ಅಂಕೋಲಾ: ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ,ಮುಖ್ಯಾಧ್ಯಾಪಕಿಯಾಗಿ ನಿವೃತ್ತರಾಗಿದ್ದ ಬಾಸಗೋಡಿನ ತಿಮ್ಮಕ್ಕ ಗೋವಿಂದ ನಾಯಕ (74 ) ವಿಧಿವಶರಾಗಿದ್ದಾರೆ. ಮುಂಡಗೋಡ ತಾಲೂಕಿನ ನಂದಿಕಟ್ಟ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಪ್ರಾರಂಭಿಸಿದ್ದ ತಿಮ್ಮಕ್ಕ ಇವರು, ನಂತರ ಕುಮಟಾ ತಾಲೂಕಿನ ತೊರ್ಕೆಯಲ್ಲಿ ಸುಧೀರ್ಘಾವಧಿ ಸೇವೆ ಸಲ್ಲಿಸಿ,ಶಾಲೆಯ 150ನೇ (ಶತಮಾನೋತ್ತರ ಸುವರ್ಣ ಮಹೋತ್ಸವ ) ಆಚರಣೆಯ ಶುಭ ಸಂದರ್ಭದಲ್ಲಿ ಅಲ್ಲಿನ ನಾಗರಿಕರಿಂದ ವಿಶೇಷ ಗೌರವಕ್ಕೆ ಪಾತ್ರರಾಗಿದ್ದರು.
ಕುಮಟಾ ತಾಲೂಕಿನ ಕಿಮಾನಿ ಮತ್ತು ಅಂಕೋಲಾ ತಾಲೂಕಿನ ಮಂಜುಗುಣಿಯಲ್ಲಿಯೂ ಶಿಕ್ಷಕಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದ ಇವರು ರಾಮನಗುಳಿ ಶಾಲೆಯ ಮುಖ್ಯಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಂತರ ಅಲ್ಲಿಯೇ ನಿವೃತ್ತರಾಗಿದ್ದರು. ಸೇವಾವಧಿಯುದ್ಧಕ್ಕೂ ತಮ್ಮ ಸರಳ ನಜ್ಜನಿಕೆ ಮೂಲಕ ಸಾವಿರಾರು ವಿದ್ಯಾರ್ಥಿಗಳ ಪಾಲಿನ ಆದರ್ಶ ಶಿಕ್ಷಕಿಯಾಗಿ, ತಾಯಿಯಾಗಿ ಶೈಕ್ಷಣಿಕ ಕಾಳಜಿ ತೋರಿ , ಪ್ರೋತ್ಸಾಹಿಸಿ, ಹಲವರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ದಾರಿ ದೀಪವಾಗಿದ್ದರು.
ಆದರೆ ತಮ್ಮ ವೈಯಕ್ತಿಕ ಹಾಗೂ ಸಾಂಸಾರಿಕ ಬದುಕಿನ ಹಲವು ಸಂಕಷ್ಟಗಳಿಂದ ಎದೆಗುಂದದೇ, ಬದುಕಿನ ಹಲವು ಅನಿರೀಕ್ಷಿತ ಸವಾಲುಗಳನ್ನು ಎದುರಿಸುತ್ತಾ, ಸಂಸಾರದ ಜವಾಬ್ದಾರಿ ನಿಭಾಯಿಸಿದ ಇವರು, ನಿವೃತ್ತಿ ನಂತರ ಬಾಸಗೋಡ ಊರಿನಲ್ಲಿ ಸ್ವಂತ ಸೂರು ಕಟ್ಟಿಕೊಂಡು ತನ್ನ ಮಗಳೊಂದಿಗೆ ಅಲ್ಲಿಯೇ ನೆಲೆಸಿ, ಸುತ್ತ ಮುತ್ತಲಿನ ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ಬಾಳಿ ಬದುಕಿದ್ದರು. ನಿವೃತ್ತಿ ನಂತರವೂ ಸದಾ ಚಟುವಟಿಕೆಯಿಂದ ಇರುತ್ತಿದ್ದ ಇವರು, ಕೃಷಿ ಹಾಗೂ ತರಕಾರಿ ಬೆಳೆ ಬೆಳೆಯುವ ಮೂಲಕ ಇತರರಿಗೂ ಮಾದರಿಯಾಗಿದ್ದರು.
