Important
Trending

ಚಲನಚಿತ್ರ ನೋಡಿ ಬರುವಷ್ಟರಲ್ಲಿ ಬೈಕ್ ಕಳ್ಳತನ: ಚೆಕ್ಸ್ ಅಂಗಿ ತೊಟ್ಟು ಬೈಕ್ ಸವಾರಿ ಮಾಡಿದ ಕಳ್ಳನಾರು?

ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಕಣ್ಗಾವಲಿನ ಕೊರತೆ:ಹೆಚ್ಚುತ್ತಿರುವ ಅಪರಾಧ

ಅಂಕೋಲಾ: ಯುವಕನೋರ್ವ ತೆಲುಗು ಚಲನ ಚಿತ್ರವೊಂದನ್ನು ವೀಕ್ಷಿಸಿ ಸಿನಿಮಾ ಮಂದಿರದಿಂದ ಕೆಳಗಿಳಿದು ಹೊರ ಬರುವಷ್ಟರಲ್ಲಿ, ಆತ ಚಲನ ಚಿತ್ರ ಮಂದಿರದ ಆವರಣದಲ್ಲಿ ನಿಲ್ಲಿಸಿಟ್ಟ ಬೈಕ್ ಒಂದನ್ನು ಕಳ್ಳರಾರೋ ಕದ್ದು ಪರಾರಿಯಾಗಿದ್ದಾರೆ ಎನ್ನಲಾದ ಘಟನೆ ಭಾನುವಾರ ಸಂಜೆ ಅಂಕೋಲಾ ಪಟ್ಟಣದಲ್ಲಿ ನಡೆದಿದೆ. ಸಾಮಾಜಿಕ ಕಾರ್ಯಕರ್ತ ಮತ್ತು ಹಿಂದೂ ಪರ ಸಂಘಟನೆಯೊಂದರ ಪ್ರಮುಖ,ಪಟ್ಟಣದ ಚಲನ ಚಿತ್ರ ಮಂದಿರದ ಅವರಣದಲ್ಲಿ ತನ್ನ ಪಲ್ಸರ್ 220 ಬೈಕನ್ನು ನಿಲ್ಲಿಸಿಟ್ಟು, ಗೆಳೆಯನೊಂದಿಗೆ ತೆಲಗು ಚಲನ ಚಿತ್ರ ವೀಕ್ಷಣೆಗೆ ತೆರಳಿದ್ದ.

ಸಾಯಂಕಾಲ 4 ರಿಂದ 6-45 ರ ಒಳಗಿನ ಈ ಸಮಯದಲ್ಲಿ ಆತನ ಕೆಂಪು – ಕಪ್ಪು ಬಣ್ಣದ ಬೈಕ್ ನ್ನು ಯಾರೋ ಕಳ್ಳರು ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಫಿಲ್ಮ್ ಮುಗಿದ ನಂತರ ಯುವಕ ಮನೆಗೆ ತೆರಳಲು ತಾನು ಬೈಕ್ ನಿಲ್ಲಿಸಿಟ್ಟ ಜಾಗಕ್ಕೆ ಬಂದಾಗ, ಅಲ್ಲಿ ಬೈಕ್ ಇರದೇ ಗಾಬರಿಗೊಂಡು , ತನ್ನ ಸ್ನೇಹಿತರೊಂದಿಗೆ ಅಕ್ಕ ಪಕ್ಕ ಎಲ್ಲ ಕಡೆ ಬೈಕಿಗಾಗಿ ಹುಡುಕಾಡಿದ್ದಾನೆ. ಆದರೆ ತನ್ನ ಬೈಕ್ ಸಿಗದೇ ನಿರಾಶೆಗೊಂಡ ಯುವಕ ಪೊಲೀಸರಿಗೂ ಮಾಹಿತಿ ನೀಡಿದ್ದಾನೆ ಎನ್ನಲಾಗಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನದ ಮತ್ತೊಂದು ಪರರಣ ದಾಖಲಾಗುವ ಸಾಧ್ಯತೆ ಇದ್ದು,ಈ ಕುರಿತಂತೆ ಪೊಲೀಸರಿಂದ ಅಧಿಕೃತ ಮತ್ತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.ಚಲನಚಿತ್ರ ಮಂದಿರದ ಹೊರ ಆವರಣದಲ್ಲಿ ಅಲ್ಲಲ್ಲಿ 2-3 ಸಿ ಸಿ ಕ್ಯಾಮರಾಗಳು ಮೇಲ್ನೋಟಕ್ಕೆ ಕಂಡುಬರುತ್ತವೆಯಾದರೂ, ಅವು ಸುಸ್ಥಿತಿಯಲ್ಲಿ ಇದ್ದಂತೆ ಕಾಣುತ್ತಿಲ್ಲ.

