Important
Trending

House Theft: ಸಹೋದರಿ ಮನೆಗೆ ಹೋಗಿ ಬೆಳಿಗ್ಗೆ ವಾಪಸ್ಸಾಗುವಷ್ಟರಲ್ಲಿ ನಿವೃತ್ತ ಶಿಕ್ಷಕಿ ಮನೆಗಳ್ಳತನ

ನಗದು - ಚಿನ್ನಾಭರಣ, ಅಮೂಲ್ಯ ಕಾಗದ ಪತ್ರಗಳಿದ್ದ ಬ್ಯಾಗ್ ಕದ್ದೊಯ್ದ ಕಳ್ಳರಾರು ?

ಅಂಕೋಲಾ : ತಾಲೂಕಿನ ಬಾಸಗೋಡ ಹೋಬಳಿಯ ಕೋಗ್ರೆ ಗ್ರಾಮದಲ್ಲಿ, ಮುಖ್ಯ ರಸ್ತೆ ಅಂಚಿಗಿರುವ ನಿವೃತ್ತ ಶಿಕ್ಷಕಿಯೋರ್ವರ ಮನೆಯೊಂದು ಶನಿವಾರ ಸಂಜೆಯಿಂದ ರವಿವಾರ ನಸುಕಿನ ಜಾವದ ಒಳಗೆ ( House Theft) ಕಳ್ಳತನವಾಗಿದೆ. ಶಾಂತಿ ಕೃಷ್ಣ ನಾಯಕ ಎನ್ನುವವರು ಮನೆಯಲ್ಲಿಲ್ಲದ ವೇಳೆ ಈ ಕಳ್ಳತನ ಕೃತ್ಯ ನಡೆಸಲಾಗಿದ್ದು, ಮುಂಬದಿ ಬಾಗಿಲ ಬೀಗ ಮುರಿದು ಒಳ ನುಗ್ಗಿದ ಕಳ್ಳರು, ಎರಡು ಪ್ರತ್ಯೇಕ ರೂಮುಗಳಲ್ಲಿದ್ದ ನಗದು ಮತ್ತು ಆಭರಣಕ್ಕೆ ತಡಕಾಡಿದಂತಿದ್ದು, ಬೀರು ಹಾಗೂ ಕಪಾಟಗಳಲ್ಲಿದ್ದ ವಸ್ತ್ರ ಮತ್ತಿತರ ಸಾಮಾಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.

ಈ ವೇಳೆ ಕಳ್ಳರು ಸುಮಾರು 40 ಸಾವಿರಕ್ಕೂ ಹೆಚ್ಚಿನ ನಗದು, ಅಲ್ಪ ಪ್ರಮಾಣದ ಬಂಗಾರ (ಕಿವಿಯೋಲೆ ) ಅಭರಣ, ಹಾಗೂ ಬ್ಯಾಂಕ್ ಮತ್ತಿತರ ಅಮೂಲ್ಯ ದಾಖಲೆಗಳುಳ್ಳ ಕಾಗದ ಪತ್ರ ಇರುವ ಬ್ಯಾಗ್ ಕದ್ದೊಯ್ದಿದ್ದಾರೆ ಎನ್ನಲಾಗಿದ್ದು, ಪೊಲೀಸ್ ದೂರು ದಾಖಲಾದ ಬಳಿಕವಷ್ಟೇ ನಿಖರ ಮಾಹಿತಿ ಲಭ್ಯವಾಗಬೇಕಿದೆ. ಇತ್ತೀಚೆಗೆ ನಿಧನರಾಗಿದ್ದ ತನ್ನ ಬಾಸಗೋಡದ ಸಹೋದರಿ ಮನೆಗೆ ಶನಿವಾರ ಸಾಯಂಕಾಲದ ವೇಳೆ ಹೋಗಿ ರಾತ್ರಿ ಅಲ್ಲಿಯೇ ತಂಗಿದ್ದ ಶಾಂತಿ ನಾಯಕ, ರವಿವಾರ ಬೆಳಿಗ್ಗೆ ಎದ್ದು ತನ್ನ ಕೋಗ್ರೆಯ ಮನೆಗೆ ವಾಪಸ್ಸಾಗುವಷ್ಟರಲ್ಲಿ, ಅದಾರೋ ಕಳ್ಳರು ಮನೆ ಬಾಗಿಲು ಮುರಿದು ಕಳ್ಳತನ ( House Theft) ಮಾಡಿರುವುದು ಗಮನಕ್ಕೆ ಬಂದು ಕ್ಷಣ ಕಾಲ ಗಾಬರಿಗೊಂಡಿದ್ದಾರೆ.

