ಪ್ರಸಿದ್ಧ ಮಾರಿಜಾತ್ರೆಗೆ ಅಧಿಕೃತ ಚಾಲನೆ : ಗದ್ದುಗೆ ಏರಿದ ದೇವಿ: ವಿಶೇಷ ಹರಕೆ ಸೇವೆ ಸಲ್ಲಿಸಿದ ಭಕ್ತರು

ಭಟ್ಕಳ: ತಾಲೂಕಿನ ಸುಪ್ರಸಿದ್ಧ ಮಾರಿ ಜಾತ್ರೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಮಾರಿ ದೇವಿ ಮೂರ್ತಿಯ ತಯಾರಕರಾದ ವಿಶ್ವಕರ್ಮ ಸಮಾಜದವರಿಂದ ವಿಶೇಷ ಪೂಜೆಯ ಬಳಿಕ ಮಾರಿ ದೇವಿಯ ಮೂರ್ತಿಯನ್ನು ಮುಂಜಾನೆ ಮೆರವಣಿಗೆಯ ಮೂಲಕ ಕರೆತಂದು ಸಂಪ್ರದಾಯದoತೆ ಜೈನ ಸಮುದಾಯದವರಿಂದ ಮೊದಲ ಪೂಜೆ ಸಲ್ಲಿಸಲಾಯಿತು.

ಜಿಲ್ಲೆಯಲ್ಲಿಯೇ ಅತ್ಯಂತ ವಿಜೃಂಬಣೆಯಿoದ ಅದ್ದೂರಿಯಾಗಿ ನಡೆಯುವ ಮಾರಿ ಜಾತ್ರೆಗಳಲ್ಲಿ ಭಟ್ಕಳ ತಾಲೂಕಿನ ಮಾರಿ ಜಾತ್ರೆಯು ಸಹ ಒಂದು. ಮಾರಿಜಾತ್ರೆ ಸಂಪೂರ್ಣವಾಗಿ ಗ್ರಾಮದೇವತೆಯ ಉತ್ಸವವಾಗಿದ್ದು, ಹಿಂದುಳಿದವರ ಹಾಗೂ ಪರಿಶಿಷ್ಠ ಜಾತಿ ಪಂಗಡದವರ ಮುಂದಾಳತ್ವದಲ್ಲಿ ನಡೆಯುತಿದ್ದ ವಿಶಿಷ್ಠ ಜಾತ್ರೆಯಾಗಿದೆ. ಬುಧವಾರದಂದು ಮುಂಜಾನೆ ಕರೆತರಲಾದ ಮಾರಿದೇವಿಯ ಮೂರ್ತಿಯನ್ನು ಮಾರಿಕಾಂಬಾ ದೇವಿಯ ಎದುರಿನ ಪ್ರಾಂಗಣದ ಗರ್ಭಗುಡಿಯ ಹೊರಗಡೆ ಪ್ರತಿಷ್ಠಾಪನೆ ಮಾಡಲಾಯಿತು.

ಎರಡು ದಿವಸ ನಡೆಯುವ ಈ ಜಾತ್ರೆಯಲ್ಲಿ ಬುಧವಾರದಂದು ಮೊದಲನೇ ದಿವಸ ಪರ ಊರಿನವರು ಮನೆಯಲ್ಲಿ ಹಬ್ಬ ಆಚರಿಸಿದ್ದಾರೆ. ಎರಡನೇ ದಿನವಾದ ಗುರುವಾರದಂದು ಸ್ಥಳೀಯರು ಹಬ್ಬ ಆಚರಿಸಲಿದ್ದಾರೆ. ಈ ಹಬ್ಬದ ಹೆಸರಿನಲ್ಲಿ ಭಕ್ತರು ಕೋಳಿಯನ್ನು ತಮ್ಮ ಮನೆಯಲ್ಲಿಯೇ ಕತ್ತರಿಸಿ ದೇವಿಗೆ ರಕ್ತ ಸಮರ್ಪಿಸುವ ಆಚರಣೆಯೂ ಉಂಟು. ಸಂಭ್ರಮದಿoದ ಜರುಗುವ ಈ ಜಾತ್ರೆಯಲ್ಲಿ ಅಕ್ಕ ಪಕ್ಕದ ತಾಲೂಕಿನಿಂದಲು ಭಕ್ತರು ಬಂದು ದೇವಿಯ ಆಶೀರ್ವಾದ ಪಡೆದುಕೊಳ್ಳುತ್ತಾರೆ.

ಮಾರಿರೂಪದಲ್ಲಿ ಕುಳಿತಿರುವ ಈ ದೇವಿಗೆ ಭಕ್ತರು ಊರಿಗೆ ಬರಬಹುದಾದ ಕಣ್ಣು ಬೇನೆ, ಸಿಡುಬು ಹಾಗು ಇನ್ನಿತರ ಸಾಂಕ್ರಾಮಿಕ ರೋಗಗಳು ಬಾರದೇ ತಡೆಗಟ್ಟುವಂತೆ ಭಕ್ತಿಯಿಂದ ಹೂವಿನ ಟೋಪಿ, ಎಲೆಯಿಂದ ಮಾಡಿದ ಹೂಕಟ್ಟು, ಬೆಳ್ಳಿಯ ಕಣ್ಣುಗಳನ್ನು ಅರ್ಪಿಸಿ ಕಾಪಾಡುವಂತೆ ಮೊರೆ ಇಡುವುದು ಈ ಜಾತ್ರೆಯ ವಿಶೇಷತೆಗಳಲ್ಲಿ ಒಂದು. ಈ ಬಾರಿಯೂ ಸಹ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹರಕೆ ತೀರಿಸಿದರು. ಪ್ರತಿ ವರ್ಷವೂ ಕೂಡಾ ತಮಗೆ ಬಂದ ಕಷ್ಟ ಕಾರ್ಪಣ್ಯಗಳು ದೂರಾಗಲಿ ಎಂದು ಹರಿಕೆ ಹೊತ್ತ ಭಕ್ತರು, ವಾರ್ಷಿಕ ಜಾತ್ರೆಯಲ್ಲಿ ಹರಿಕೆ ತೀರಿಸುವುದು ವಾಡಿಕೆಯಾಗಿದೆ.

ಗುರುವಾರ ಸಂಜೆ 4.30ಕ್ಕೆ ಮಾರಿ ಮೂರ್ತಿಯನ್ನು ತಲೆ ಮೇಲೆ ಹೊತ್ತು ಮೆರವಣಿಗೆ ಮೂಲಕ ಕರಿಕಲ್ ಸಮುದ್ರದಲ್ಲಿ ವಿಸರ್ಜಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ. ಜಾತ್ರೆ ಹಿನ್ನೆಲೆ 2 ದಿನಗಳ ಕಾಲ ಪೊಲೀಸ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಮೊದಲು ಬಾಂಬ್ ನಿಷ್ಕ್ರಿಯದಳದಿಂದ ದೇವಸ್ಥಾನವನ್ನು ತಪಾಸಣೆ ಮಾಡಿದ ಬಳಿಕ ಮಾರಿ ಮೂರ್ತಿಯನ್ನು ತಂದು ಪ್ರತಿಷ್ಠಾಪನೆ ಮಾಡಲಾಯಿತು

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version