ಇದರಿಂದ ಬೈಕ್ ನ್ನು ಯಾರು ಎಷ್ಟು ಹೊತ್ತಿಗೆ ಒಯ್ದರು ಎನ್ನುವ ಕುರಿತು ತನಿಖೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಆದರೆ ಅಂಕೋಲಾ ಪಟ್ಟಣದ ಕಣಕಣೇಶ್ವರ ದೇವಸ್ಥಾನದ ಕಡೆಯಿಂದ ಅಜ್ಜಿಕಟ್ಟಾ ಮಾರ್ಗವಾಗಿ ಕಾರವಾರ ಕಡೆ ಸಾಗುವ ಮುಖ್ಯರಸ್ತೆಯ ಅಕ್ಕಪಕ್ಕಗಳಲ್ಲಿ ಇರುವ ಕೆಲ ಅಂಗಡಿ ಮತ್ತಿತರೆಡೆ ಅಳವಡಿಸಿರುವ ಕ್ಯಾಮರಾಗಳಲ್ಲಿ , ಸಂಜೆ 6 ಗಂಟೆ ನಂತರ ಬೈಕ್ ಒಂದನ್ನು ಅತಿ ವೇಗವಾಗಿ ಅಪರಿಚಿತ ನೋರ್ವ ಚಲಾಯಿಸಿಕೊಂಡು ಹೋಗಿರುವ ದೃಶ್ಯ ಸೆರೆ ಆಗಿದೆ ಎನ್ನಲಾಗಿದೆ.

ಚೆಕ್ಸ್ ಶರ್ಟ ತೊಟ್ಟ ತೆಳ್ಳನೆ ದೇಹದ ವ್ಯಕ್ತಿಯೋರ್ವ, ಹೆಲ್ಮೆಟ್ ಧರಿಸಿ ಅಗಸೂರು ಮಾರ್ಗವಾಗಿ ಪೆಟ್ರೋಲ್ ತುಂಬಿಸಿಕೊಂಡು ಯಲ್ಲಾಪುರ – ಹುಬ್ಬಳ್ಳಿ ಮಾರ್ಗವಾಗಿ ತೆರಳಿರಬಹುದೆನ್ನಲಾದ ಕುರಿತು ಸ್ಥಳೀಯರಿಂದ ಮಾತುಗಳು ಕೇಳಿ ಬಂದತಿದ್ದು, ಹೆದ್ದಾರಿಯ ಕೆಲವೆಡೆ ಅಲ್ಲಲ್ಲಿ ಈ ದೃಶ್ಯಗಳೂ ದಾಖಲಾಗಿರುವ ಸಾಧ್ಯತೆ ಕೇಳಿ ಬಂದಿದೆ. ಕಳ್ಳತನ ನಡೆದಿದ್ದರೆ ಈಗಲಾದರೂ ಪೊಲೀಸರು ಎಚ್ಚೆತ್ತು ತನಿಖೆ ಚುರುಕುಗೊಳಿಸಿ ಕಳ್ಳರ ಪತ್ತೆಗೆ ಮುಂದಾಗುವರೇ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಂತಿದೆ.

ಕಳೆದ ಕೆಲ ದಿನಗಳ ಹಿಂದಷ್ಟೇ ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲಾದಿಂದ ಕುಮಟಾ ಸಾಗುವ ರಸ್ತೆ ಅಂಚಿನ ವಂದಿಗೆ ವ್ಯಾಪ್ತಿಯ ಅಂಗಡಿ ಮುಂದೆ ನಿಲ್ಲಿಸಿಟ್ಟಿದ್ದ ಒಂದು ಬೈಕ್, ಮತ್ತು ಅಂಕೋಲಾ ಬಸ್ ನಿಲ್ದಾಣದಲ್ಲಿ ನಿಲ್ಲಿಸಿಟ್ಟಿದ್ದ ಇನ್ನೊಂದು ಬೈಕನ್ನು ಕಳ್ಳರು ಕದ್ದೊಯ್ದ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಹೆದ್ದಾರಿ ಅಂಚಿನ ಅಂಗಡಿ ಬಳಿ ನಡೆದ ಕಳ್ಳತನ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು ಎನ್ನಲಾಗಿದ್ದು,ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ಇರದಿರುವುದರಿಂದ ಮತ್ತು ಬಸ್ ನಿಲ್ದಾಣ ಪೊಲೀಸ್ ಠಾಣೆಗೆ ಅತಿ ಹತ್ತಿರವಿರುವುದರಿಂದ ಈ ಪ್ರಕರಣ ಪೊಲೀಸರಿಗೂ ತಲೆ ನೋವಾದಂತಿತ್ತು,

