ಕರ್ತವ್ಯ ನಿರತ ASI ಮತ್ತು ಹವಾಲ್ದಾರ ಇವರ ಬೈಕಿಗೆ ಡಿಕ್ಕಿ ಪಡಿಸಿ ಪರಾರಿಯಾದ ಗೂಡ್ಸ್ ವಾಹನ ಚಾಲಕ
ಮಾನವೀಯತೆ ಮೆರೆದ ಸ್ಥಳೀಯ ರಿಕ್ಷಾ ಹಾಗೂ ಕಾರು ಚಾಲಕರು
ಅಂಕೋಲಾ : ಬಸ ನಿಲ್ದಾಣದ ಎದುರಿನ ರಿಕ್ಷಾ ಸ್ಟ್ಯಾಂಡ್ ಕ್ರಾಸ್ ಬಳಿ ಗುರುವಾರ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ, ಪೊಲೀಸ್ ಸಿಬ್ಬಂದಿಗಳಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಗೂಡ್ಸ ವಾಹನವೊಂದರ ಚಾಲಕ ,ಎಲ್ಲರೂ ನೋಡ ನೋಡುತ್ತಿದ್ದಂತೆ ತನ್ನ ವಾಹನ ಸಮೇತ ಸ್ಥಳದಿಂದ ಪರಾರಿಯಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಅಂಕೋಲಾ ಪೊಲೀಸ್ ಠಾಣೆಯ ಕರ್ತವ್ಯ ನಿರತ ಓರ್ವ ಎ ಎಸ್ ಐ ಹಾಗೂ ಇನ್ನೋರ್ವ ಹವಾಲ್ದಾರ ಇವರಿಬ್ಬರೂ ಕೂಡಿಕೊಂಡು ಕುಮಟಾ ಕಡೆಯಿಂದ ಅಂಕೋಲಾ ಪಟ್ಟಣದ ಕಡೆ ಬರುವ ಮುಖ್ಯ ರಸ್ತೆ (ದಿನಕರ ದೇಸಾಯಿ ಮಾರ್ಗ ) ಯಲ್ಲಿ ತಮ್ಮ ಬೈಕ್ ಮೇಲೆ ಪೊಲೀಸ್ ಠಾಣೆಯತ್ತ ಬರುತ್ತಿರುವಾಗ, ದಾರಿಮಧ್ಯೆ ಅಂಕೋಲಾ ಬಸ್ ನಿಲ್ದಾಣದ ಎದುರಿನ ರಿಕ್ಷಾ ಸ್ಟ್ಯಾಂಡ್ ಕ್ರಾಸ್ ಬಳಿ, ಕೆ.ಸಿ.ರಸ್ತೆ ಕಡೆಯಿಂದ ಅತೀ ವೇಗ ಹಾಗೂ ನಿರ್ಲಕ್ಷ್ಯ ತನದಿಂದ ತನ್ನ KA 30 A 3174 ನಂಬರಿನ ಟಾಟಾ ಏಸ್ ಮೆಗಾ ಎಕ್ಸೆಲ್ ಗೂಡ್ಸ ರಿಕ್ಷಾ ಚಲಾಯಿಸಿಕೊಂಡು ಬಂದ ವಾಹನ ಚಾಲಕ, ಪೊಲೀಸ್ ಸಿಬ್ಬಂದಿಗಳಿದ್ದ ಬೈಕಿಗೆ ಜೋರಾಗಿ ಡಿಕ್ಕಿ ಪಡಿಸಿದ ಪರಿಣಾಮ ಬೈಕ್ ನಲ್ಲಿದ್ದ ಎಎಸ್ ಐ , ಮತ್ತು ಹವಾಲ್ದಾರ ಇಬ್ಬರೂ ಸಿಡಿದು ಬಿದ್ದು, ಬೈಕಿಗೂ ಜಖಂ ಪಡಿಸಿದ್ದಾನೆ ಎನ್ನಲಾಗಿದೆ.
