Big News
Trending

ಅರಣ್ಯ ರಕ್ಷಣೆಯ ಜೊತೆಗೆ ಔಷಧೀಯ ಗಿಡಮೂಲಿಕೆಗಳ ರಕ್ಷಣೆಯೂ ಅಗತ್ಯ : ಆರ್ ಎಫ್ ಓ ಗಣಪತಿ

ವೃಕ್ಷಮಾತೆ ಪದ್ಮಶ್ರೀ ಡಾ ತುಳಸಿ ಗೌಡ ರವರಿಗೆ ಸನ್ಮಾನ ಗೌರವ

ಅಂಕೋಲಾ : ಪರಿಸರದ ಸಂರಕ್ಷಣೆ ಎಂದರೆ ಕೇವಲ ಅರಣ್ಯ ರಕ್ಷಣೆ ಮಾತ್ರವಾಗಿರದೇ, ಅಮೂಲ್ಯ ಔಷಧೀಯ ಸಸ್ಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರಿಗೂ ಇದೆ ಎಂದು ವಲಯ ಅರಣ್ಯಾಧಿಕಾರಿ ನಾಯಕ ಹೇಳಿದರು. ಅವರು ಪತಂಜಲಿ ಯೋಗ ಸಮಿತಿ ಅಂಕೋಲಾ ಮತ್ತು ಭಾರತ ಸ್ವಾಭಿಮಾನ ಟ್ರಸ್ಟ್ ಅಂಕೋಲಾ ಇವರ ಆಶ್ರಯದಲ್ಲಿ ಕೆ.ಸಿ. ರಸ್ತೆಯಂಚಿಗಿರುವ ಶ್ರೀ ಗಣಪತಿ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಿದ್ದ ಜಡಿ ಬೂಟಿ ಗಿಡಮೂಲಿಕೆ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ ಅರಣ್ಯ ಸಂರಕ್ಷಣೆಯ ಜೊತೆಗೆ ಔಷಧಯುಕ್ತ ಗಿಡಗಳ ರಕ್ಷಣೆಯೂ ತುಂಬಾ ಮಹತ್ವದ್ದಾಗಿದೆ. ಔಷಧಯುಕ್ತ ಗಿಡಗಳನ್ನು ಸಂರಕ್ಷಿಸಿ ಅಭಿವೃದ್ದಿಪಡಿಸಲು ಸರಕಾರ ಹೊಸ ಹೊಸ ಯೋಜನೆಗಳನ್ನು ತಂದಿದೆ. ಸಾರ್ವಜನಿಕರು ಅದರ ಸದುಪಯೋಗ ಪಡೆದು ತಮ್ಮ ಮನೆಗಳ ಸುತ್ತಲಿನ ಪರಿಸರದಲ್ಲೆ ಔಷಧಯುಕ್ತ ಗಿಡ ಮೂಲಿಕೆಗಳನ್ನು ಬೆಳೆಸಬೇಕು. ಇದರ ಜಾಗೃತಿಗಾಗಿ ಸಂಘ ಸಂಸ್ಥೆಗಳು ಹೆಚ್ಚಿನ ಆಸಕ್ತಿ ವಹಿಸಬೇಕು. ಈಗಲೇ ನಾವು ಗಿಡಮರಗಳನ್ನು ನೆಟ್ಟು ಬೆಳೆಸಿದರೆ ಅದು ಮುಂದಿನ ಪೀಳಿಗೆಗೆ ಆಕ್ಸಿಜನ್ ಬ್ಯಾಂಕ್ ಇದ್ದಂತೆ ಎಂದರು.

ಪದ್ಮಶ್ರೀ ಪುರಸ್ಕೃತ ಡಾ.ತುಳಸೀ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಗಿಡಗಳನ್ನು ನೆಡಿ, ಅವುಗಳನ್ನು ಪೋಷಿಸಿ. ಪ್ರತಿಯೊಬ್ಬರೂ ಗಿಡಗಳನ್ನು ಬೆಳೆಸಿದರೆ ಅದೇ ನನಗೆ ಸಂತೋಷ ಎಂದರು. ಪ್ರಮುಖ ವಿಜಯದೀಪ ಮಾತನಾಡಿ ಔಷಧಗಿಡಗಳ ಕುರಿತು ಪರಿಚಯಿಸಿ ಅನೇಕ ಔಷಧ ಗಿಡಗಳು ಈಗ ಮಾನವನ ದುರಾಸೆಗೆ ಬಲಿಯಾಗಿ ಕಣ್ಮರೆಯಾಗುತ್ತಿವೆ. ಇಂಗ್ಲೀಷ ಔಷಧಗಳ ಬದಲಿಗೆ ಔಷಧಯುಕ್ತ ಗಿಡಗಳನ್ನು ಮನೆಯಲ್ಲೆ ಬೆಳೆಸಿ ಎಂದರು. ಅಮೃತಬಳ್ಳಿ, ಒಂದೆಲಗ, ಅರಿಶಿಣ, ಸಾವಸಂಬಾರ, ತುಳಸೀ, ಪತ್ಥರ ಚಟ್ಟಾನ್, ಅಲೋವೆರಾ ಮುಂತಾದ ಗಿಡಗಳ ಉಪಯೋಗವನ್ನು ತಿಳಿಸಿಕೊಟ್ಟರು.

