ಅಂಕೋಲಾ: ಹಾಡು ಹಕ್ಕಿ ಎಂದೇ ಖ್ಯಾತರಾಗಿ ತಮ್ಮ ಜನಪದ ಸಿರಿಯ ಮೂಲಕ ಪದ್ಮಶ್ರೀ ಪುರಸ್ಕೃತರಾಗಿರುವ ಸುಕ್ರಿ ಬೊಮ್ಮ ಗೌಡ ಇವರನ್ನು ಕದಂಬ ನೌಕಾನೆಲೆಯ ಐ.ಎನ್. ಎಸ್ ವಜ್ರಕೋಶದ ಕಮಾಂಡಿಂಗ್ ಆಫೀಸರ್ ಕ್ಯಾಪ್ಟನ್ ಆರ್.ಕೆ.ಸಿಂಗ್ ಇವರು ಬಡಗೇರಿಗೆ ಭೇಟಿ ನೀಡಿ ಸನ್ಮಾನಿಸಿ ಗೌರವ ಸಲ್ಲಿಸಿದರು. ಸುಕ್ರಜ್ಜಿಯ ಮನೆಗೆ ಆಗಮಿಸಿದ ಕ್ಯಾಪ್ಟನ್ ಆರ್.ಕೆ.ಸಿಂಗ್ ಸುಕ್ರಜ್ಜಿಗೆ ನೀಡಲಾಗಿರುವ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಅವರು ಪಡೆದ ನೂರಾರು ಪುರಸ್ಕಾರಗಳನ್ನು ಕಂಡು ಸಂತಸ ವ್ಯಕ್ತಪಡಿಸಿದರು.
ಸ್ಥಳೀಯ ಹಾಲಕ್ಕಿ ಮಹಿಳೆಯರ ಜಾನಪದ ಹಾಡಿಗೆ ತಲೆದೂಗಿ, ಬಹು ಹೊತ್ತು ತದೇಕ ಚಿತ್ರರಾಗಿ ಜಾನಪದ ಶೈಲಿಯ ಹಾಡು ಆಲಿಸಿದ ಅವರು ತಮಗೆ ಭಾಷೆ ಅರ್ಥವಾಗದೇ ಇದ್ದರೂ ಹಾಡಿನ ಶೈಲಿ ಮನಸ್ಸಿಗೆ ಮುದ ನೀಡಿತು. ಸುಕ್ರಜ್ಜಿ ಮತ್ತು ಹಾಲಕ್ಕಿ ಮಹಿಳೆಯರಿಗೆ ವಿಶೇಷ ಅಭಿನಂದನೆಗಳು ಎಂದು ಹೇಳಿ ಚಪ್ಪಾಳೆಯ ಮೂಲಕ ಸಂತಸ ಹಂಚಿಕೊಂಡರು.
ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಪದ್ಮಶ್ರೀ ಸುಕ್ರಜ್ಜಿ ಅವರ ಮನೆಗೆ ಭೇಟಿ ನೀಡಿ ಸುಕ್ರಜ್ಜಿ ಅವರ ಆರೋಗ್ಯ ವಿಚಾರಿಸಿ, ಸನ್ಮಾನಿಸಿ ಗೌರವಿಸಿರುವುದಾಗಿ ತಿಳಿಸಿದ ಅವರು ಸುಕ್ರಿ ಗೌಡ ಅವರು ನಮ್ಮ ದೇಶದ ಹೆಮ್ಮೆಯಾಗಿದ್ದು, ಸುಕ್ರಜ್ಜಿಗೆ ನೌಕಾನೆಲೆಗೆ ಬರುವಂತೆ ಆಹ್ವಾನಿಸಿದರು.
ಸಾಮಾಜಿಕ ಕಾರ್ಯಕರ್ತ ಹಾಗೂ ಸುಕ್ರಜ್ಜಿ ಆರೋಗ್ಯದ ವಿಚಾರರಲ್ಲಿ ಸದಾ ಕಾಳಜಿ ವಹಿಸುತ್ತ ಬಂದಿರುವ ಮಾದವ ನಾಯಕ ವಜ್ರಕೋಶದ ಅಧಿಕಾರಿಗಳನ್ನು ಪರಿಚಯಿಸಿ, ನಂತರ ಅವರಿಗೆ ಸುಕ್ರಜ್ಜಿ ಜೊತೆ ಸಂಹವನ ನಡೆಸಲು ಭಾಷಾಂತರಿಸಿದರು. ವಜ್ರಕೋಶದ ರಕ್ಷಣಾ ವಿಭಾಗದವರಿದ್ದರು. ರವೀಶ್, ಧನಂಜಯ,ಮಹೇಶ್ ಗೌಡ,ಸುಕ್ರಜ್ಜಿ ಕುಟುಂಬಸ್ಥರು ಸೇರಿದಂತೆ ಸ್ಥಳೀಯರು ರಿದ್ದರು.ರಕ್ಷಣಾ ವಿಭಾಗದ ಹಿರಿಯ ಅಧಿಕಾರಿಯನ್ನು ಆತ್ಮೀಯತೆಯಿಂದ ಮಾತನಾಡಿಸಿದ ಸುಕ್ರಜ್ಜಿ,ಮನದುಂಬಿ ಹಾರೈಸಿದರು.
ದೇಶದ ರಕ್ಷಣೆಗಾಗಿ ಕಾರವಾರ ಅಂಕೋಲಾ ಸುತ್ತ ಮುತ್ತಲಿನ ಅನೇಕ ಜನರು ಅಪಾರ ತ್ಯಾಗ ಮಾಡಿದ್ದು ಸ್ಥಳೀಯರಿಗೆ ನೌಕಾನೆಲೆ, ವಿಮಾನ ನಿಲ್ದಾಣ ಮೊದಲಾದ ಯೋಜನೆಗಳಲ್ಲಿ ಉದ್ಯೋಗಾವಕಾಶ ಸಿಗುವಂತಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾದವ ನಾಯಕ ಅವರು ನೌಕಾನೆಲೆ ಕ್ಯಾಪ್ಟನ್ ಆರ್.ಕೆ.ಸಿಂಗ್ ಅವರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಕ್ಯಾಪ್ಟನ್ ಆರ್. ಕೆ.ಸಿಂಗ್ ತಾವು ತಮ್ಮ ಹುದ್ದೆಗೆ ಸೀಮಿತವಾಗಿ ಕೆಲಸ ಮಾಡಬೇಕಿದ್ಧು ಅವಕಾಶ ಇದ್ದಲ್ಲಿ ಸ್ಥಳೀಯರ ಉದ್ಯೋಗಕ್ಕೆ ಹಾಗೂ ಇತರೆ ರೀತಿಯಲ್ಲಿ ಖಂಡಿತ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