ಘಟನಾ ಸ್ಥಳದ ಹತ್ತಿರದಲ್ಲೇ ಇದ್ದ ಕೆಲ ರಿಕ್ಷಾ ಮತ್ತು ಕಾರು ಚಾಲಕರು , ಬೈಕನ್ನು ಮೇಲೆತ್ತಿ, ಗಾಯಗೊಂಡ ಪೋಲೀಸ್ ಸಿಬ್ಬಂದಿಗಳ ಆರೋಗ್ಯ ವಿಚಾರಿಸುವ ಮಾನವೀಯತೆ ಕಾರ್ಯದಲ್ಲಿ ನಿರತರಾದರೆ, ಅಪಘಾತ ಪಡಿಸಿದ ಗೂಡ್ಸ ವಾಹನ ಚಾಲಕ ಸೌಜನ್ಯಕ್ಕೂ ತನ್ನ ವಾಹನದಿಂದ ಇಳಿಯದೇ, ಮಾನವೀಯತೆಯನ್ನು ಮರೆತು ಇದೇ ಸರಿಯಾದ ಸಮಯ ಎಂಬಂತೆ ತನ್ನ ವಾಹನವನ್ನು ಮುಂದೆ ನಿಲ್ಲಿಸಲು ಹೊಂದಂತೆ ಮಾಡಿ , ಎಲ್ಲರೂ ನೋಡ ನೋಡುತ್ತಿರುವಂತೆ ವಾಹನ ಸಮೇತ ಪರಾರಿಯಾಗಿದ್ದಾನೆ.
ಗೂಡ್ಸ್ ವಾಹನ ಚಾಲಕನ ಈ ನಡೆಯ ಕುರಿತು ಸ್ಥಳೀಯರನೇಕರು ಅಚ್ಚರಿ ಹಾಗೂ ಅಸಮಾಧಾನ ವ್ಯಕ್ತಪಡಿಸುವಂತಾಗಿದ್ದು, ಆತ ಪೊಲೀಸರಿಗೆ ಅಪಘಾತ ಪಡಿಸಿದ ಹೆದರಿಕೆಯಲ್ಲಿ ಪರಾರಿಯಾದನೇ ಅಥವಾ ಗೂಡ್ಸ ವಾಹನದಲ್ಲಿ ಕಾನೂನು ಬಾಹೀರವಾಗಿ ಏನನ್ನಾದರೂ ಸಾಗಿಸಲಾಗುತ್ತಿತ್ತೇ ಎನ್ನುವ ಅನುಮಾನ ವ್ಯಕ್ತಪಡಿಸಿದಂತಿದೆ.ಅಪಘಾತದ ಘಟನಾವಳಿಗಳ ದ್ರಶ್ಯಾವಳಿಗಳು ಅಕ್ಕಪಕ್ಕದ ಸಿ ಸಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ಸಾಧ್ಯತೆ ಇದೆ. ಅಸಲಿಗೆ ಈ ವಾಹನ ಕಾರವಾರ ಮೂಲದವರದ್ದಾಗಿದ್ದು, ಅವರು ತಮ್ಮ ಅನಾರೋಗ್ಯ ಮತ್ತಿತರ ಕಾರಣದಿಂದ ಅದನ್ನು ಇನ್ನಾರಿಗೋ ಮಾರಾಟ ಮಾಡಿದ್ದರು ಎನ್ನಲಾಗಿದ್ದು, ಹಾಗಾದರೆ ಅಪಘಾತ ಪಡಿಸಿ ಪರಾರಿಯಾದವರಾರು ? ಖರೀದಿ ಮಾಡಿದಂತೆ ಮಾಡಿ ಮೂಲ ಮಾಲಕನ ಹೆಸರಿನಲ್ಲಿಯೇ ಅಕ್ರಮ ದಂಧೆಗೆ ಬಳಸುತ್ತಿದ್ದರೇ ? ಎಂಬಿತ್ಯಾದಿ ರೀತಿಯಲ್ಲಿ ಕೇಳಿಬರುತ್ತಿರುವ ಸಾರ್ವಜನಿಕ ವಲಯದ ಕೆಲ ಅನುಮಾನದ ಪ್ರಶ್ನೆಗಳ ಕುರಿತಂತೆ ಸತ್ಯಾ ಸತ್ಯತೆ ತಿಳಿದು ಬರಬೇಕಿದೆ.
ಗಾಯಗೊಂಡ ಪೋಲೀಸ್ ಸಿಬ್ಬಂದಿಗಳನ್ನು ರಿಕ್ಷಾದವರು ಸ್ಥಳೀಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಅವರಿಗೆ ಚಿಕಿತ್ಸೆಗೊಳಪಡಿಸಲಾಗಿದೆ. ನಡೆದ ಅಪಘಾತದ ಘಟನೆ ಹಾಗೂ ಪೊಲೀಸರ ಮುಂದಿನ ಕ್ರಮಗಳ ಕುರಿತೂ ಸಾರ್ವಜನಿಕ ವಲಯದಲ್ಲಿ ನಾನಾ ಚರ್ಚೆಗೆ ಕಾರಣವಾದಂತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