ಪತಂಜಲಿ ಯೋಗ ಸಮಿತಿಯ ಯೋಗ ಗುರು ವಿನಾಯಕ ಗುಡಿಗಾರ ಪ್ರಾಸ್ತಾವಿಕ ಮಾತನಾಡಿ ಪತಂಜಲಿ ಯೋಗ ಸಮಿತಿಯ ವತಿಯಿಂದ ಕಳೆದ 8 ವರ್ಷಗಳಿಂದ ಸಂಶೋಧಕ ಬಾಲಕೃಷ್ಣ ಆಚಾರ್ಯ ಅವರ 52ನೇ ಜನ್ಮದಿನ ಪ್ರಯುಕ್ತ ಗಿಡಮೂಲಿಕೆಗಳ ದಿನಾಚರಣೆಯನ್ನು ಆಚರಿಸುತ್ತ ಬರಲಾಗಿದೆ. ಅದರ ಪ್ರಯುಕ್ತ ತಾಲೂಕಿನ ನಾಟೀ ವೈದ್ಯರನ್ನು ಕರೆದು ಸನ್ಮಾನಿಸಿ ಗೌರವಿಸಲಾಗುತ್ತಿದೆ. ಈ ಸಲ ವೃಕ್ಷಮಾತೆ ಪದ್ಮಶ್ರೀ ತುಳಸೀ ಗೌಡರನ್ನು ಮತ್ತು ಪದ್ಮಶ್ರೀ ಸುಕ್ರೀ ಗೌಡರನ್ನು ಸನ್ಮಾನಿಸಿ ಗೌರವಿಸಲಾಗಿದೆ ಎಂದರು.

ಲಾಯನ್ಸ್ ಕ್ಲಬ್ ಸಿಟಿ ಸದಸ್ಯ ಎನ್ ಎಚ್ ನಾಯಕ ಮಾತನಾಡಿ ಅಶೋಕ ಗಿಡದ ಮಹತ್ವವನ್ನು ತಿಳಿಸಿ ಅರಣ್ಯ ನಾಶ‌ದಿಂದ ಈಗಾಗಲೇ ಮನುಷ್ಯ ಪ್ರಕೃತಿ ವಿಕೋಪಗಳಿಗೆ ಕಾರಣವಾಗುತ್ತಿದ್ದಾನೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಭಾರಿ ಶ್ರೀನಾಥ, ನಾಟೀ ಔಷಧಿಂದ ರೋಗ ಗುಣವಾದರೆ ಆಧುನಿಕ ಔಷಧಗಳಿಂದ ರೋಗಗಳು ಸೃಷ್ಠಿಯಾಗುತ್ತಿವೆ ಎಂದರು. ಪುರಸಭೆಯ ಮಾಜಿ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಔಷಧಯುಕ್ತ ವಿಶಿಷ್ಠ ಗಿಡಗಳನ್ನು ಪರಿಚಯಿಸಿ ವಿತರಿಸಿದರು. ಹಾಗೂ ಲಯನ್ಸ ಕ್ಲಬ್ ವತಿಯಿಂದ ಗಿಡಗಳನ್ನು ನೀಡಲಾಯಿತು.

ವೇದಿಕೆಯಲ್ಲಿ ಪತಂಜಲಿ ಕಿಸಾನ ಸಮಿತಿಯ ಪ್ರಭಾರಿ ಅಭಯ ಮರಬಳ್ಳಿ, ಸಾಮಾಜಿಕ ಜಾಲತಾಣ ಪ್ರಭಾರಿ ಸ್ಮೀತಾ ರಾಯಚೂರು ಉಪಸ್ಥಿತರಿದ್ದು  ಮಾತನಾಡಿದರು.  ವಿನಾಯಕ ಗುಡಿಗಾರ ಸ್ವಾಗತಿಸಿದರು. ಯೋಗಿತಾ ಶೆಟ್ಟಿ ಪ್ರಾರ್ಥಿಸಿದರು. ವಿ ಕೆ ನಾಯರ ವಂದಿಸಿದರು. ಪ್ರಶಾಂತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಲಯನ್ಸ ಕ್ಲಬ್ ಸದಸ್ಯರು, ಸಂಗಮ ಸೇವಾ ಸಂಸ್ಥೆಯ ರವೀಂದ್ರ ಶೆಟ್ಟಿ, ಸತ್ಯ ಸಾಯಿ ಸಮಿತಿ, ಪುರಾತನ ಇತಿಹಾಸ ಸಂಶೋಧಕ ಶಾಮಸುಂದರ ಗೌಡ, ಪತಂಜಲಿ ಯೋಗಸಮಿತಿಯ ಸದಸ್ಯರು, ಮಹಿಳಾ ಸಮಿತಿಯ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button