Big News
Trending

ಟೋಲ್ ಬಂದ್: ವಾಹನ ಸವಾರರು ಫುಲ್ ಖುಷ್

ಸೈಲ್ ಹೋರಾಟಕ್ಕೆ ಮಣಿದ ಅಧಿಕಾರಿಗಳು

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸದ್ಯಕ್ಕೆ ಯಾವುದೇ ಶುಲ್ಕ ಪಾವತಿಸದೇ ವಾಹನಗಳು ಓಡಾಡಬಹುದಾಗಿದೆ. ಇಂತಹದ್ದೊಂದು ತೀರ್ಮಾನಕ್ಕೆ ಸ್ವತಃ ಆಯ್ ಆರ್ ಬಿ ಕಂಪನಿ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಅಂಕೋಲಾದ ಹಟ್ಟಿಕೇರಿ ಟೋಲ್ ಪ್ಲಾಜಾ ಬಳಿ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ನಡೆಸಲಾದ ಪ್ರತಿಭಟನೆಯ ವೇಳೆ ಆಯ್ ಆರ್ ಬಿ ಅಧಿಕಾರಿಗಳು, ಕೊನೆಗೂ ಬಗ್ಗಿ ಸೂಕ್ತ ನಿರ್ಧಾರ ಪ್ರಕಟಿಸಿದ್ದರಿಂದ ಸದ್ಯಕ್ಕೆ ಇಲ್ಲಿನ ಹೆದ್ದಾರಿಯಲ್ಲಿ ಓಡಾಡುವ ವಾಹನಗಳಿಗೆ ಟೋಲ್ ಫ್ರೀ ಆದಂತಾಗಿದೆ.

ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಗುತ್ತಿಗೆದಾರ ಕಂಪನಿ ಆಯ್ ಆರ್ ಬಿ, 2014 ರಲ್ಲಿಯೇ ಕಾಮಗಾರಿ ಆರಂಭಿಸಿತ್ತು. ಅಂದಿನಿಂದ ಇಂದಿನವರೆಗೆ ತನ್ನ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆಯ್ ಆರ್ ಬಿ ಸದಾ ಸುದ್ದಿಯಲ್ಲಿರುವಂತಾಗಿತ್ತು . ಈ ನಡುವೆ ಹಲವೆಡೆ ಸಾರ್ವಜನಿಕರ ಆಸ್ತಿಪಾಸ್ತಿ ಹಾಗೂ ಪ್ರಾಣಕ್ಕೆ ಹಾನಿಯಾಗಿ ಜಿಲ್ಲೆಯ ಹಲವೆಡೆ ಆಯ್ ಆರ್‌ಬಿ ವಿರುದ್ಧ ಸಾರ್ವಜನಿಕರ ಆಕ್ರೋಶ ಕೇಳಿ ಬರುತ್ತಲೇ ಇದ್ದು ಹಲವೆಡೆ ಬೇರೆ ಬೇರೆ ರೀತಿಯ ಪ್ರತಿಭಟನೆಗಳು ನಡೆದಿದ್ದವು.

ಅಂತಹ ಸಂದರ್ಭಗಳಲ್ಲಿ ಕಾಟಾಚಾರಕ್ಕೆ ಭೇಟಿ ಕೊಡುವ ಸಂಬಂಧಿಸಿದ ಕೆಲ ಅಧಿಕಾರಿಗಳು ನಂತರ ಜನ ಸ್ಪಂದನೆ ನೀಡದೇ ,ಮತ್ತು ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೂ ಕ್ಯಾರೆ ಎನ್ನದೇ,ಕುಂಟು ನೆವ ಹೇಳುತ್ತಾ ತಮ್ಮ ಚಾಳಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರು.ಚತುಷ್ಪತ ಹೆದ್ದಾರಿ ಪೂರ್ಣಗೊಳ್ಳದಿದ್ದರೂ ಅಂಕೋಲಾ ತಾಲೂಕಿನ ಹಟ್ಟಿಕೇರಿ ಹಾಗೂ ಕುಮುಟಾ -ಹೊನ್ನಾವರ ಮಧ್ಯೆ ಹೊಳೆಗದ್ದೆಯಲ್ಲಿ ಟೋಲ್ ಪ್ಲಾಜಾ ನಿರ್ಮಿಸಿ,ಹೆದ್ದಾರಿ ಶುಲ್ಕ ವಸೂಲಿ ಶುರು ಹಚ್ಚಿಕೊಂಡಿದ್ದರು.ಇತ್ತೀಚಿಗಷ್ಟೇ ಜಿಲ್ಲೆಯ ನೂತನ ಉಸ್ತುವಾರಿ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದ ಭಟ್ಕಳ ಶಾಸಕ ಮಂಕಾಳ ವೈದ್ಯ, ಆಯ್ ಆರ್‌ಬಿ ಅವೈಜ್ಞಾನಿಕ ಕಾಮಗಾರಿ ಕುರಿತು ಆರಂಭದಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿ,ಟೋಲ್ ಬಂದ್ ಮಾಡುವಂತೆ ತಿಳಿಸಿದ್ದರು.

