Important
Trending

ಬಾವಿಗೆ ಬಿದ್ದು ಇಂಜಿನಿಯರ್ ಸಾವು: ಆತ್ಮಹತ್ಯೆಯ ಶಂಕೆ?

ಅಂಕೋಲಾ : ಪಟ್ಟಣದ ಪಿ.ಎಲ್. ಡಿ ಬ್ಯಾಂಕ್ (ಭೂ ಅಭಿವೃದ್ಧಿ ಬ್ಯಾಂಕ್) ಅವರಣದಲ್ಲಿರುವ ಕೂಲಿಕಾರರ ಸೊಸೈಟಿಗೆ ಸಂಬಂಧಿಸಿದ ಬಾವಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಶುಕ್ರವಾರ ಸಂಭವಿಸಿದೆ. ಶಾಂತಾದುರ್ಗಾ ದೇವಸ್ಥಾನದ ಹತ್ತಿರದ ನಿವಾಸಿ, ರಾಮಚಂದ್ರ ಪೆಡ್ನೇಕರ (ಅಂದಾಜು 58 ವರ್ಷ )ಮೃತ ದುರ್ದೈವಿ.

ಸುಶಿಕ್ಷಿತನಾಗಿದ್ದ ಇವರು ಸಿವಿಲ್ ಇಂಜಿನಿಯರ್ ಆಗಿದ್ದು, ತನ್ನ ಅಗಾಧ ಬುದ್ಧಿ ಶಕ್ತಿ ಮೂಲಕ ತಾಲ್ಲೂಕಿನ ನೂರಾರು ಮನೆಗಳ ವಿನ್ಯಾಸ ರಕ್ಷೆ ರಚನೆ ( ಬ್ಲೂ ಪ್ರಿಂಟ್ ) ಅತೀ ಕಡಿಮೆ ಅವಧಿ ಹಾಗೂ ಕನಿಷ್ಟ ದರದಲ್ಲಿ ಮಾಡಿ ಕೊಡುವ ಮೂಲಕ ಹಲವರ ಸೂರಿನ ಆಸರೆಗೆ ನೆರವಾಗಿದ್ದರು. ಚಟುವಟಿಕೆಯಿಂದಲೆ ಇದ್ದ ಇವರು ಇತ್ತೀಚಿಗೆ ತನ್ನಲ್ಲಿ ಕಾಣಿಸಿಕೊಂಡ ದೇಹಾರೋಗ್ಯ ಸಮಸ್ಯೆಯಿಂದ ನೊಂದು ಮನೆಯಿಂದ ಸ್ವಲ್ಪ ದೂರದಲ್ಲಿರುವ ಪಿ ಎಲ್ ಡಿ ಬ್ಯಾಂಕ್ ಅವರಣದಲ್ಲಿರುವ ಬಾವಿಗೆ ಬಿದ್ದು ಆತ್ಮಹತ್ಯೆಗೆ ಶರಣಾದನೇ? ಅಥವಾ ಬಾವಿಗೆ ನೀರು ಸೇದಲು ಬಂದಾಗ ಜಾರುವಿಕೆಯಿಂದ ಆಯತಪ್ಪಿ ನೀರಲ್ಲಿ ಬಿದ್ದು ಮುಳುಗಿದನೇ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಿದ್ದು, ಬಾವಿ ಕಟ್ಟೆ ಬಳಿ ಮೃತನ ಪಾದರಕ್ಷೆ ಮತ್ತು ಕನ್ನಡಕ ಕಂಡು ಬಂದಿದೆ.

ಪಿ. ಎಸ್ ಐ ಗೀತಾ ಶಿರ್ಸಿಕರ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಕೈಗೊಂಡಿದ್ದು,ಪೆಡ್ನೇಕರ ಸಾವಿನ ಕುರಿತಂತೆ ಪೋಲೀಸ ತನಿಖೆಯಿಂದ ನಿಖರ ಮತ್ತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ . ಸುದ್ದಿ ತಿಳಿದ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಬಂದು ಬಾವಿಯಿಂದ ಮೃತ ದೇಹ ಮೇಲೆತ್ತಿದ್ದರು. ಸ್ಥಳೀಯರು ಮತ್ತು ಪೊಲೀಸರು ಸಹಕರಿಸಿದರು . ಸಾಮಾಜಿಕ ಕಾರ್ಯಕರ್ತರಾದ ವಿಜಯ ಕುಮಾರ ನಾಯ್ಕ ರಕ್ಷಕ ವಾಹನದ ಮೂಲಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾ ಆಸ್ಪತ್ರೆ ಶವಗಾರಕ್ಕೆ ಸಾಗಿಸಿದರು. ಹಿರಿಯ ಸಾಮಾಜಿಕ ಕಾರ್ಯಕರ್ತ ಅಲಗೇರಿಯ ಸುರೇಶ್ ವೆರ್ಣೇಕರ, ಕನಸಿಗದ್ದೆ ಯ ಅನಿಲ ಮಹಾಲೆ, ಬೊಮ್ಮಯ್ಯ ನಾಯ್ಕ, ಹಾಗೂ ಮೃತನ ಕುಟುಂಬಸ್ಥರು, ಅಕ್ಕ ಪಕ್ಕದ ಮನೆಯವರು ಸಹಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button