ಅಂಕೋಲಾ: ತಾಲೂಕಿನಲ್ಲಿ ಇತ್ತೀಚೆಗೆ ಬೇರೆ ಬೇರೆ ಕಡೆ ಒಟ್ಟೂ 3 ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದರೆ ಇನ್ನು ಕೆಲವೆಡೆ ಬೈಕ್ ಕಳ್ಳತನದ ವಿಫಲ ಯತ್ನ ನಡೆದಿತ್ತು. ಕಳ್ಳರ ಜಾಡು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಿನ ಕೆಲವಾಗಿತ್ತು. ರಾ.ಹೆ.66 ರ ಅಂಚಿನ ವಂದಿಗೆ ವ್ಯಾಪ್ತಿಯ ಅಂಗಡಿ ಒಂದರ ಮುಂದೆ ನಿಲ್ಲಿ ಸಿಟ್ಟ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಅಂಕೋಲಾ ಪೊಲೀಸರು, ಆತನು ಕದ್ದ ಬೈಕ್ ನ್ನು ವಶಪಡಿಸಿಕೊಂಡಿದ್ದು ಇನ್ನೋರ್ವ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಂಬದಕೋಣ ಬೋಳಂಬಳ್ಳಿ ನಿವಾಸಿ ರಂಜಿತ್ ರಾಮಚಂದ್ರ ಪೂಜಾರಿ (23) ಬಂಧಿತ ಆರೋಪಿಯಾಗಿದ್ದು ಇನ್ನೋರ್ವ ಆರೋಪಿತನಿಗಾಗಿ ಶೋಧ ಮುಂದುವರಿದಿದೆ. ಆರೋಪಿಗಳು ಜುಲೈ 30 ರಂದು ಬೆಳಗಿನ ಜಾವ ವಂದಿಗೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ಪಕ್ಕದ ಅಂಗಡಿಯೊಂದರ ಎದುರು ನಿಲ್ಲಿಸಿಟ್ಟ ವಂದಿಗೆ ನಿವಾಸಿ ರಾಜೇಶ ಶಿವಾನಂದ ಶೆಟ್ಟಿ ಎನ್ನುವವರಿಗೆ ಸೇರಿದ್ದ ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್ ಕಳ್ಳತನ ಮಾಡಿದ್ದು ಈ ಕುರಿತು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿತ್ತು.
ಕಳ್ಳತನದ ದೃಶ್ಯಾವಳಿಗಳು ಅಲ್ಲಿನ ಸಿ.ಸಿ ಕ್ಯಾಮರದಲ್ಲಿ ದಾಖಲಾಗಿತ್ತು ಎನ್ನಲಾಗಿದ್ದು, ಪ್ರಕರಣದ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠ ವಿಷ್ಣುವರ್ಧನ್ ಅವರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ, ಡಿ.ವೈ.ಎಸ್. ಪಿ ವೆಲಂಟನ್ ಡಿಸೋಜ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ನೇತೃತ್ವದಲ್ಲಿ ಪಿ.ಎಸ್. ಐ ಗಳಾದ ಜಯಶ್ರೀ ಪ್ರಭಾಕರ್, ಉದ್ದಪ್ಪ ಧರೆಪ್ಪನವರ್ ಸಿಬ್ಬಂದಿಗಳಾದ ವೆಂಕಟ್ರಮಣ ನಾಯ್ಕ, ಶ್ರೀಕಾಂತ ಕಟಬರ್, ಮನೋಜ .ಡಿ ಒಳಗೊಂಡ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಅಂಕೋಲಾ ಪೊಲೀಸರ ಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ ವಿಷ್ಣುವರ್ಧನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪೋಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದಲೂ ಮೆಚ್ಚುಗೆ ಮಾತುಗಳು ಕೇಳಿ ಬಂದಿದ್ದು, ಪೋಲೀಸರು ಇತರೆ ಕಳ್ಳತನ ಪ್ರಕರಣಗಳ ಬಗ್ಗೆಯೂ ಇನ್ನಷ್ಟು ಚುರುಕಿನ ತನಿಖೆ ಕೈಗೊಂಡು, ಕಳ್ಳರಿಗೆ ಕೈ ಕೋಳ ತೊಡಿಸುವಂತಾಗಲಿ ಎನ್ನುವ ಪ್ರಜ್ಞಾವಂತರ ಅನಿಸಿಕೆಯಾಗಿದೆ.
ವಿಸ್ಮಯ ನ್ಯೂಸ ವಿಲಾಸ ನಾಯಕ ಅಂಕೋಲಾ