ನಕಲಿ ಮಂಗಳಮುಖಿಯರಿoದ ಕೆಟ್ಟ ಹೆಸರು: ಅಸಲಿ ಮಂಗಳಮುಖಿಯರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?

ಕಾರವಾರ: ಮಂಗಳಮುಖಿಯರ ವೇಷ ಹಾಕಿಕೊಂಡು ನಾಗರಿಕರೊಂದಿಗೆ ಅಸಭ್ಯವಾಗಿ ವರ್ತಿಸಿ ಹಣವನ್ನು ಪಡೆಯುತ್ತಿದ್ದಾರೆ ಎಂಬ ಆರೋಪ ಜಿಲ್ಲೆಯಲ್ಲಿ ಇತ್ತಿಚೆಗೆ ಜೋರಾಗಿ ಕೇಳಿಬರುತ್ತಿದೆ. ಈ ರೀತಿಯಾಗಿ ವರ್ತಿಸಿ ಕಳಂಕ ತರುವ ನಕಲಿ ಮಂಗಳಮುಖಿಯರನ್ನು ಕಂಡರೆ ತಕ್ಷಣ ಪೊಲೀಸರ ಗಮನಕ್ಕೆ ತರುವಂತಾಗಬೇಕು ಎಂದು ಅಂತರoಗ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಆಯಿಷಾ ಒತ್ತಾಯಿಸಿದರು.

ಕಾರವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿಜವಾದ ಯಾವ ಮಂಗಳಮುಖಿಯರು ನಾಗರಿಕರು ಹಣ ನೀಡದೆ ಇದ್ದಲ್ಲಿ ಕೆಟ್ಟ ವರ್ತನೆ ತೋರುವುದಿಲ್ಲ. ಮುಖಕ್ಕೆ ಮಾಸ್ಕ್ ಹಾಕಿಕೊಂಡು, ಇಲ್ಲವೆ ಅರೆಬರೆಯಾಗಿ ಮುಖ ಮುಚ್ಚಿಕೊಂಡು, ಬಣ್ಣ ಹಚ್ಚಿಕೊಂಡು ಹಣವನ್ನು ಕೇಳುವದಿಲ್ಲ. ನಾವು ಸಭ್ಯವಾಗಿ ಜನರೊಂದಿಗೆ ವರ್ತಿಸಿ ಹಣವನ್ನು ಕೇಳುತ್ತೇವೆ ಎಂದು ಹೇಳಿದರು.

ಸೋಮವಾರ ರಾತ್ರಿ ಅಂಕೋಲಾ ರೇಲ್ವೆ ನಿಲ್ದಾಣದಲ್ಲಿ ಮಂಗಳಮುಖಿ ವೇಷ ಹಾಕಿಕೊಂಡು ಪ್ರಯಾಣಿಕನನ್ನು ಚಲಿಸುತ್ತಿರುವ ರೇಲ್ವೆಯಿಂದ ಹೊರ ತಳ್ಳಲಾಗಿದೆ. ಇದು ಅತ್ಯಂತ ಕೆಟ್ಟ ಘಟನೆಯಾಗಿದ್ದು, ಈ ಕುರಿತು ಓರ್ವನನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದು, ಆದರೆ, ಹುಚ್ಚನಂತೆ ವರ್ತಿಸಿ ಪ್ರಕರಣದಿಂದ ಪಾರಾಗಿದ್ದಾನೆ. ಈ ಹಿಂದೆಯೂ ಇಂತಹದೇ ಘಟನೆ ನಡೆದಿತ್ತು. ಆಗ ನಾವೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೇವೆ. ಇದರಿಂದ ನಮಗೆ ಕೆಟ್ಟ ಹೆಸರು ಬರುತ್ತಿದೆ ಎಂದರು.

ವಿಸ್ಮಯ ನ್ಯೂಸ್, ಕಾರವಾರ

Exit mobile version