ಈ ಎರಡು ಬೈಕ್ ಕಳ್ಳತನ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿರುವ ನಡುವೆಯೇ,ಪೊಲೀಸ್ ಠಾಣೆ ಮತ್ತು ಪೊಲೀಸ್ ವಸತಿ ಗೃಹದ ಅತೀ ಹತ್ತಿರವಿರುವ ಚಲನಚಿತ್ರ ಮಂದಿರದ ಆವರಣದಲ್ಲಿದ್ದ ಇನ್ನೊಂದು ಬೈಕ್ ಕಳ್ಳತನ ಆಗಿದೆ ಎನ್ನಲಾಗಿದ್ದು, ಕಳ್ಳರ ಕರಾಮತ್ತಿನಿಂದ ಪೋಲೀಸ ಇಲಾಖೆಗೂ ಮುಜುಗರವಾಗಬಹುದೇ ? ಅಥವಾ ಇಂತಹ ಕಳ್ಳತನ ಪ್ರಕರಣಗಳನ್ನು ಸವಾಲಾಗಿ ಸ್ವೀಕರಿಸಿ, ಕಳ್ಳರ ಜಾಲ ಬೇಧಿಸುವ ಮೂಲಕ ಪೋಲೀಸ್ ಇಲಾಖೆ ತನ್ನ ಸಾಮರ್ಥ್ಯ ಸಾಬೀತು ಪಡಿಸುವುದೇ ಎಂದು ನಾಗರಿಕರು ಕಾದು ನೋಡುವಂತಾಗಿದೆ..ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಪರಾಧ, ಅಪಘಾತ, ಕಳ್ಳತನ ಮತ್ತಿತರ ಪ್ರಕರಣಗಳ ತಡೆಗೆ ಇಲ್ಲವೇ ತನಿಖೆಗೆ ಅನುಕೂಲ ವಾಗುವಂತೆ ಸಿ.ಸಿ ಕ್ಯಾಮರಾ ಕಣ್ಗಾವಲಿನ ಅವಶ್ಯಕತೆ ಎದ್ದು ಕಾಣುತ್ತಿದೆ.

ದಿನಕ್ಕೆ ಹಲವಾರು ಜನ ಬಂದು ವ್ಯಾಪಾರ ವಹಿವಾಟು ನಡೆಸುವ ಖಾಸಗಿ ಸೇರಿದಂತೆ ವಾಣಿಜ್ಯ ಸ್ಥಳಗಳು, ಮಾರುಕಟ್ಟೆ ಪ್ರದೇಶ ಇತರೆ ಮುಖ್ಯ ರಸ್ತೆ ತಿರುವು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸುಸ್ಥಿತಿಯಲ್ಲಿರುವ ಸಿಸಿ ಕ್ಯಾಮರಾಗಳನ್ನು ಅಳವಡಿಸಿ,ಕ್ಯಾಮೆರಾ ಕಣ್ಗಾವಲಿನ ಮೂಲಕ ಕಾನೂನು ಪರಿಪಾಲನೆ ಮತ್ತು ನಾಗರಿಕರ ಸುರಕ್ಷತೆಗೆ ಸಂಬಂಧಿಸಿದ ಇಲಾಖೆಗಳು ಈ ಹಿಂದೆಂದಿಗಿಂತಲೂ ಉತ್ತಮ ಯೋಚನೆ ಹಾಗೂ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕಿದೆ.ಮತ್ತು ಆ ಕುರಿತು ವಿಶೇಷ ಸಭೆ ಕರೆದು ದೊಡ್ಡ ದೊಡ್ಡ ವ್ಯಾಪಾರ -ವಹಿವಾಟುದಾರರು, ಪುರಸಭೆ ಸೇರಿದಂತೆ ಇತರೆ ಇಲಾಖೆಗಳು, ಮತ್ತಿತರರ ಜೊತೆ ಚರ್ಚಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಅಂತೆಯೇ ಸಾರ್ವಜನಿಕರು ಸಹ ಕೆಲ ಮುನ್ನೆಚ್ಚರಿಕೆ ವಹಿಸುವುದು ಮತ್ತು ಇಲಾಖೆಗಳ ಜೊತೆ ಸಹಕಾರ ಮನೋಭಾವನೆಯಿಂದ ನಡೆದುಕೊಂಡು ತಾಲೂಕಿನಲ್ಲಿ ನೆಮ್ಮದಿಯ ವಾತಾವರಣ ಕಲ್ಪಿಸಲು ಕೈಜೋಡಿಸಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button