Focus News
Trending

Attack on lawyers: ವಕೀಲರ ಮೇಲೆ ಹೆಚ್ಚುತ್ತಿರುವ ಹಲ್ಲೆ ಪ್ರಕರಣ: ವಕೀಲರ ಸಂಘದಿಂದ ಮುಖ್ಯಮಂತ್ರಿ & ಗೃಹಸಚಿವರಿಗೆ ಮನವಿ

ಅಂಕೋಲಾ: ಕಕ್ಷಿದಾರರ ಪ್ರತಿನಿಧಿಯಾಗಿ ಕೆಲಸ ಮಾಡುವ ವಕೀಲರ ಮೇಲೆ ಹಲ್ಲೆ ಪ್ರಕರಣಗಳು ( Attack on lawyers) ಹೆಚ್ಚುತ್ತಿರುವುದನ್ನು ಖಂಡಿಸಿ ಅಂಕೋಲಾ ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಭಾಗ ನೇತೃತ್ವದಲ್ಲಿ ತಹಶೀಲ್ಧಾರರ ಮೂಲಕ ಮುಖ್ಯ ಮಂತ್ರಿಗಳಿಗೆ ಮತ್ತು ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಇತ್ತೀಚೆಗೆ ಭಟ್ಕಳದಲ್ಲಿ ವಕೀಲ ಗುರುದಾಸ ಮೊಗೇರ ಎನ್ನುವವರ ಮೇಲೆ ಮಂಜುನಾಥ ರಾಮಾ ಮೊಗೇರ ಎಂಬಾತ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿದ್ದಲ್ಲದೇ, ಇತ್ತೀಚೆಗೆ ಹಳಿಯಾಳದ ವಕೀಲರೊಬ್ಬರ ಮೇಲೆ ನಡೆದ ಹಲ್ಲೆ ( Attack on lawyers) ಘಟನೆ, ಈ ಹಿಂದೆ ದಾಂಡೇಲಿಯಲ್ಲಿ ವಕೀಲ ಅಜಿತ ನಾಯಕ ಹತ್ಯೆಯಾದ ಕಹಿ ಘಟನೆ ನೆನಪಿಸಿಕೊಂಡು , ಮುಂದೆ ಎಲ್ಲಿಯೂ ಇಂತಹ ದುರ್ಘಟನೆ ಸಂಭವಿಸದಂತೆ, ವಕೀಲರ ಸಂರಕ್ಷಣಾ ನಿಯಮವನ್ನು ಶೀಘ್ರದಲ್ಲಿ ಜಾರಿಗೆ ತರುವ ಮೂಲಕ ವಕೀಲರಿಗೆ ರಕ್ಷಣೆ ನೀಡಬೇಕು, ಈ ದಿಶೆಯಲ್ಲಿ ಕಾಯ್ದೆ ತಿದ್ದುಪಡಿ ಮಾಡಲು ಕ್ರಮ ಕೈಗೊಳ್ಳುವಂತೆ ಮುಖ್ಯ ಮಂತ್ರಿಗಳು, ಗೃಹ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾ ನ್ಯಾಯಾಧೀಶರಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಹಿಂದೆ ದಾಂಡೇಲಿಯಲ್ಲಿ ವಕೀಲರೊಬ್ಬರ ಕೊಲೆ ನಡೆದಿರುವ ಕುರಿತು ಸಭೆಯಲ್ಲಿ ಕಳವಳ ವ್ಯಕ್ತಪಡಿಸಿ ವಕೀಲರ ಸುರಕ್ಷತೆ ದೃಷ್ಟಿಯಿಂದ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಂಘದ ಅಧ್ಯಕ್ಷ ಕಾರ್ಯದರ್ಶಿಗಳಿಗೆ ಸಭೆಯಲ್ಲಿ ಅಧಿಕಾರ ನೀಡಲಾಯಿತು. ನಂತರ ತಹಶೀಲ್ಧಾರರ ಕಾರ್ಯಾಲಯಕ್ಕೆ ತೆರಳಿದ ವಕೀಲರು ತಹಶೀಲ್ಧಾರರ ಮೂಲಕ ಮನವಿ ಅರ್ಪಿಸಿ ರಕ್ಷಣೆ ನೀಡುವಂತೆ ಆಗ್ರಹಿಸಿದರು.

ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಭಾಗ್ ಮನವಿ ಓದಿದರು. ನೋಟರಿ ಸಂಘದ ಜಿಲ್ಲಾಧ್ಯಕ್ಷ, ನಾಗಾನಂದ ಬಂಟ, ತಾಲೂಕಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರಾದ ಉಮೇಶ ನಾಯ್ಕ, ನಿತ್ಯಾನಂದ ಕವರಿ, ಗಜಾನನ ನಾಯ್ಕ, ಗುರು ನಾಯ್ಕ, ಬಿ ಟಿ ನಾಯಕ, ಆರ್ ಟಿ ಗೌಡ,ಮಮತಾ ಕೆರೆಮನೆ, ಪ್ರತಿಭಾ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ತಹಶೀಲ್ದಾರ ಅಶೋಕ ಭಟ್ಟ ಮನವಿ ಸ್ವೀಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button