ಅದಾದ ಬಳಿಕ ಇತ್ತೀಚೆಗಷ್ಟೇ ಸಂಚಾರಕ್ಕೆ ತೆರವು ಗೊಂಡಿದ್ದ ಕಾರವಾರ ಬಳಿಯ ಟನೆಲ್ ಮಾರ್ಗದಲ್ಲಿ,ಮೇಲ್ಭಾಗದ ಗುಡ್ಡ ಮತ್ತಿತರಡೆಯಿಂದ ನೀರು ನುಗ್ಗಿ ಸಂಚಾರಕ್ಕೆ ವ್ಯತ್ಯಯ ವಾಗುವ ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯದ ಸಾಧ್ಯತೆಗಳಿದ್ದವು.ಈ ವಿಷಯದ ಕುರಿತು ಜಿಲ್ಲಾಧಿಕಾರಿಗಳ ಸಭೆಯಲ್ಲಿ ವಿಶೇಷ ಸಭೆ ಕರೆದು,ಸದರಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ,ಸುರಂಗ ಮಾರ್ಗಗಳ ಸೇಫ್ಟಿ ಫಿಟ್ನೆಸ್ ಪ್ರಮಾಣ ಪತ್ರದ ಕುರಿತು ಧ್ವನಿ ಎತ್ತಿದ್ದರು.

ಇದೇ ವೇಳೆ ಸ್ಥಳೀಯ ಶಾಸಕ ಸತೀಶ್ ಸೈಲ್ ಸಹ ಆಯ್ ಆರ್ ಬಿ ಅವೈಜ್ಞಾನಿಕ ಕಾಮಗಾರಿ ವಿರುದ್ಧ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಫಿಟ್ನೆಸ್ ಪ್ರಮಾಣ ಪತ್ರ ಪಡೆಯುವವರೆಗೆ ಸುರಂಗ ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಲು ಹಾಗೂ ಹೆದ್ದಾರಿ ಟೋಲ್ ಶುಲ್ಕ ವಸೂಲಿ ಮಾಡದಂತೆ ಸಚಿವರು ನಿರ್ದೇಶನ ನೀಡಿದ್ದರು.ಅದಾದ ಬಳಿಕ ಸುರಂಗ ಮಾರ್ಗದಲ್ಲಿ ನಾಗರಿಕರ ಪ್ರಯಾಣಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಿ ಕ್ರಮ ಕೈಗೊಳ್ಳಲಾಯಿತಾದರೂ ,ಎಂದಿನಂತೆ ಟೋಲ್ ಶುಲ್ಕ ಪಡೆಯುವುದನ್ನು ಆಯ್ ಆರ್ ಬಿ ಯವರು ನಿಲ್ಲಿಸಿರಲಿಲ್ಲ. ಇದರಿಂದ ಅಸಮಾಧಾನಿತರಾದ ಸ್ಥಳೀಯ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ಹಟ್ಟಿಕೇರಿ ಟೋಲ್ ಪ್ಲಾಜಾ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಆಯ್ ಆರ್ ಬಿ ಯ ಅವೈಜ್ಞಾನಿಕ ಕಾಮಗಾರಿ,ಹತ್ತಾರು ಅವಾಂತರ ಹಾಗೂ ಅವಘಡಗಳನ್ನು ಉದಾಹರಿಸಿದ ಪ್ರತಿಭಟನಾಕಾರರು ಆಯ್ ಆರ್ ಬಿ ಕಂಪನಿ ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ,ಧಿಕ್ಕಾರ ಕೂಗಿದರು.ಹಾಗೂ ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.ಸ್ಥಳದಲ್ಲಿ ಹಾಜರಿದ್ದ ಆಯ್ ಆರ್ ಬಿ ಅಧಿಕಾರಿಗಳು,ತಮ್ಮ ಹೊಣೆಗಾರಿಕೆಯಿಂದ ನುಣಚ್ಚಿಕೊಳ್ಳುವ ಹಾಗೂ ಫಿಟ್ನೆಸ್ ಸರ್ಟಿಫಿಕೇಟ್ ಕುರಿತು ಇಲ್ಲ ಸಲ್ಲದ ಮಾತುಗಳನ್ನಾಡಿ ನಂಬಿಸುವ ಯತ್ನ ಮಾಡಿದಂತಿತ್ತು.ಅಧಿಕಾರಿಗಳ ಮಾತಿಗೆ ಸೊಪ್ಪು ಹಾಕದ ಸೈಲ್,ಫಿಟ್ನೆಸ್ ಸರ್ಟಿಫಿಕೇಟ್ ಪಡೆದು ಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಮಂತ್ರಿಗಳ ಗಮನಕ್ಕೆ ತಂದು ಟೋಲ್ ಶುಲ್ಕ ಪಡೆದುಕೊಳ್ಳಲು ತಮ್ಮದೇನು ಅಭ್ಯಂತರವಿಲ್ಲ.ಆದರೆ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುವಂತಿರುವ ತಾವು ಸದ್ಯಕ್ಕೆ ಟೋಲನ್ನು ಬಂದ್ ಮಾಡದಿದ್ದಲ್ಲಿ ,ಇಲ್ಲಿಯೇ ಧರಣಿ ಕುಳಿತು ಮತ್ತಷ್ಟು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಪಟ್ಟು ಹಿಡಿದರು.

ಕೊನೆಗೂ ಸೈಲ್ ಅವರ ಆಗ್ರಹಕ್ಕೆ ಬಗ್ಗಿದ ಸಂಬಂಧಿತ ಅಧಿಕಾರಿಗಳು ಸದ್ಯಕ್ಕೆ ಟೋಲ್ ಶುಲ್ಕವನ್ನು ಕೈ ಬಿಟ್ಟು,ವಾಹನಗಳ ಮುಕ್ತ ಓಡಾಟಕ್ಕೆ ಅನುವು ಮಾಡಿಕೊಡುವುದಾಗಿ ಒಪ್ಪಿಕೊಂಡು, ಟೋಲ್ ಪಡೆಯದೇ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಮೂಲಕ,ಪ್ರತಿಭಟನಾಕಾರರ ಮನವೊಲಿಸಿದರು.

ಒಟ್ಟಿನಲ್ಲಿ ಸದ್ಯಕ್ಕಂತೂ ಯಾವುದೆ ಶುಲ್ಕ ಪಾವತಿಸದೇ ಈ ಹೆದ್ದಾರಿಯಲ್ಲಿ ವಾಹನಗಳು ಓಡಾಡುವಂತಾಗಿವೆ.ಶಾಸಕರ ಬಗ್ಗೆ ಯಾರ್ಯಾರೋ ಏನೇ ಹೇಳಿಕೊಂಡು ಹೋಗಲಿ, ನಮ್ಮ ನಾಯಕ ಸೈಲ್ ಸಾರ್ವಜನಿಕ ಹಿತಾಸಕ್ತಿಯಿಂದ ಪ್ರತಿಭಟನೆಗಿಳಿದರೆಂದರೆ,ಬಹುತೇಕ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು,ಸೈಲ್ ಅಭಿಮಾನಿಗಳು ತಮ್ಮ ನಾಯಕನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಂತಿತ್ತು.ಮಹಿಳಾ ಪ್ರಮುಖರು,ಕಾಂಗ್ರೆಸ್ ಪಕ್ಷದ ಹಿರಿ-ಕಿರಿಯ ಮುಖಂಡರು,ಕಾರ್ಯಕರ್ತರು,ಕೆಲ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು,ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಡಿವೈಎಸ್ಪಿ ವ್ಯಾಲೆಂಟೈನ್ ಡಿಸೋಜ,ಅಂಕೋಲಾ ಸಿಪಿಐ ಸಂತೋಷ್ ಶೆಟ್ಟಿ, ಹಾಗೂ ಇತರೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ ಕರ್ತವ್ಯ ನಿರ್ವಹಿಸಿದರು. ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸತೀಶ್ ಸೈಲ್,ಜಿಲ್ಲೆಯ ಇನ್ನೊಂದು ಟೋಲ್ ನಲ್ಲಿಯೂ ಇದೇ ರೀತಿ ಟೋಲ್ ಫ್ರೀ ಓಡಾಟಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿಕೊಂಡಿದ್ದು,ಸೈಲ್ ಮತ್ತು ವೈದ್ಯ ಆಯ್ ಅರ್ ಬಿ ಅವೈಜ್ಞಾನಿಕ ಕಾಮಗಾರಿಯ ವಿರುದ್ಧದ ತಮ್ಮ ಜನಪರ ಗಟ್ಟಿ ನಿಲುವಿನ ಮೂಲಕ, ಇಲ್ಲಿ ಏನು ಮಾಡಿದರೂ ನಡೆಯೊತ್ತೆ ಎಂದು ತಿಳಿದಂತಿದ್ದ ಆಯ್ ಅರ್ ಬಿ ಯರಿಗೂ ಬಿಸಿ ಮುಟ್ಟಿಸಿದರು ಎಂದು ಹಲವರು ಹೆಮ್ಮೆಯಿಂದ ಮಾತನಾಡಿಕೊಳ್ಳುವಂತಾಗಿದೆ.

ಒಟ್ಟಿನಲ್ಲಿ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಕಾತರರಾಗಿರುವ ಹಲವು ಜನರ ನಡುವೆ,ಇನ್ನು ಕೆಲವರಿಗೆ ಸದ್ಯಕ್ಕೆ ಟೋಲ್ ಫ್ರೀ ಭಾಗ್ಯವು ಒದಗಿ ಬಂದಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button