ಶಂಕುಸ್ಥಾಪನೆಯಾಗಿ ಆರು ವರ್ಷ,ಉದ್ಘಾಟನೆಯಾಗಿ ಒಂದುವರೆ ವರ್ಷದ ಬಳಿಕ ಅಳವಡಿಸಿದ ಪುರಸಭೆಯ ನಾಮಫಲಕ ?
ಧೂಳಿನ ಕೋಣೆಯಿಂದ ಹೊರತೆಗೆದು ನಾಮಫಲಕ ಅಳವಡಿಸಿದ ಅಧಿಕಾರಿಗಳು
ಅಂಕೋಲಾ: ಸತೀಶ ಸೈಲ್ ಅವರು ಮೊದಲ ಅವಧಿಯಲ್ಲಿ ಶಾಸಕರಾಗಿದ್ದ ವೇಳೆ ವಿಶೇಷ ಮುತ್ತುವರ್ಜಿಯಿಂದ ಮಂಜೂರಿ ಮಾಡಿಸಿದ್ದ ಅಂಕೋಲಾ ಪುರಸಭೆಯ ನೂತನ ಕಟ್ಟಡದ ಶಂಕುಸ್ಥಾಪನೆನ್ನು ಅಂದೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು, ಕಾರವಾರಕ್ಕೆ ಭೇಟಿ ನೀಡಿ ( 2017ರ ಡಿಸೆಂಬರ್ 6 ರಂದು ) ಇತರೆ ವಿವಿಧ ಕಾಮಗಾರಿಗೆ ಚಾಲನೆ ನೀಡುವ ಸಂದರ್ಭದಲ್ಲಿ ,ಅಂಕೋಲಾ ಪುರಸಭೆಯ ನೂತನ ಕಟ್ಟಡದ ಶಂಕುಸ್ಥಾಪನೆಯನ್ನೂ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಅದಾದ ಬಳಿಕ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೊಸ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದಲ್ಲದೇ, ಪುರಸಭೆ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಂಡು, ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಸ್ಥಳೀಯ ಶಾಸಕರಾದ ರೂಪಾಲಿ ನಾಯ್ಕ ಮತ್ತಿತರರು (2022 ರ ಮಾರ್ಚ್ 05 ರಂದು ) ಉದ್ಘಾಟಿಸಿದ್ದರು.
ಆದರೆ ರಾಜಕೀಯ ಮೇಲಾಟ ಇಲ್ಲವೇ ಇನ್ನಿತರೇ ಕಾರಣಗಳಿಂದ ನೂತನ ಪುರಸಭೆ ಕಟ್ಟಡದ ಬಳಿ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಫಲಕಗಳು ನಂತರ ಹೊರ ನೋಟಕ್ಕೆ ಕಾಣ ಸಿಗದೇ ಎಲ್ಲಿಯೋ ಮೂಲೆ ಸೇರುವಂತಾಗಿತ್ತು. ಕಟ್ಟಡ ಉದ್ಘಾಟನೆಗೊಂಡು ವರ್ಷ ಕಳೆದರೂ ನಾಮ ಪಲಕ ಅಳವಡಿಸದಿರುವ ಕುರಿತು ಪುರಸಭೆ ಮಾಜಿ ಉಪಾಧ್ಯಕ್ಷೆ ಮತ್ತು ಹಾಲಿ ಸದಸ್ಯೆಯಾಗಿರುವ ರೇಖಾ ಡಿ ಗಾಂವಕರ ಇವರು, ಆಡಳಿತ ವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ,ಕುಮಟಾ ಉಪ ವಿಭಾಗದ ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ನಿಯಮಾನುಸಾರ ಪರಿಶೀಲಿಸಿ, ನಾಮಪಲಕ ಅಳವಡಿಸುವ ಕುರಿತು ಸೂಕ್ತ ಕ್ರಮ ಕೈಗೊಂಡು ವರದಿ ನೀಡುವಂತೆ ಸಹಾಯಕ ಆಯುಕ್ತರು ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನಾ ಪತ್ರ ರವಾನಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಪುರಸಭೆ ಅಧಿಕಾರಿಗಳು,ಪುರಸಭೆಯ ನೂತನ ಕಟ್ಟಡ ಉದ್ಘಾಟನೆಗೊಂಡು ಒಂದುವರೆ ವರ್ಷ ಕಳೆದ ನಂತರ, ಅದೆಲ್ಲಿಯೋ ಧೂಳು ತಿನ್ನುತ್ತಾ ಬಿದ್ದಿದ್ದ ನಾಮ ಫಲಕಗಳನ್ನು ಹೊರ ತರಿಸಿ, ಪುರಸಭೆ ಎದುರು ಧ್ವಜ ಕಂಬದ ಪಕ್ಕದ ಪ್ರದೇಶದಲ್ಲಿ ನಿಲ್ಲಿಸಿ,ಸಿಮೆಂಟ್ ಕಾಂಕ್ರೀಟ್ ಹಾಕಿ ಭದ್ರಪಡಿಸಿ ಕೊನೆಗೂ ಜವಾಬ್ದಾರಿ ನಿಭಾಯಿಸಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಮತ್ತು ಸತೀಶ ಸೈಲ್ ಶಾಸಕರಾಗಿದ್ದ ಕಾಲಾವಧಿಯಲ್ಲಿಯೇ ಅಥವಾ ಕಟ್ಟಡದ ಉದ್ಘಾಟನಾ ಸಮಯದಲ್ಲಿಯಾದರೂ ಅಳವಡಿಸಲೇಬೇಕಿದ್ದ ನಾಮಫಲಕ ಸುಮಾರು ಆರು ವರ್ಷಗಳ ಬಳಿಕ ಮತ್ತೊಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಹಾಗೂ ಸತೀಶ ಸೈಲ್ 2 ನೇ ಬಾರಿ ಶಾಸಕರಾಗಿ ಆಯ್ಕೆಗೊಂಡ ನಂತರವೇ ಅಳವಡಿಸುವಂತಾಗಿರುವುದು, ಅವರ ಅಭಿಮಾನಿಗಳು ಮತ್ತು ಪಕ್ಷದ ಕೆಲ ಕಾರ್ಯಕರ್ತರು ರಾಜಕೀಯ ಯೋಗ – ಸುಯೋಗದ ಕುರಿತು ಮಾತನಾಡಿಕೊಳ್ಳುವಂತಾಗಿದೆ.
ಈ ಹಿಂದೆಯೂ ನಾಮಫಲಕ ಅಳವಡಿಕೆ ವಿಚಾರದಲ್ಲಿ ಕೆಲವರು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದು,ಅಂದಿನ ಮುಖ್ಯಾಧಿಕಾರಿಗಳು
ಶಿಲಾನ್ಯಾಸ ಮತ್ತು ಉದ್ಘಾಟನಾ ಸಮಾರಂಭದ ನಾಮಪಲಕಗಳನ್ನು ಕೆಲವು ದಿನಗಳಲ್ಲಿ ಅಳವಡಿಸುವುದಾಗಿ ಸಮಜಾಯಿಷಿ ನೀಡಿದ್ದರಾದರೂ,.
ಮತ್ತೆ ಬಂದ ರಾಜ್ಯ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಈ ಹಿಂದಿನ ಮುಖ್ಯಾಧಿಕಾರಿಗಳು ವರ್ಗಾವಣೆಗೊಂಡು, ಅವರ ಸ್ಥಾನದಲ್ಲಿ ಹೊಸಬರು ಅಧಿಕಾರವಹಿಸಿಕೊಂಡಿದ್ದರು. ನಾಮಪಲಕದ ವಿಷಯ ಇತ್ತೀಚೆಗೆ ನೂತನ ಮುಖ್ಯಾಧಿಕಾರಿಗಳ ಗಮನಕ್ಕೆ ಬರುವಂತಾಗಿ, ಮೇಲಾಧಿಕಾರಿಗಳ ಸೂಚನೆ ಮೇರೆಗೆ ಸೂಕ್ತ ಕ್ರಮ ಕೈಗೊಂಡು, ಸದ್ಯಕ್ಕೆ ನಾಮಫಲಕದ ವಿಚಾರ ಸರಿಪಡಿಸಿದಂತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