Big News
Trending

ಧಾರೇಶ್ವರದ ಧಾರಾನಾಥನಿಗೆ ವಿಶೇಷವಾದ ಲಕ್ಷ ಬಿಲ್ವಾರ್ಚನೆ ಸೇವೆ

ಕುಮಟಾ: ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕುಮಟಾದ ಧಾರೇಶ್ವರದ ಶ್ರೀ ಧಾರಾನಾಥ ದೇವಾಲಯದಲ್ಲಿ ಗೋಕರ್ಣದ ಹರಿಹರೇಶ್ವರ ವೇದ ವಿದ್ಯಾಪೀಠದ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಶಾಕಲಾ ಋತ್ ಸಂಹಿತಾ ಮಹಾಯಾಗ ಸೇರಿದಂತೆ ಧಾರಾನಾಥನಿಗೆ ವಿಶೇಷವಾದ ಲಕ್ಷ ಬಿಲ್ವಾರ್ಚನೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ವೇದಾಧ್ಯಯನದ ಮಂತ್ರಗಳನ್ನು ಪುಸ್ತಕವನ್ನು ನೋಡದೇ ಕಂಠಸ್ಥವಾಗಿ ಹೇಳಿದ ವೇದ ಪಾಠಶಾಲೆಯ 3 ವಿದ್ಯಾರ್ಥಿಗಳಿಗೆ ಪಣಿರಾಜ ಗೋಪಿ ಪ್ರಶಸ್ತಿ ನೀಡಿ ಹಾಗೂ ಮಂತ್ರ ಪಠಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲಾಯಿತು.

ಈ ವೇಳೆ ವೇದಮೂರ್ತಿ ಉದಯ ಗಣಪತಿ ಮಯ್ಯಾರ್ ಅವರು ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿ, ಇದು ಋಗ್ವೇದ ಸಂಹಿತಾ ಯಾಗವಾಗಿದ್ದು, 8 ದಿನಗಳಲ್ಲಿ 10,552 ಮಂತ್ರಗಳನ್ನು ಹವನ ಮಾಡಿದ್ದೆವೆ. ಜೊತೆಗೆ ಚತುರ್ವೇದ ಪಾರಾಯಣ, ಪದಪಾರಾಯಣಗಳನ್ನು ಮಾಡಿದ್ದೆವೆ. ಈ ರಾಷ್ಟç, ರಾಜ್ಯ ಹಾಗೂ ಊರಿಗೆ ಒಳಿತಾಗಬೇಕೆಂಬ ಸದುದ್ಧೇಶದಿಂದ ಈ ಒಂದು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಧಾರಾನಾಥ ದೇವಾಲಯದ ಅರ್ಚಕರಾದ ರಾಮಚಂದ್ರ ಅಡಿ ಅವರು ಮಾತನಾಡಿ, ಗೋಕರ್ಣದ ಹರಿಹರೇಶ್ವರ ವೇದ ವಿದ್ಯಾಪೀಠದ ವತಿಯಿಂದ ಧಾರೇಶ್ವರದ ಧಾರಾನಾಥ ದೇವಾಲಯದಲ್ಲಿ ಶಾಕಲಾ ಋತ್ ಸಂಹಿತಾ ಮಹಾಯಾಗ ನಡೆದು ಇಂದು ಸಂಪನ್ನಗೊoಡಿದೆ. ಲೋಕ ಕಲ್ಯಾಣಾರ್ಥವಾಗಿ ಅನೇಕ ವರ್ಷಗಳಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗಿದ್ದು, ಚತುರ್ವೇದದ ಪಾರಾಯಣ, ಋಗ್ವೇದದ ಪದಾರ್ಚನೆ ಸೇರಿದಂತೆ ವಿಶೇಷವಾಗಿ ಧಾರಾನಾಥನಿಗೆ ಲಕ್ಷ ಬಿಲ್ವಾರ್ಚನೆಯನ್ನು ಹಮ್ಮಿಕೊಳ್ಳಲಾಗಿತ್ತು ಎಂದು ವಿವರಣೆ ನೀಡಿದರು. ಗೋಕರ್ಣದ ಹರಿಹರೇಶ್ವರ ವೇದ ವಿದ್ಯಾಪೀಠದ ಪ್ರಮುಖರು, ಶ್ರೀ ಧಾರಾನಾಥ ದೇವಾಲಯದ ಪ್ರಮುಖರು ಸೇರಿದಂತೆ ವೈಧಿಕರು, ವೇದ ಪಾಠಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ

Back to top button