ಹೊನ್ನಾವರ:ತಾಲೂಕಿನೆಲ್ಲಡೆ ವ್ಯಾಪಕವಾದ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ಗುಂಡಬಾಳ ನದಿಯಲ್ಲಿ ನೆರೆ ಉಂಟಾಗಿದ್ದು, ನದಿಯಲ್ಲಿ ನೀರಿನ ಹರಿವು ಭಾರೀ ಹೆಚ್ಚಳವಾಗಿದೆ. ಪರಿಣಾಮ ನದಿ ಪ್ರದೇಶದ ವ್ಯಾಪ್ತಿಯಲ್ಲಿನ ತೋಟ, ಗದ್ದೆ, ಮನೆಗಳಿಗೆ ನೀರು ನುಗ್ಗಿದೆ.
ಗುಂಡಿಬೈಲ್ ಹಿತ್ತಕೇರಿ, ಚಿಕ್ಕನಕೋಡ ಹಿತ್ತಕೇರಿ, ಮುಟ್ಟಾ, ಹೆಬೈಲ್, ಕೆಂಚಗಾರ, ಚಿಕ್ಕನಕೋಡ, ಗುಂಡಬಾಳ ದೇವಸ್ಥಾನ ಕೇರಿ, ಹಡಿನಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿ ಅಂಚಿನ ಮನೆಗಳಿಗೆ ನೆರೆಯ ನೀರು ನುಗ್ಗಿದೆ. ಪರಿಣಾಮ ಜನರು ಆತಂಕದಲ್ಲಿ ಇದ್ದಾರೆ. ನದಿಯ ನೀರಿನ ಹರಿವು ಹೆಚ್ಚಾದಂತೆ ಮನೆಯ ಒಳಗೆ ಹೋಗುವ ಸಾಧ್ಯತೆ ಇದ್ದು, ದೋಣಿಯ ಮೂಲಕ ಜನ,ಜಾನುವಾರು ಸಾಗಾಟಕ್ಕೆ ತಾಲ್ಲೂಕು ಆಡಳಿತ ಸಜ್ಜಾಗಿದೆ.
ಸ್ಥಳೀಯರ ತೋಟ, ಗದ್ದೆಗಳಿಗೆ ನೀರು ನುಗ್ಗಿದ್ದು, ಜನರು ಜಾನುವಾರುಗಳ ಜತೆಗೆ ಸ್ಥಳಾಂತರಕ್ಕೆ ಅಗತ್ಯ ಸಿದ್ಧತೆಗಳು ಮಾಡಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಬಾಸ್ಕೆರಿ ಹೊಳೆಯಲ್ಲಿ ಕೂಡ ನೀರು ತುಂಬಿ ಹರಿಯುತ್ತಿರುವುದರಿಂದ ನದಿ ಅಂಚಿನ ತೋಟಗಳು ಜಲಾವೃತ ಆಗಿವೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