ಅಂಕೋಲಾ : ಪಿ.ಎಂ ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕ ತೆಂಕಣಕೇರಿ ನಿವಾಸಿ,ಗೋಪಾಲಕೃಷ್ಣ ಬಿ ಶೇಟ್ ವಿಧಿವಶರಾಗಿದ್ದಾರೆ. ತಮ್ಮ ಆತ್ಮೀಯ ವಲಯದಲ್ಲಿ ಜಿ. ಬಿ ಶೇಟ್ ಎಂದೇ ಪರಿಚಿತರಾಗಿದ್ದ ಇವರು, ದಿನಕರ ದೇಸಾಯಿಯವರು ಕಟ್ಟಿ ಬೆಳೆಸಿದ ಜಿಲ್ಲೆಯ ಪ್ರತಿಷ್ಠಿತ ಕೆನರಾ ವೆಲ್ ಫೇರ್ ಟ್ರಸ್ಟಿನ ಪಿ.ಎಂ ಪ್ರೌಢ ಶಾಲೆಯಲ್ಲಿ ಸಹಶಿಕ್ಷಕರಾಗ, ನಂತರ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮೂರು ದಶಕಗಳಿಗೂ ಹೆಚ್ಚಿನ ಕಾಲ ಕಾರವಾರ , ಹೊನ್ನಾವರ ಮತ್ತಿತರೆಡೆ ಸುದೀರ್ಘ ಸೇವೆ ಸಲ್ಲಿಸಿ ಅನುಭವೀ ಶಿಕ್ಷಕರಾಗಿ,ಗಣಿತ, ಭೂಗೋಳ, ಸಮಾಜ ವಿಜ್ಞಾನಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಪಾಠ ಮಾಡುತ್ತಿದ್ದ ಇವರು ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದರು.ತಮ್ಮ ಮಿತ ಭಾಷೆ ಹಾಗೂ ನಡೆ ನುಡಿಗಳಿಂದ ಇವರದು ಗಂಭೀರ ವಕ್ತಿತ್ವದಂತೆ ಕಂಡು ಬಂದರೂ, ಅಷ್ಟೇ ಮೃದು ಹೃದಯೀಯಾಗಿ ತಮ್ಮ ಸರಳ ಸಜ್ಜನಿಕೆ ಮೂಲಕ ಹಾಗೂ ಉಡುಗೆ ತೊಡುಗೆ ಹಾಗೂ ಶಿಸ್ತು ಮತ್ತು ಅಚ್ಚುಕಟ್ಟಿನ ಜೀವನದ ಮೂಲಕ ಗುರುತಿಸಿಕೊಂಡಿದ್ದರು ಶಿಕ್ಷಕ ವೃತ್ತಿ ಹೊರತಾಗಿ ಉತ್ತಮ ಚಿತ್ರಕಲಾ ಕಾರರಾಗಿದ್ದರು.
ಇತ್ತೀಚೆಗೆ ಕಾಣಿಸಿಕೊಂಡಿದ್ದ ವಯೋ ಸಹಜ ಖಾಯಿಲೆಯಿಂದ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದ ಇವರು, ಆಗಸ್ಟ್ 29 ರ ಮಂಗಳವಾರ ಮದ್ಯಾಹ್ನ ತೆಂಕಣಕೇರಿಯ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದು, ಮೃತರ ಅಂತ್ಯಕ್ರಿಯೆಯನ್ನು ಆಗಸ್ಟ್ 30 ರ ಬುಧವಾರ ಬೆಳಿಗ್ಗೆ ನೆರವೇರಿಸಲಾಗುವುದೆಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.
ಮೃತರು, ಪತ್ನಿ , ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರೂ ಹಾಗೂ ಅಳಿಯಂದಿರು ಮತ್ತು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ತೊರೆದಿದ್ದಾರೆ. ಶಿಕ್ಷಕರ ದಿನಾಚರಣೆ ಇನ್ನೇನು ಹತ್ತಿರ ಬರುತ್ತಿದೆ ಎನ್ನುವಾಗ ಹಿರಿಯ ಚೇತನದಂತಿದ್ದ ಶಿಕ್ಷಕರೊಬ್ಬರು ವಿಧಿವಶರಾಗಿರುವುದಕ್ಕೆ ಶಾಸಕ ಸತೀಶ್ ಸೈಲ್ ತೀವ್ರ ಸಂತಾಪ ವ್ಯಕ್ತಪಡಿಸಿ, ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ, ಅವರ ಕುಟುಂಬ ವರ್ಗಕ್ಕೆ ಶ್ರೀ ದೇವರು ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
,ಕೆನರಾ ವೆಲ್ ಫೆರ್ ಟ್ರಸ್ಟ್ ನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು , ಹಳೆಯ ವಿದ್ಯಾರ್ಥಿಗಳು,ತಾಲೂಕಿನ ಹಾಗೂ ಜಿಲ್ಲೆಯ ವಿವಿಧ ಗಣ್ಯರು,ಸಂಘ ಸಂಸ್ಥೆಗಳ ಪ್ರಮುಖರು,ಊರ ನಾಗರಿಕರು ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ .
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