ತಮ್ಮ ಸರಳ ನಡೆ ನುಡಿ, ಅತ್ಯಂತ ಶಿಸ್ತು ಬದ್ಧ ಜೀವನ ಹಾಗೂ ಸ್ವಚ್ಛತೆಯ ಮೂಲಕ ಸ್ವಾಭೀಮಾನೀ ಬದುಕು ಕಟ್ಟಿಕೊಂಡಿದ್ದ ಇವರಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಆರೋಗ್ಯದ ಏರು ಪೇರಿನಿಂದಾಗಿ, ಪಕ್ಕದ ಜಿಲ್ಲೆಯ ಖಾಸಗೀ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ, ದುರ್ದೈವವಶಾತ್ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು. ಮೃತ ದೇಹವನ್ನು ಬಾಸಗೋಡದ ಮನೆಗೆ ಸಾಗಿಸಿ ಅಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು.
ಕುಟುಂಬಸ್ಥರು, ಬಂಧು – ಬಾಂಧವರು, ಕುಟುಂಬದ ಆಪ್ತರು, ಹಿತೈಷಿಗಳು, ಸುತ್ತ ಮುತ್ತಲ ಹಳ್ಳಿಗಳ ಕೆಲ ಪ್ರಮುಖರು, ಇತರೆ ಸಾರ್ವಜನಿಕರು ಹಾಗೂ ಬಾಸಗೋಡ ಊರ ಹಿರಿ-ಕಿರಿಯ ನಾಗರಿಕರು, ತಲಗೇರಿ ಗ್ರಾಮದ ಹಲವರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು. ನಂತರ ನಡುಬೇಣದ ಸ್ಮಶಾನ ಭೂಮಿಯಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮೃತರ ಅಂತ್ಯಕ್ರಿಯೆ ( Funeral) ನಡೆಸಲಾಯಿತು.
ತನ್ನ ತಾಯಿ ಕಳೆದು ಕೊಂಡ ಅತೀವ ದುಃಖ ಹಾಗೂ ಶೋಕದ ನಡುವೆಯೂ, ಖಾಸಗಿ ಹಣಕಾಸು ಸಂಸ್ಥೆಯ ವ್ಯವಸ್ಥಾಪಕಿಯಾಗಿರುವ ವೀಣಾ ನಾಯಕ, ಮಗನ ಸ್ಥಾನದಲ್ಲಿ ನಿಂತು ತನ್ನ ತಾಯಿಯ ಚಿತೆಗೆ ಅಗ್ನಿ ಸ್ಪರ್ಶ ( Funeral) ಮಾಡಿದ್ದು, ಈ ಅಪರೂಪದ ಘಟನೆಗೆ ಸಾಕ್ಷಿಯಾದ ಹಲವರು ಕಂಬನಿ ಮಿಡಿದರು. ಮಗಳು ತನ್ನ ತಾಯಿಯ ಅಂತ್ಯ ಕ್ರಿಯೆ ನೆರವೇರಿಸಲು ಕುಟುಂಬಸ್ಥರು ಮತ್ತು ಬಾಸಗೋಡ ಗ್ರಾಮಸ್ಥರು ಸಹಕರಿಸಿದರು. ಇತ್ತೀಚೆಗಷ್ಟೇ ಇದೇ ಊರಿನ ಇನ್ನೋರ್ವ ವ್ಯಕ್ತಿ ಮೃತಪಟ್ಟಾಗ ಅವರ ಮಗಳೂ ತನ್ನ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದನ್ನು ಸ್ಮರಿಸಬಹುದಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