ಬಳಿಕ ಹರೀಶ ನಾಯಕ ಮತ್ತಿತರ ಸ್ಥಳೀಯರ ಮೂಲಕ ಅಂಕೋಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.ಅಂಕೋಲಾದ ನೂತನ ಪಿಎಸ್ಐ ಸುಹಾಸ ಆರ್, ಪಿಎಸ್ಐ ,ಜಯಶ್ರೀ ಪಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಪರೀಶೀಲನೆ ನಡೆಸಿದರಲ್ಲದೇ , ಮಾಹಿತಿ ಕಲೆಹಾಕಿ,ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರ ತಂಡ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳ್ಳತನದ ಘಟನೆಯ ಕುರಿತಂತೆ ಪೊಲೀಸ್ ಇಲಾಖೆಯಿಂದ ಅಧಿಕೃತ ಮತ್ತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಕಳ್ಳತನದ ಹಿಂದೆ ಸ್ಥಳೀಯರ ಕೈವಾಡ ಇದೆಯೇ ? ಅಥವಾ ಹೊರಗಿನವರೇ ಎಂಬ ಕುರಿತು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಬಾಸಗೋಡ, ಸೂರ್ವೆ ಮತ್ತಿತರ ಭಾಗಗಳಲ್ಲಿ ಇತ್ತೀಚೆಗೆ ದನಗಳ್ಳತನ ಪ್ರಕರಣಗಳು ನಡೆದಿವೆ ಎನ್ನಲಾಗಿದ್ದು, ವಕೀಲ ನಾಗರಾಜ್ ನಾಯಕ ನೇತೃತ್ವದಲ್ಲಿ ತುರ್ತು ಸಭೆ ನಡೆಸಿದ ಸ್ಥಳೀಯ ಪ್ರಮುಖರು, ಈ ಕುರಿತು ಪೋಲೀಸ್ ಇಲಾಖೆಗೆ ಮಾಹಿತಿ ನೀಡಿ,ಸ್ಥಳೀಯರ ಸಹಕಾರದಲ್ಲಿ ರಾತ್ರಿಗಾವಲು ಮತ್ತಿತರ ಸುರಕ್ಷತಾ ಕ್ರಮ ಕೈಗೊಳ್ಳಲು ಮುಂದಾಗಲಿದ್ದಾರೆ ಎನ್ನಲಾಗಿದೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೈಕ್ ಮತ್ತಿತರ ಕಳ್ಳತನ ಪ್ರಕರಣಗಳಲ್ಲಿ,ಕಳ್ಳತನವಾದ ನಂತರ ಪೊಲೀಸರಿಗೆ ದೂರು ನೀಡುವುದು ಸರಿಯಾದ ಕ್ರಮವೇ ಆದರೂ ಸಹ, ಕಳ್ಳತನ ತಡೆಯಲು ಸಾರ್ವಜನಿಕರು ತಮ್ಮ ಬೈಕ್ ಹ್ಯಾಂಡ್ ಲಾಕ್ ಮಾಡುವುದು, ಮನೆ ಬಿಟ್ಟು ಎಲ್ಲಿಯಾರರೂ ಹೋಗುವಾಗ ಅಕ್ಕ ಪಕ್ಕದ ಮನೆಯವರಿಗೆ, ಸಂಬಂಧಿಗಳಿಗೆ, ಪೊಲೀಸರಿಗೆ ತಿಳಿಸುವುದು, ಅಮೂಲ್ಯ ವಸ್ತುಗಳನ್ನು ಸುರಕ್ಷಿತವಾಗಿಡುವುದು, ಸಿ ಸಿ ಕ್ಯಾಮರಾ ಕಣ್ಗಾವಲು ಅಳವಡಿಸಿಕೊಳ್ಳುವುದು, ಅಪರಿಚಿತ ಇಲ್ಲವೇ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ 112 ನಂಬರಿಗೆ ಕರೆಮಾಡಿ ತುರ್ತು ವಾಹನ ಸಿಬ್ಬಂದಿಗಳ ಗಮನಕ್ಕೆ ತರುವುದು ಮತ್ತಿತರ ಸುರಕ್ಷಿತ ಹಾಗೂ ಮುಂಜಾಗೃತೆ ಕ್ರಮ ವಹಿಸಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button