Important
Trending

ರಸ್ತೆ ಮಧ್ಯದ ಡಿವೈಡರ್ & ದೀಪದ ಕಂಬಕ್ಕೆ ಬೈಕ್ ಡಿಕ್ಕಿ: ಇಬ್ಬರು ಗಂಭೀರ

ಅಂಕೋಲಾ: ಯುವಕರೀರ್ವರು ತಮ್ಮ ಬೈಕನ್ನು ರಸ್ತೆ ಡಿವೈಡರ್ ಮತ್ತು ದೀಪದ ಕಂಬಕ್ಕೆ ಗುದ್ದಿಕೊಂಡ ಕಾರಣ ಬೈಕ್ ಸವಾರ ಮತ್ತು ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ಕಾರವಾರ ರಸ್ತೆ ವಾಜಂತ್ರಿ ಕಟ್ಟೆಯಿಂದ ಅಂಕೋಲಾ ಕಡೆಗೆ ಬರುವ ದಾರಿಮಧ್ಯೆ ಬಳಿ ಸಂಭವಿಸಿದೆ. KA 30 W 9907 ನೋಂದಣಿ ಸಂಖ್ಯೆ ಯ ಹೀರೋ ಸ್ಪ್ಲೆಂಡರ್ ಬೈಕ್ ಅದಾವುದೋ ಕಾರಣದಿಂದ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಗೆ ಬಡಿದಿದ್ದಲ್ಲದೇ , ಡಿವೈಡರ್ ಬಳಿ ಅಳವಡಿಸಿದ್ದ ದೀಪದ ಕಂಬಕ್ಕೆ ಡಿಕ್ಕಿ ಪಡಿಸಿಕೊಂಡು ಸ್ಥಳದಲ್ಲೇ ಸಿಡಿದು ಬಿದ್ದಿದ್ದಾರೆ. ಅಪಘಾತದ ತೀವೃತೆಗೆ ಬೈಕಿನ ಮುಂಭಾಗ ತೀವೃ ಜಖಂ ಗೊಂಡಿದ್ದು, ಬೈಕ್ ಸವಾರ ಮತ್ತು ಹಿಂಬದಿ ಸವಾರರ ತಲೆ ಮತ್ತು ಕೈಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಇಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಂತೆ ಕಂಡು ಬಂದಿದೆ.

ಡಾ ಸಂಜು ನಾಯಕ, ಶ್ರೀಧರ ಬಾಲಕೃಷ್ಣ ನಾಯ್ಕ ಮತ್ತಿತರರು ಗಾಯಾಳುಗಳನ್ನು ಸ್ಥಳೀಯರ ಹಾಗೂ ದಾರಿಹೋಕರ ಸಹಕಾರದಿಂದ ಗೂಡ್ಸ ರಿಕ್ಷಾ ವಾಹನದಲ್ಲಿ ತಾಲೂಕಾ ಆಸ್ಪತ್ರೆಗೆ ಸಾಗಿಸಲು ನೆರವಾಗುವ ಮೂಲಕ ಮಾನವೀಯತೆ ಮರೆದಿದ್ದಾರೆ. ಓರ್ವ ಗಾಯಾಳುವಿನ ಸ್ಥಿತಿ ಚಿಂತಾಜನಕ ಎನ್ನಲಾಗಿದೆ. ಸಂಚಾರಿ ಪಿ.ಎಸ್. ಐ ಸುನೀಲ ಹುಲ್ಗೊಳ್ಳಿ ಮತ್ತು ಸಿಬ್ಬಂದಿಗಳು, 112 ತುರ್ತು ವಾಹನ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕಾನೂನು ಕ್ರಮ ಮುಂದುವರೆಸಿದ್ದಾರೆ.

ಗಾಯಾಳುಗಳನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗೊಳಪಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ವಾಹನ ನೊಂದಣಿ ಸಂಖ್ಯೆ ಆಧರಿಸಿ ಗಾಯಾಳುಗಳು ಹಿಲ್ಲೂರು ಮೂಲದವರು ಎಂದು ಹೇಳಲಾಗುತ್ತಿದ್ದು , ರಕ್ತ ಸಿಕ್ತವಾದ ಮತ್ತು ಉಬ್ಬಿದ ಮುಖ ಚಹರೆ ಗುರುತಿಸಲು ಕಷ್ಟ ಸಾಧ್ಯವಾಗಿದ್ದು ಅಪಘಾತಕ್ಕೊಳಗಾದ ಯುವಕರಾರು ಎನ್ನುವ ಪ್ರಶ್ನೆ ಮತ್ತು ಅಪಘಾತಕ್ಕೆ ಕಾರಣಗಳೇನಿರಬಹುದು ಎಂಬ ಕುರಿತು ಪೊಲೀಸರಿಂದಲೇ ನಿಖರ ಮತ್ತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ ವಿಲಾಸ ನಾಯಕ ಅಂಕೋಲಾ

Back to top button