ಅಂಕೋಲಾ : ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಕಾರ್ಯದರ್ಶಿಯಾಗಿದ್ದ ಗಂಗೂಬಾಯಿ ರಮೇಶ ಮಾನಕರ್ ಅವರನ್ನು ಸರ್ಕಾರ ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ನಿಯೋಜಿಸಿ ಆದೇಶಿಸಿದೆ. 1998 ನೇ ಸಾಲಿನ ಕೆ. ಎ.ಎಸ್. ಶ್ರೇಣಿಯ ಅಧಿಕಾರಿಯಾಗಿದ್ದ ಗಂಗೂಬಾಯಿ ಅವರು 2018 ರಲ್ಲಿ ಐ ಎ ಎಸ್ ಗೆ ಮುಂಬಡ್ತಿ ಪಡೆದಿದ್ದರು.
ಬಾಗಲಕೋಟದಲ್ಲಿ ಜಿ. ಪಂ ಸಿಇಓ ಆಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಮಾಜಿ ದೇವದಾಸಿಯರ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಟೊಂಕ ಕಟ್ಟಿ ನಿಂತಿದ್ದ ಈ ಮಹಿಳಾ ಅಧಿಕಾರಿ , ಸ್ವತಃ ತಾವೇ ಮುಂದೆ ನಿಂತು ಮದುವೆ ಮಾಡಿಸಿ, ನಾಡಿನಾದ್ಯಂತ ಸುದ್ದಿಯಾಗಿದ್ದರು. ಈ ಹಿಂದೆ ಕುಮಟಾದಲ್ಲಿಯೂ ಎ ಸಿ ಆಗಿ ಕರ್ತವ್ಯ ನಿರ್ವಹಿಸಿರುವ ಮೂಲಕ ಜಿಲ್ಲೆಯ ಪರಿಚಯ ಹಾಗೂ ರಾಜ್ಯದ ವಿವಿಧೆಡೆ ಬೇರೆ ಬೇರೆ ಹುದ್ದೆ ನಿಭಾಯಿಸಿ,ಆಡಳಿತಾತ್ಮಕ ಅನುಭವ ಹೊಂದಿದ್ದಾರೆ.
ಕೆಲ ವಿಶೇಷ ಸಂದರ್ಭಗಳಲ್ಲಿ ತಮ್ಮ ಗಾಯನದ ಮೂಲಕವೂ ಗಮನ ಸೆಳೆದಿರುವ ಇವರು, ಉದ್ಯೋಗ ಖಾತ್ರಿ (ನರೇಗಾ ) ದಂತ ಕಾರ್ಯಕ್ರಮ ಅನುಷ್ಠಾನಗೊಳಿಸುವ ವೇಳೆ ತಲೆಯ ಮೇಲೆ ಬುಟ್ಟಿ ಹೊತ್ತು ತಾವೇ ಕೆಲಸಕ್ಕಿಳಿದು, ಕೂಲಿಯಾಳುಗಳ ಜೊತೆ ಆತ್ಮೀಯವಾಗಿ ಬೆರೆತು, ಪ್ರೋತ್ಸಾಹಿಸಿ ಮಾದರಿಯಾಗಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ಜನರ ಸಂಕಷ್ಟಕ್ಕೆ ಧ್ವನಿಯಾಗುತ್ತಾರೆ ಎನ್ನುವ ವಿಶ್ವಾಸ ಹಲವರಲ್ಲಿದ್ದು, ನೂತನ ಅಧಿಕಾರಿಗೆ ಸ್ವಾಗತ ಕೋರುತ್ತಾ, ಅವರು ಉತ್ತರ ಕನ್ನಡ ಜಿಲ್ಲೆಯ ಜನರ ನಾಡಿ ಮಿಡಿತ ಅರಿತು , ಉತ್ತಮ ರೀತಿಯಲ್ಲಿ ಕರ್ತವ್ಯ ನಿಭಾಯಿಸುವಂತಾಗಲಿ ಎಂದು ಶುಭ ಕೋರೋಣ..
ಹಾಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಭುಲಿಂಗ ಕವಳಿಕಟ್ಟಿ ವರ್ಷ ತುಂಬುವುದರ ಒಳಗೇ ಜಿಲ್ಲೆಯಿಂದ ನಿರ್ಗಮಿಸುವಂತಾಗಿದ್ದು, ತನ್ನ ನಿಗರ್ವಿ ವ್ಯಕ್ತಿತ್ವ, ಸರಳ ಮತ್ತು ನೇರ ನಡೆ- ನುಡಿಗಳಿಂದ ಜಿಲ್ಲೆಯ ಜನರಿಗೆ ಸ್ವಂದಿಸುವ ವ್ಯಕ್ತಿಯಾಗಿದ್ದರು. ಅವರ ಒಳ್ಳೆಯ ಗುಣ ನಡತೆಗಳನ್ನು ಪ್ರಶಂಸಿಸಿ ಬೀಳ್ಕೊಡೋಣ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