧರ ಮೊರಬ ಸ್ವಾಗತಿಸಿದರು. ಕೆ.ರಮೇಶ ವಂದಿಸಿದರು. ಮಾರುತಿ ಹರಿಕಂತ್ರ ಕಾರ್ಯಕ್ರಮ ನಿರ್ವಹಿಸಿದರು. ಸ್ನೇಹಾ ಸಂಗಡಿಗರು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಞಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಜಗದೀಶ ನಾಯಕ, ಹಿರಿಯ ಪತ್ರಕರ್ತ ಮಹಾಂತೇಶ ರೇವಡಿ, ನ್ಯಾಯವಾದಿ ವಿನೋದ ಶಾನಭಾಗ, ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ, ಕಾ.ನಿ.ಪ. ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ, ಉಪಾಧ್ಯಕ್ಷ ನಾಗರಾಜ ಮಂಜಗುಣಿ, ಪರ್ತಕರ್ತರಾದ ವಾಸುದೇವ ಗುನಗಾ, ಸುಭಾಷ ಕಾರೇಬೈಲ್, ಅಕ್ಷಯ ನಾಯ್ಕ,
ನಾಗರಾಜ ಜಾಂಬಳೇಕರ, ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಶಿಕ್ಷಕ ವೃಂದ, ಸಿಬ್ಬಂದಿಗಳು, ದಿನಕರ ನಾಯ್ಕ, ಮಂಜುನಾಥ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button